ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಮಾನಸಿಕ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಶೇ 40ರಷ್ಟು ಏರಿಕೆ

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್‌
Last Updated 27 ಜೂನ್ 2021, 15:31 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್ ದುರಿತ ಕಾಲದಲ್ಲಿ ಕುಟುಂಬದವರ ಜೊತೆಗೂಡಿ ಮರುಗಲು ಆಗದ ಸಂದರ್ಭ ಅಥವಾ ಏಕಾಂಗಿಯಾಗಿ ನೋವು ಸಹಿಸಲಾಗದ ಸಾಮರ್ಥ್ಯ ದೆಹಲಿಯಲ್ಲಿ ಹಲವರಿಗೆ ಖಿನ್ನತೆ, ನಿದ್ರಾಹೀನತೆ, ಆತಂಕದ ಸ್ಥಿತಿ ಸೇರಿದಂತೆ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿರುವ ಹಲವು ಆಸ್ಪತ್ರೆಗಳು, ಕ್ಲಿನಿಕ್‌ಗಳಲ್ಲಿ ಇಂತಹ ಸಮಸ್ಯೆಗಳ ರೋಗಿಗಳ ನೋಂದಣಿ ಹೆಚ್ಚುತ್ತಿದೆ. ಕೋವಿಡ್ ಎರಡನೇ ಅಲೆಯಲ್ಲಿ ದೆಹಲಿಯು ಗಂಭೀರ ಪರಿಣಾಮಕ್ಕೆ ತುತ್ತಾಗಿತ್ತು. ಆಮ್ಲಜನಕ ಕೊರತೆ, ಸಾವಿನ ಸಂಖ್ಯೆಯಲ್ಲಿ ಏರಿಕೆಯ ಚಿತ್ರಣ ಮಾನಸಿಕ ಕ್ಷೇಷೆಯನ್ನು ಹೆಚ್ಚಿಸಿತ್ತು.

ಆಸ್ಪತ್ರೆಗಳು, ಶವಾಗಾರಗಳ ಆವರಣವು ಹಲವು ದುಗುಡಗಳಿಗೆ ಸಾಕ್ಷಿಯಾಗಿದ್ದವು. ದುಃಖತಪ್ತ ಕುಟುಂಬದ ಸದಸ್ಯರು ಪಿಪಿಐ ಕಿಟ್ ಧರಿಸಿಯೇ ಕಳೆದುಹೋದ ಆಪ್ತರಿಗೆ ವಿದಾಯ ಹೇಳಲು ಶವಾಗಾರದ ಬಳಿ ಸೇರಿದ್ದರು.

ಎರಡನೇ ಅಲೆಯಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಬಹುತೇಕ ಕುಟುಂಬದ ಎಲ್ಲ ಸದಸ್ಯರು ಸೋಂಕು ಬಾಧಿತರಾಗಿದ್ದರು. ಸಾವು ಸಂಭವಿಸಿದ್ದಲ್ಲಿ ಧಾರ್ಮಿಕ ವಿಧಿ ನಡೆಸಲಾಗದ ಸ್ಥಿತಿ, ದುಃಖ ಮಡುಗಟ್ಟಲು ಕಾರಣವಾಗಿದ್ದು, ಈಗ ಮಾನಸಿಕ ಸಮಸ್ಯೆಗೆ ಕಾರಣವಾಗಿದೆ ಎನ್ನುತ್ತಾರೆ ಆರೋಗ್ಯ ಕ್ಷೇತ್ರದ ಪರಿಣತರು.

‘ನೋವು, ಐಸೋಲೇಷನ್, ಆಪ್ತರನ್ನು ಕಳೆದುಕೊಂಡಾಗಿನ ಭೀತಿ, ಆದಾಯ ನಷ್ಟ ಈ ಎಲ್ಲವೂ ಕೋವಿಡೋತ್ತರ ಸಂದರ್ಭದಲ್ಲಿ ಜನರ ಮಾನಸಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಿವೆ. ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಶೇ 30 ರಿಂದ 40ರಷ್ಟು ಹೆಚ್ಚಾಗಿದೆ’ ಎಂದು ಬಿಎಲ್‌ಕೆ ಆಸ್ಪತ್ರೆಯ ಮನಃಶಾಸ್ತ್ರ ವಿಭಾಗದ ಕನ್ಸಲ್ಟಂಟ್‌ ಮನೀಶ್‌ ಜೈನ್ ಅವರು ಭಾನುವಾರ ಹೇಳಿದರು.

ಈ ಮೊದಲೇ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದವರು ಇನ್ನೂ ಹೆಚ್ಚಿನ ಸಮಸ್ಯೆಗೆ ತುತ್ತಾಗಿದ್ದಾರೆ. ಅವರ ವರ್ತನೆಗಳಲ್ಲಿಯೂ ಸಾಕಷ್ಟು ಬದಲಾವಣೆಗಳು ಆಗಿವೆ. ಹೆಚ್ಚಿನಂಶ ಜೀವನಶೈಲಿಯ ಮೇಲಿನ ನಿರ್ಬಂಧವು ನಕಾರಾತ್ಮಕ ಬೆಳವಣಿಗೆಗೆ ಕಾರಣವಾಗಿದೆ ಎನ್ನುತ್ತಾರೆ.

ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಸಮೀರ್ ಮಲ್ಹೋತ್ರಾ ಅವರು, ಖಂಡಿತವಾಗಿ ಆಂತಕ ಮತ್ತು ಖಿನ್ನತೆಗೆ ಸಂಬಂಧಿಸಿದ ಪ್ರಕರಣಗಳು ಕೋವಿಡ್ ನಂತರದಲ್ಲಿ ಗಣನೀಯವಾಗಿ ಏರಿಕೆಯಾಗಿವೆ ಎಂದು ದನಿಗೂಡಿಸುತ್ತಾರೆ.

ಈ ಮಾನಸಿಕ ಸಮಸ್ಯೆಗಳ ವರ್ತುಲದಿಂದ ಹೊರಬರಲು ಜನರು ಅಲೊಪಥಿ ಚಿಕಿತ್ಸಾ ಕ್ರಮವಷ್ಟೇ ಅಲ್ಲ, ಹೊಮಿಯೋಪಥಿ ಚಿಕಿತ್ಸೆ ಕ್ರಮಕ್ಕೂ ಮೊರೆ ಹೋಗಿದ್ದಾರೆ.

ಸಾಮಾನ್ಯ ದಿನಗಳಲ್ಲೇ ಜನದಟ್ಟಣೆ ಇರುತ್ತಿದ್ದ ಇಲ್ಲಿನ ಡಾ. ಕಲ್ಯಾಣ್‌ ಬ್ಯಾನರ್ಜಿ ಕ್ಲಿನಿಕ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ರೋಗಿಗಳ ಸಂಖ್ಯೆಯು ಶೇ 40ರಷ್ಟು ಹೆಚ್ಚಿದೆ. ಈ ಪೈಕಿ ಹೆಚ್ಚಿನವರು ಮಾನಸಿಕ ಸಮಸ್ಯೆಗಳಿಂದ ಬಳುತ್ತಿರುವವರೇ ಆಗಿದ್ದಾರೆ.

ಹೆಚ್ಚಿನ ರೋಗಿಗಳು ಕೋವಿಡ್‌–19ನ ನೇರ ಪರಿಣಾಮಕ್ಕೆ ತುತ್ತಾದವರು ಅಥವಾ ಅವರ ಆಪ್ತರ ಪೈಕಿ ಒಬ್ಬರು ತೀವ್ರವಾಗಿ ನೊಂದಿದ್ದು, ಅದರಿಂದ ಬಾಧಿತರಾದವರೇ ಆಗಿದ್ದಾರೆ ಎಂದು ಡಾ. ಕಲ್ಯಾಣ್‌ ಬ್ಯಾನರ್ಜಿ ಅವರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT