ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪ್ರತಿಭಟನೆ: ಟ್ವೀಟ್‌ ಬೆಂಬಲಕ್ಕೆ ಕೇಂದ್ರ ಕಿಡಿ

ಪ್ರತಿಭಟನೆ ಪರ ಟ್ವೀಟ್‌ ಮಾಡಿದ ರಿಹಾನಾ, ಗ್ರೇಟಾ: ಸತ್ಯಾಂಶ ಪರಿಶೀಲಿಸಿ ಎಂದ ಸರ್ಕಾರ
Last Updated 4 ಫೆಬ್ರುವರಿ 2021, 1:16 IST
ಅಕ್ಷರ ಗಾತ್ರ

ನವದೆಹಲಿ:ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಟ್ವೀಟ್‌ ಮೂಲಕ ಬೆಂಬಲ ವ್ಯಕ್ತಪಡಿಸಿದ ಅಂತರರಾಷ್ಟ್ರೀಯ ಮಟ್ಟದ ಖ್ಯಾತನಾಮರ ವಿರುದ್ಧ ಕೇಂದ್ರ ಸರ್ಕಾರವು ಹರಿಹಾಯ್ದಿದೆ.

ಕೃಷಿ ಕಾಯ್ದೆಗಳ ವಿರುದ್ಧ ಅಂತರರಾಷ್ಟ್ರೀಯ ಬೆಂಬಲ ಕ್ರೋಡೀಕರಿಸಲು ಕೆಲವು ಸ್ಥಾಪಿತ ಹಿತಾಸಕ್ತಿಗಳು ಯತ್ನಿಸುತ್ತಿವೆ ಎಂದು ಕೇಂದ್ರ ಸರ್ಕಾರ ಬುಧವಾರ ಆರೋಪಿಸಿದೆ. ಪ್ರಸಿದ್ಧ ಪಾಪ್‌ ತಾರೆ ರಿಯಾನಾ ಮತ್ತು ಸ್ವೀಡನ್‌ನ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್‌ ಅವರಂತಹ ಅಂತರರಾಷ್ಟ್ರೀಯ ಮಟ್ಟದ ಖ್ಯಾತ ವ್ಯಕ್ತಿಗಳು ರೈತರ ಪ್ರತಿಭಟನೆ ಬೆಂಬಲಿಸಿ ಟ್ವೀಟ್‌ ಮಾಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

‘ಇಂತಹ ವಿಚಾರಗಳಲ್ಲಿ ಪ್ರತಿಕ್ರಿಯೆ ನೀಡುವ ಮುನ್ನ ಸತ್ಯಾಂಶ ಏನು ಎಂಬುದನ್ನು ಪರಿಶೀಲಿಸಬೇಕು. ವಿಚಾರದ ಬಗ್ಗೆ ಸರಿಯಾದ ಗ್ರಹಿಕೆ ರೂಪಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಉದ್ವೇಗಗೊಳಿಸುವ ಹ್ಯಾಷ್‌ಟ್ಯಾಗ್‌ ಮೂಲಕ ಪ್ರತಿಕ್ರಿಯೆ ನೀಡುವ ಪ್ರಲೋಭನೆಗೆ ಖ್ಯಾತ ವ್ಯಕ್ತಿಗಳು ಒಳಗಾದರೆ, ಆ ಪ್ರತಿಕ್ರಿಯೆ ನಿಖರವಾಗಿಯೂ ಇರುವುದಿಲ್ಲ, ಅದಕ್ಕೆ ಹೊಣೆಗಾರಿಕೆಯೂ ಇರುವುದಿಲ್ಲ’ ಎಂದು ವಿದೇಶಾಂಗ ಸಚಿವಾಲಯವು ಹೇಳಿಕೆ ನೀಡಿದೆ.

‘ಭಾರತದ ಒಗ್ಗಟ್ಟು’ ಮತ್ತು ‘ಅಪಪ್ರಚಾರದ ವಿರುದ್ಧ ಭಾರತ’ ಎಂಬರ್ಥದ ಎರಡು ಹ್ಯಾಷ್‌ಟ್ಯಾಗ್‌ಗಳಲ್ಲಿ ವಿದೇಶಾಂಗ ಸಚಿವಾಲಯದ ಮುಖ್ಯ ವಕ್ತಾರ ಅನುರಾಗ್‌ ಶ್ರೀವಾಸ್ತವ ಟ್ವೀಟ್‌ ಮಾಡಿದ್ದಾರೆ. ರೈತರ ಪ್ರತಿಭಟನೆಯನ್ನು ಭಾರತದ ಪ್ರಜಾಪ್ರಭುತ್ವದ ವೈಶಿಷ್ಟ್ಯ ಮತ್ತು ರಾಜಕಾರಣದ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಬಿಕ್ಕಟ್ಟು ಪರಿಹಾರಕ್ಕೆ ಸರ್ಕಾರ ಮತ್ತು ಸಂಬಂಧಪಟ್ಟ ರೈತರ ಸಂಘಟನೆಗಳು ನಡೆಸಿದ ಯತ್ನವನ್ನೂ ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ಸರ್ಕಾರ ಒತ್ತಾಯಿಸಿದೆ.

ವಾಪಸ್‌ ಪಡೆಯಬೇಕು ಎಂದು ರೈತರು ಆಗ್ರಹಿಸುತ್ತಿರುವ ಮೂರು ಕೃಷಿ ಕಾಯ್ದೆಗಳನ್ನು ಸರ್ಕಾರ ಬಲವಾಗಿ ಸಮರ್ಥಿಸಿಕೊಂಡಿದೆ. ಕಾಯ್ದೆಗಳನ್ನು ಸಂಸತ್ತಿನಲ್ಲಿ ಪೂರ್ಣವಾಗಿ ಚರ್ಚಿಸಿ ಅಂಗೀಕರಿಸಲಾಗಿದೆ. ಇವು ಕೃಷಿ ಕ್ಷೇತ್ರದ ಸುಧಾರಣೆಯ ಕಾಯ್ದೆಗಳು ಎಂದು ಹೇಳಿದೆ.ಸ್ಥಾಪಿತ ಹಿತಾಸಕ್ತಿಗಳು ತಮ್ಮ ಕಾರ್ಯಸೂಚಿಯನ್ನುಈ ಹೋರಾಟದ ಮೇಲೆ ಹೇರಲು ಪ್ರಯತ್ನಿಸಿ, ಹೋರಾಟವನ್ನು ಹಾದಿ ತಪ್ಪಿಸುತ್ತಿರುವುದು ದುರದೃಷ್ಟಕರ ಎಂದು ಸರ್ಕಾರ ಹೇಳಿದೆ.

ವಿದೇಶಾಂಗ ಸಚಿವಾಲಯದ ನಿಲುವುರಾಜಕೀಯವಾಗಿಯೂ ಪರ ವಿರೋಧ ಹೇಳಿಕೆಗಳಿಗೆ ಕಾರಣವಾಗಿದೆ. ‘ಇದು ಅತಿಯಾದ ಪ್ರತಿಕ್ರಿಯೆ. ನಾಚಿಕೆಗೇಡು. ವಿದೇಶಾಂಗ ಸಚಿವಾಲಯದ ಟ್ವಿಟರ್‌ ಖಾತೆಯನ್ನು ಬಿಜೆಪಿಯ ಮಾಹಿತಿ ತಂತ್ರಜ್ಞಾನ ಘಟಕವು ನಿರ್ವಹಿಸುತ್ತಿರುವಂತೆ ಕಾಣಿಸುತ್ತಿದೆ. ಭಾರತಕ್ಕೆ ಅಪಮಾನ ಮಾಡುವುದನ್ನು ನಿಲ್ಲಿಸಿ’ ಎಂದು ಸಿಪಿಎಂ ಹೇಳಿದೆ.

ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಕಳೆದ ಡಿಸೆಂಬರ್‌ನಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಗ್ಗೆಯೂ ಭಾರತವು ಕಟುವಾದ ಪ್ರತಿಕ್ರಿಯೆ ನೀಡಿತ್ತು.

ಟ್ವಿಟರ್‌ಗೆ ನೋಟಿಸ್‌

‘ರೈತರ ನರಮೇಧ’ (ಫಾರ್ಮರ್‌ ಜೆನೊಸೈಡ್‌) ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಪ್ರಕಟವಾದ ಟ್ವೀಟ್‌ಗಳು ಮತ್ತು ಅಂತಹ ಟ್ವಿಟರ್‌ ಖಾತೆಗಳನ್ನು ಸ್ಥಗಿತಗೊಳಿಸಬೇಕು ಎಂದು ನೀಡಿರುವ ಸೂಚನೆಯನ್ನು ಪಾಲಿಸದೇ ಇದ್ದರೆ ದಂಡನಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರವು ಟ್ವಿಟರ್‌ಗೆ ಎಚ್ಚರಿಕೆ ನೀಡಿದೆ.

‘ರೈತರ ನರಮೇಧಕ್ಕೆ ಸರ್ಕಾರ ಯೋಜನೆ ರೂಪಿಸುತ್ತಿದೆ’ ಎಂಬ ಅರ್ಥದ ಟ್ವೀಟ್‌ಗಳು ಮತ್ತು ಅಂತಹ ಟ್ವೀಟ್‌ ಮಾಡಿದ ಖಾತೆಗಳನ್ನು ಸ್ಥಗಿತಗೊಳಿಸಲು ಸರ್ಕಾರ ಸೂಚನೆ ನೀಡಿತ್ತು. ಅದರಂತೆ, ಕಿಸಾನ್‌ ಏಕತಾ ಮೋರ್ಚಾ, ಭಾರತೀಯ ಕಿಸಾನ್‌ ಯೂನಿಯನ್‌, ಎಎಪಿ ಶಾಸಕ ಜರ್ನೈಲ್‌ ಸಿಂಗ್‌, ಸಾಮಾಜಿಕ ಕಾರ್ಯಕರ್ತ ಹಂಸರಾಜ್‌ ಮೀನಾ, ನಟ ಸುಶಾಂತ್‌ ಸಿಂಗ್‌ ಮುಂತಾದವರ ಖಾತೆಗಳನ್ನು ಸ್ಥಗಿತ ಮಾಡಲಾಗಿತ್ತು. ಆದರೆ, ಈ ಸ್ಥಗಿತವನ್ನು ತಕ್ಷಣವೇ ತೆರವು ಮಾಡಲಾಗಿತ್ತು. ಹಾಗಾಗಿ, ಸರ್ಕಾರವು ಟ್ವಿಟರ್‌ಗೆ ನೋಟಿಸ್‌ ನೀಡಿದೆ.

ಸರ್ಕಾರವೇ ಉಳಿಯದು: ಟಿಕಾಯತ್‌

ವಿವಾದಾತ್ಮಕವಾದ ಮೂರು ಕಾಯ್ದೆಗಳನ್ನು ರದ್ದುಪಡಿಸದೇ ಇದ್ದರೆ ಬಿಜೆಪಿ ನೇತೃತ್ವದ ಸರ್ಕಾರವು ಮುಂದುವರಿಯುವುದೇ ಕಷ್ಟ ಎಂದು ಭಾರತೀಯ ಕಿಸಾನ್‌ ಯೂನಿಯನ್‌ ನಾಯಕ ರಾಕೇಶ್‌ ಟಿಕಾಯತ್‌ ಎಚ್ಚರಿಕೆ ನೀಡಿದ್ದಾರೆ.

‘ಮೂರು ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು. ಇಲ್ಲದೇ ಇದ್ದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರವನ್ನೇ ಕಳೆದುಕೊಳ್ಳಬಹುದು. ಈವರೆಗೆ ನಾವು ಕಾಯ್ದೆ ವಾಪಸ್‌ ಬಗ್ಗೆ ಮಾತ್ರ ಮಾತನಾಡಿದ್ದೇವೆ. ಸರ್ಕಾರವು ಎಚ್ಚರಿಕೆಯಿಂದ ಆಲಿಸಬೇಕು. ಸರ್ಕಾರವನ್ನೇ ಉರುಳಿಸಿ ಎಂದು ಯುವ ಜನರು ಕರೆ ಕೊಟ್ಟರೆ ನೀವು ಏನು ಮಾಡುವಿರಿ’ ಎಂದು ಅವರು ಪ್ರಶ್ನಿಸಿದ್ದಾರೆ.

ಹರಿಯಾಣದ ಜಿಂದ್‌ನಲ್ಲಿ ಬುಧವಾರ ನಡೆದ ರೈತರ ಮಹಾಪಂಚಾಯಿತಿಯಲ್ಲಿ ಅವರು ಮಾತನಾಡಿದರು.

ರೈತರಿಗೆ ಬೆಂಬಲ: ರಿಯಾನಾ ಜತೆಗೂಡಿದ ತಾರೆಯರು

ರಿಯಾನಾ ಅವರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ಟ್ವೀಟ್‌ ಮಾಡಿದ ಬಳಿಕ, ರೈತರ ಹೋರಾಟಕ್ಕೆ ಜಗತ್ತಿನ ವಿವಿಧೆಡೆಯಿಂದ ಬೆಂಬಲ ಹರಿದು ಬರುತ್ತಿದೆ. ಗಾಯಕರಾದ ಜೈ ಶಾನ್‌, ಡಾ. ಝ್ಯೂಸ್‌ ಮತ್ತು ನಟಿ ಮಿಯಾ ಖಲೀಫಾ ಅವರು ಕೂಡ ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ.

ಟ್ವಿಟರ್‌ನಲ್ಲಿ 10 ಕೋಟಿ ಫಾಲೋವರ್‌ಗಳನ್ನು ಹೊಂದಿರುವ ರಿಯಾನಾ ಅವರು ಮಂಗಳವಾರ ರಾತ್ರಿ ‘ರೈತರ ಪ್ರತಿಭಟನೆಗಳ ಬಗ್ಗೆ ನಾವು ಏಕೆ ಮಾತನಾಡುತ್ತಿಲ್ಲ?’ ಎಂದು ಟ್ವೀಟ್‌ ಮಾಡಿದ್ದರು. ಪ್ರತಿಭಟನೆಯ ಸ್ಥಳದಲ್ಲಿ ಇಂಟರ್‌ನೆಟ್‌ ಸ್ಥಗಿತಕ್ಕೆ ಸಂಬಂಧಿಸಿ ಸಿಎನ್‌ಎನ್‌ನಲ್ಲಿ ಪ್ರಕಟವಾದ ವರದಿಯೊಂದನ್ನು ಲಗತ್ತಿಸಿದ್ದರು.

ಅದಾದ ಬಳಿಕ, ಗ್ರೇಟಾ ಥನ್‌ಬರ್ಗ್‌ ಅವರೂ ರೈತರ ಹೋರಾಟದ ಪರವಾಗಿ ಟ್ವೀಟ್‌ ಮಾಡಿದ್ದಾರೆ. ‘ಭಾರತದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆಗೆ ನಾವೂ ಇದ್ದೇವೆ’ ಎಂದು ಅವರು ಹೇಳಿದ್ದಾರೆ.

ಹಾಲಿವುಡ್‌ ತಾರೆ ಜಾನ್‌ ಕ್ಯೂಸೆಕ್‌ ಅವರು ಕೂಡ ‘ಭಾರತದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಚರ್ಚಿಸೋಣ’ ಎಂದು ಟ್ವೀಟ್ ಮಾಡಿದ್ದಾರೆ.ಜನವರಿ 30ರಂದು ಕೂಡ ಟ್ವೀಟ್‌ ಮಾಡಿದ್ದ ಅವರು ‘ಸಿಖ್‌ ರೈತರು ಅದ್ಭುತ’ ಎಂದು ಹೇಳಿದ್ದರು.

ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಪ್ರತಿಭಟನೆ ನಡೆಯುತ್ತಿದ್ದರೂ ಮುಖ್ಯವಾಹಿನಿ ಮಾಧ್ಯಮದಲ್ಲಿ ಈ ಬಗ್ಗೆ ಬೇಕಾದಷ್ಟು ವರದಿಗಳು ಬರುತ್ತಿಲ್ಲ ಎಂದು ಜೈ ಶಾನ್‌ ಎಂದೇ ಪ್ರಸಿದ್ಧರಾಗಿರುವ ಕಮಲ್‌ಜಿತ್‌ ಸಿಂಗ್‌ ಝೂತಿ ಅವರು ಇನ್‌ಸ್ಟಾಗ್ರಾಂನಲ್ಲಿ ಹೇಳಿದ್ದಾರೆ.

ಡಾ. ಝ್ಯೂಸ್‌ ಎಂದು ಖ್ಯಾತರಾಗಿರುವ ಬ್ರಿಟಿಷ್‌ ಗಾಯಕ ಬಲ್ಜಿತ್‌ ಸಿಂಗ್‌ ಪದಂ ಅವರು ರಿಯಾನಾ ಅವರ ಟ್ವೀಟ್‌ ಅನ್ನು ಮರುಟ್ವೀಟ್‌ ಮಾಡಿದ್ದಾರೆ. ‘ಪ್ರತಿಭಟನೆಯತ್ತ ಜಗತ್ತಿನ ಗಮನ ಹರಿಯುವಂತೆ ಮಾಡಲು ನಾವು ಸಂವೇದನೆಯಿಂದ ಕೆಲಸ ಮಾಡಬೇಕಿದೆ’ ಎಂದೂ ಅವರು ಹೇಳಿದ್ದಾರೆ.

ಪ್ರತಿಭಟಿಸುತ್ತಿರುವ ರೈತರು ‘ಸಂಭಾವನೆ ಪಡೆದ ನಟರು’ ಎಂದು ಹೇಳಿದವರನ್ನು ಲೆಬನಾನ್‌–ಅಮೆರಿಕನ್‌ ನಟಿ ಮಿಯಾ ಖಲೀಫಾ ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗೆ ಹೇಳಿದವರು ಪ್ರಶಸ್ತಿ ನೀಡುವ ಸಂದರ್ಭದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರಲಿಕ್ಕಿಲ್ಲ ಎಂದಿದ್ದಾರೆ.

ರಿಯಾನಾ ಅವರ ಟ್ವೀಟ್‌ ಟ್ವಿಟರ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಲಕ್ಷಾಂತರ ಮಂದಿ ಇದನ್ನು ಮರುಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT