ಬುಧವಾರ, ಮೇ 25, 2022
29 °C

ಅರುಣಾಚಲ ಪ್ರದೇಶ: ಹೊಸ ರಾಜಕೀಯ ಸಮೀಕರಣಕ್ಕೆ ಅವಕಾಶವಿದೆ ಎಂದ ಆರ್‌ಜೆಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ: ‘ಅರುಣಾಚಲ ಪ್ರದೇಶದಲ್ಲಿ ಜೆಡಿಯುಗೆ ಆಗಿರುವ ಅವಮಾನಕ್ಕೆ ಪ್ರತಿಯಾಗಿ, ಆ ಪಕ್ಷವು ಬಿಜೆಪಿ ಜತೆಗಿನ ಮೈತ್ರಿಯನ್ನು ತೊರೆಯುವುದಾದರೆ ಹೊಸ ರಾಜಕೀಯ ಸಮೀಕರಣಕ್ಕೆ ಅವಕಾಶ ಇದೆ’ ಎಂಬ ಇಂಗಿತವನ್ನು ಆರ್‌ಜೆಡಿ ವ್ಯಕ್ತಪಡಿಸಿದೆ.

ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಬಹುಮತ ಇದೆ. ಆದರೂ ಜೆಡಿಯುನ ಆರು ಮಂದಿ ಶಾಸಕರು ಈಚೆಗೆ ಪಕ್ಷ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

‘ಬಿಜೆಪಿಯು ಹಳೆಯ ದ್ವೇಷ ಸಾಧನೆಗಾಗಿ ಅರುಣಾಚಲದಲ್ಲಿ ಜೆಡಿಯು ಶಾಸಕರನ್ನು ತನ್ನತ್ತ ಸೆಳೆದುಕೊಂಡಿದೆ’ ಎಂದು ಆರೋಪಿಸಿರುವ ಆರ್‌ಜೆಡಿಯ ರಾಷ್ಟ್ರೀಯ ಉಪಾಧ್ಯಕ್ಷ ಶಿವಾನಂದ ತಿವಾರಿ, ‘ಈಗ ಚೆಂಡು ಜೆಡಿಯು ಮುಖ್ಯಸ್ಥರ ಅಂಗಳದಲ್ಲಿದೆ’ ಎಂದಿದ್ದಾರೆ.

‘ಸುಮಾರು ಒಂದು ದಶಕದ ಹಿಂದೆ ಪಟ್ನಾದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ನಾಯಕರ ಜತೆಗಿನ ಔತಣಕೂಟವನ್ನು ನಿತೀಶ್‌ ಕುಮಾರ್‌ ಅವರು ರದ್ದುಪಡಿಸಿದ್ದರು. ‘ಬಿಜೆಪಿ ಜತೆಗೆ ನನಗೆ ಯಾವುದೇ ಸಮಸ್ಯೆ ಇಲ್ಲ. ಮೋದಿ ಅವರ ಕಾರಣದಿಂದ ಹಿಂಜರಿದಿದ್ದೇನೆ’ ಎಂದು ಅಂದು ನಿತೀಶ್‌ ಸ್ಪಷ್ಟಪಡಿಸಿದ್ದರೂ ಮೋದಿ ಇಂಥ ವಿಚಾರಗಳನ್ನೆಲ್ಲ ಮರೆತುಬಿಡುವ ಅಥವಾ ಕ್ಷಮಿಸುವ ವ್ಯಕ್ತಿಯಲ್ಲ. ಅರುಣಾಚಲಪ್ರದೇಶದ ಘಟನೆಗೆ ಈ ದ್ವೇಷವೇ ಕಾರಣ’ ಎಂದು ತಿವಾರಿ ಹಳೆಯ ಘಟನೆಯನ್ನು ನೆನಪಿಸಿದ್ದಾರೆ.

‘ಚುನಾವಣೆಗೂ ಮುನ್ನ ಚಿರಾಗ್‌ ಪಾಸ್ವಾನ್‌ ಅವರನ್ನು ಬೆಂಬಲಿಸಿ, ನಿತೀಶ್‌ ಅವರ ಬಲವನ್ನು ತಗ್ಗಿಸುವ ಕೆಲಸವನ್ನು ಬಿಜೆಪಿ ಯಶಸ್ವಿಯಾಗಿ ಮಾಡಿತ್ತು. ಈಗ ಜೆಡಿಯು ಶಾಸಕರನ್ನು ತನ್ನತ್ತ ಸೆಳೆಯುವ ಮೂಲಕ ಅವರನ್ನು ಅವಮಾನಿಸಿದೆ ಎಂದೂ ತಿವಾರಿ ಆರೋಪಿಸಿದ್ದಾರೆ.

‘ನಾವು ಬಿಜೆಪಿಯನ್ನು ವಿರೋಧಿಸುತ್ತಾ ಬಂದಿದ್ದೇವೆ. ಬಿಜೆಪಿ ಜತೆ ಮೈತ್ರಿಯನ್ನು ಜೆಡಿಯು ತ್ಯಜಿಸಿದರೆ ನಾವು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇಲ್ಲ’ ಎಂದು ತಿವಾರಿ ಈಚೆಗೆ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು