ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಪಾಲು | ಕೇಂದ್ರಕ್ಕೆ‌ ರಾಜ್ಯದ ಒತ್ತಡ; ಕಾನೂನು ತಂಡದೊಂದಿಗೆ ಸಿಎಂ ಸಭೆ

ಕಾನೂನು ತಂಡದೊಂದಿಗೆ ಮುಖ್ಯಮಂತ್ರಿ ಸಭೆ
Last Updated 8 ಫೆಬ್ರುವರಿ 2022, 5:18 IST
ಅಕ್ಷರ ಗಾತ್ರ

ನವದೆಹಲಿ: ಆಯಾ ರಾಜ್ಯಗಳ ಪಾಲಿನ ನೀರನ್ನು ಹಂಚಿಕೆ ಮಾಡಿದ‌ ನಂತರವೇ ನದಿ ಜೋಡಣೆ‌ ಯೋಜನೆಗೆ‌ ಚಾಲನೆ‌ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರದ ‌ಮೇಲೆ ಒತ್ತಡ ಹೇರಲು ನಿರ್ಧರಿಸಿದೆ.

ಕೃಷ್ಣಾ, ಕಾವೇರಿ, ತುಂಗಭದ್ರಾ, ಮಹದಾಯಿ ನದಿ ನೀರಿನ ಬಳಕೆಗಾಗಿ ಕೈಗೆತ್ತಿಕೊಳ್ಳಲಾದ ವಿವಿಧ ಯೋಜನೆಗಳ ಸ್ಥಿತಿಗತಿ ಕುರಿತು ಚರ್ಚಿಸುವ ನಿಟ್ಟಿನಲ್ಲಿ ಮಂಗಳವಾರ ಇಲ್ಲಿನ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಅಂತರರಾಜ್ಯ ಜಲವಿವಾದ ಕಾನೂನು ತಜ್ಞರು ಹಾಗೂ ಕಾನೂನು‌ ತಂಡದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ನದಿ ಜೋಡಣೆ ಮೂಲಕ ದೊರೆಯುವ ನೀರಿನ ಪಾಲಿನಲ್ಲಿ ತಾರತಮ್ಯ ಮಾಡದೇ ಸಮರ್ಪಕವಾಗಿ ಹಂಚಿಕೆ‌ ಮಾಡುವಂತೆ ರಾಜ್ಯ ಈ ಮೊದಲೇ‌ ಮನವಿ‌ ಸಲ್ಲಿಸಿದೆ. ಇದೀಗ ಕೇಂದ್ರ ಬಜೆಟ್‌ನಲ್ಲಿ ಯೋಜನೆಯ ಪ್ರಸ್ತಾಪ ಮಾಡಿದ್ದರಿಂದ ಮತ್ತೆ ಈ ಕುರಿತು ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಸಭೆಯ ನಂತರ ಬೊಮ್ಮಾಯಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡು ಕೈಗೆತ್ತಿಕೊಂಡಿರುವ ಕಾವೇರಿ-ಗುಂಡಾರು-ವೈಗೈ ನದಿಗಳ ಜೋಡಣೆ, ಹೊಗೇನಕಲ್ ದ್ವಿತೀಯ ಯೋಜನೆ, ಭವಾನಿ ಜಲವಿದ್ಯುತ್ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸಲೂ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಕೃಷ್ಣಾ ನದಿ ನೀರಿನ ಹಂಚಿಕೆ ಸಂಬಂಧ ಆಂಧ್ರ, ತೆಲಂಗಾಣ ನಡುವೆ ಮತ್ತೆ ವಿವಾದ ಉದ್ಭವಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಸಂಬಂಧ ನಡೆಯಬೇಕಿದ್ದ ವಿಚಾರಣೆಯಿಂದ ಇಬ್ಬರು ನ್ಯಾಯಮೂರ್ತಿಗಳು ಹಿಂದಕ್ಕೆ ಸರಿದಿದ್ದಾರೆ. ಆದಷ್ಟು ಬೇಗ ಬೇರೆ ನ್ಯಾಯಮೂರ್ತಿಗಳನ್ನು ನೇಮಿಸಿ ವಿಚಾರಣೆ ಆರಂಭಿಸುವಂತೆಯೂ ರಾಜ್ಯ ಸರ್ಕಾರ‌ ಮನವಿ ಮಾಡಲಿದೆ. ರಾಜ್ಯದ ಪಾಲಿನ ಕೃಷ್ಣಾ ನೀರಿನ ಬಳಕೆಗೆ ಅಗತ್ಯವಿರುವ ಯೋಜನೆಗಳ ಜಾರಿಗೆ‌ ಅನುವು ಮಾಡಿಕೊಡುವಂತೆ ಕೇಂದ್ರಕ್ಕೂ ಮನವಿಯನ್ನೂ ಸಲ್ಲಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರವು ಈಗಾಗಲೇ ಅಧಿಸೂಚನೆ ಹೊರಡಿಸಿದೆ. ನದಿ ತಿರುವು ಕಾಮಗಾರಿ ವಿಳಂಬವಾಗಲು ಕಣಿವೆ ವ್ಯಾಪ್ತಿಯ ಗೋವಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ‌ ಸಲ್ಲಿಸಿರುವುದು‌ ಕಾರಣವಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ಕೂಡಲೇ ಮಹದಾಯಿ ತಿರುವು ಯೋಜನೆ ಸಾಕಾರಗೊಳ್ಳಲಿದೆ ಎಂದು ಅವರು ತಿಳಿಸಿದರು.

ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯದಲ್ಲಿ ಅಂದಾಜು 30 ಟಿಎಂಸಿ ಅಡಿ ಹೂಳು ತುಂಬಿಕೊಂಡಿದ್ದರಿಂದ ನವಿಲೆ ಬಳಿ ಅಷ್ಟೇ ಪ್ರಮಾಣದ ನೀರು ಸಂಗ್ರಹದ ಉದ್ದೇಶದಿಂದ ಸಮಾನಾಂತರ ಜಲಾಶಯ ನಿರ್ಮಿಸಲು ರಾಜ್ಯ ಸರ್ಕಾರ ಡಿಪಿಆರ್ ಸಿದ್ಧಪಡಿಸಿದೆ. ಈ ಸಂಬಂಧ ಕಣಿವೆ ವ್ಯಾಪ್ತಿಯ ‌ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು‌ ಎಂದು ಅವರು ಹೇಳಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಣ್ಣ ನೀರಾವರಿ ಖಾತೆ ಸಚಿವ ಜೆ.ಸಿ. ಮಾದುಸ್ವಾಮಿ, ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಸಂಸದರಾದ ಶಿವಕುಮಾರ ಉದಾಸಿ, ಡಾ.ಉಮೇಶ ಜಾಧವ್, ಹಿರಿಯ ವಕೀಲ ಮೋಹನ್ ಕಾತರಕಿ, ಅಡ್ವೋಕೇಟ್ ಜನರಲ್ ಪ್ರಭುಲಿಂಗ‌ ನಾವದಗಿ ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT