ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಪ್ರಕಟಿಸುವ ಮೀಸಲು ಪಟ್ಟಿ ಕಾಯುವಿಕೆ ಪಟ್ಟಿಯಲ್ಲ: ಜಿತೇಂದ್ರ ಸಿಂಗ್‌

Last Updated 11 ಫೆಬ್ರುವರಿ 2021, 10:58 IST
ಅಕ್ಷರ ಗಾತ್ರ

ನವದೆಹಲಿ: ‘ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ಬಿಡುಗಡೆಗೊಳಿಸುವ ಮೀಸಲು ಪಟ್ಟಿಯು ಕಾಯುವಿಕೆಯ (ವೇಟಿಂಗ್‌) ಪಟ್ಟಿಯಲ್ಲ, ಇದೊಂದು ಸಹಜ ಪ್ರಕ್ರಿಯೆಯಷ್ಟೇ’ ಎಂದು ಕೇಂದ್ರ ಸಿಬ್ಬಂದಿ ಖಾತೆ ಸಚಿವ ಜಿತೇಂದ್ರ ಸಿಂಗ್‌ ಗುರುವಾರ ತಿಳಿಸಿದ್ದಾರೆ.

‘ನಾಗರಿಕ ಸೇವೆಗಳ ಪರೀಕ್ಷೆ ಫಲಿತಾಂಶದ ಬಳಿಕ ಯುಪಿಎಸ್‌ಸಿ ಮೀಸಲು ಪಟ್ಟಿಯನ್ನು ಬಿಡುಗಡೆಗೊಳಿಸುತ್ತದೆ. ಈ ವ್ಯವಸ್ಥೆಯು 2003ರಿಂದ ಆರಂಭವಾಯಿತು. ಈ ವ್ಯವಸ್ಥೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಈ ವ್ಯವಸ್ಥೆಯನ್ನು ಎತ್ತಿ ಹಿಡಿದು 2010ರಲ್ಲಿ ಆದೇಶ ನೀಡಿತು’ ಎಂದು ರಾಜ್ಯಸಭೆಯಲ್ಲಿ ತಿಳಿಸಿದರು.

‘ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು ವಿವಿಧ ಇಲಾಖೆಗಳಿಗೆ ನಿಯೋಜಿಸಲು ಶಿಫಾರಸು ಮಾಡಲಾಗುತ್ತದೆ. ಒಟ್ಟು ಖಾಲಿ ಹುದ್ದೆಗಳನ್ನು ಸಹ ಈ ಸಂದರ್ಭದಲ್ಲಿ ಪರಿಗಣಿಸಲಾಗುತ್ತದೆ. ಮೊದಲ ಹಂತದಲ್ಲಿ ಮೆರಿಟ್‌ ಅನ್ವಯ ವಿವಿಧ ವರ್ಗಗಳ ಅಭ್ಯರ್ಥಿಗಳನ್ನು ನಿಯೋಜಿಸಲಾಗುತ್ತದೆ’ ಎಂದು ವಿವರಿಸಿದ್ದಾರೆ.

‘ಯುಪಿಎಸ್‌ಸಿ ರಹಸ್ಯವಾಗಿ ಮೀಸಲು ಪಟ್ಟಿಯನ್ನು ಸಹ ಸಿದ್ಧಪಡಿಸುತ್ತದೆ. ಈ ಪಟ್ಟಿಯಲ್ಲಿ ಸಾಮಾನ್ಯ ಮತ್ತು ಮೀಸಲಾತಿ ಪಡೆದ ಅಭ್ಯರ್ಥಿಗಳ ವಿವರ ಇರುತ್ತದೆ. ಮೊದಲ ಹಂತದಲ್ಲಿ ವಿವಿಧ ಸೇವೆಗಳಿಗೆ ಅಭ್ಯರ್ಥಿಗಳನ್ನು ನಿಯೋಜಿಸಿದ ನಂತರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಕೋರಿಕೆಯಂತೆ ಮತ್ತೆ ಮೀಸಲು ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಹೆಸರುಗಳನ್ನು ನೇಮಕಕ್ಕೆ ಶಿಫಾರಸು ಮಾಡಲಾಗುತ್ತದೆ’ ಎಂದು ವಿವರಿಸಿದ್ದಾರೆ.

ಈ ಬಗ್ಗೆ 2019ರ ಪರೀಕ್ಷೆ ಫಲಿತಾಂಶದ ಉದಾರಣೆ ಸಮೇತ ವಿವರಗಳನ್ನು ಪ್ರಸ್ತಾಪಿಸಿ ಉತ್ತರ ನೀಡಿರುವ ಸಚಿವರು, ‘ಯುಪಿಎಸ್‌ಸಿ ಕಳೆದ ವರ್ಷ ಆಗಸ್ಟ್‌ 4ರಂದು ಫಲಿತಾಂಶ ಪ್ರಕಟಿಸಿತ್ತು. ಇದರಲ್ಲಿ 829 ಅಭ್ಯರ್ಥಿಗಳು ಯಶಸ್ವಿಯಾಗಿದ್ದರು. ನಂತರ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕೋರಿಕೆ ಮೇರೆಗೆ ಯುಪಿಎಸ್‌ಸಿ ಈ ವರ್ಷ ಜನವರಿ 4ರಂದು ಮತ್ತೆ 89 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಈ ಅಭ್ಯರ್ಥಿಗಳು ಮೀಸಲು ಪಟ್ಟಿಯಲ್ಲಿದ್ದರು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT