ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನಲ್ಲೂ ‘ಹಿಜಾಬ್‌’ ವಿವಾದ

Last Updated 20 ಫೆಬ್ರುವರಿ 2022, 0:54 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಹಿಜಾಬ್ ವಿವಾದ ಶನಿವಾರ ಪ್ರತಿಧ್ವನಿಸಿತು.

ಮಧುರೆ ಜಿಲ್ಲೆಯ ಮೇಲೂರು ಪುರಸಭೆಯ ಬೂತ್‌ನಲ್ಲಿ ಮಹಿಳೆಯರು ಹಿಜಾಬ್‌ ಧರಿಸಿಕೊಂಡು ಮತದಾನ ಮಾಡುವುದನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮತಗಟ್ಟೆ ಪ್ರತಿನಿಧಿ ವಿರೋಧಿಸಿದರು.

ಸರ್ಕಾರಿ ನೌಕರರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಬಿಜೆಪಿ ಪ್ರತಿನಿಧಿ ಗಿರಿರಾಜನ್‌ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಭಾರತ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಿಜಾಬ್‌ ಧರಿಸಿದ್ದ ಮಹಿಳೆ ಮತಗಟ್ಟೆಯೊಳಗಿದ್ದಾಗ ಬಿಜೆಪಿಯ ಮತಗಟ್ಟೆ ಪ್ರತಿನಿಧಿ ಗಿರಿರಾಜನ್‌ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದಾಗಿ 30 ನಿಮಿಷ ಕಾಲ ಮತದಾನಕ್ಕೆ ಅಡ್ಡಿ ಉಂಟಾಯಿತು. ಆಡಳಿತ ಪಕ್ಷ ಡಿಎಂಕೆ ಮತ್ತು ವಿರೋಧ ಪಕ್ಷ ಎಐಎಡಿಎಂಕೆ ಸೇರಿದಂತೆ ಎಲ್ಲ ಪಕ್ಷಗಳ ಪ್ರತಿನಿಧಿಗಳು ಮತ್ತು ಮತಗಟ್ಟೆ ಅಧಿಕಾರಿಗಳು ಗಿರಿರಾಜನ್‌ ಆಕ್ಷೇಪಿಸಿದ್ದನ್ನು ಒಪ್ಪಲಿಲ್ಲ. ತಕ್ಷಣವೇ ಮಧ್ಯಪ್ರವೇಶಿಸಿದ ಪೊಲೀಸರು ಗಿರಿರಾಜನ್‌ ಅವರನ್ನು ಮತಗಟ್ಟೆಯಿಂದ ಹೊರ ಕಳುಹಿಸಿದರು. ಬಿಜೆಪಿ ಗಿರಿರಾಜನ್‌ ಬದಲು ಮತ್ತೊಬ್ಬರನ್ನು ಪಕ್ಷದ ಮತಗಟ್ಟೆ ಪ್ರತಿನಿಧಿಯಾಗಿ ನಿಯೋಜಿಸಿತು.

ಈ ಘಟನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಚುನಾವಣಾ ಆಯುಕ್ತ ವಿ. ಪಳನಿಕುಮಾರ್‌, ‘ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಅವರ ಇಷ್ಟಾನುಸಾರ ವಸ್ತ್ರ ಧರಿಸುವ ಹಕ್ಕು ಇದೆ’.ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದೂ ಹೇಳಿದ್ದಾರೆ.

ಡಿಎಂಕೆ ಸಂಸದೆ ಕನಿಮೋಳಿ ಮತ್ತು ಶಾಸಕ ಉದಯನಿಧಿ ಸ್ಟಾಲಿನ್‌, ಬಿಜೆಪಿ ಪ್ರತಿನಿಧಿಯ ಕ್ರವವನ್ನು ತೀವ್ರವಾಗಿ ಖಂಡಿಸಿದ್ದು, ಇಂತಹವರಿಗೆ ರಾಜ್ಯದಲ್ಲಿ ಸ್ಥಾನ ಇಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT