ಸೋಮವಾರ, ಆಗಸ್ಟ್ 2, 2021
28 °C

ಆರ್‌ಎಸ್‌ಎಸ್‌ ಪ್ರಚಾರಕರ ಸಮಾವೇಶ: ಕೋವಿಡ್‌ ನಿರ್ವಹಣೆ, ಸಿದ್ಧತೆಯ ಚರ್ಚೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರಕೂಟ (ಮಧ್ಯಪ್ರದೇಶ): ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ‘ಪ್ರಚಾರಕ’ರ ನಾಲ್ಕು ದಿನಗಳ ಸಮಾವೇಶ ಶುಕ್ರವಾರ ಇಲ್ಲಿ ಆರಂಭವಾಗಿದೆ.

ಮುಂದಿನ ವರ್ಷ ಆರು ರಾಜ್ಯಗಳ ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಇನ್ನೊಂದೆಡೆ, ದೇಶದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್‌–19 ಪಿಡುಗಿನ 2ನೇ ಅಲೆಯ ನಿರ್ವಹಣೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಜನರಿಂದ ಅಸಮಾಧಾನವೂ ವ್ಯಕ್ತವಾಗಿದೆ. ಈ ವಿದ್ಯಮಾನಗಳ ನೆರಳಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್‌ನ ಈ ಸಮಾವೇಶಕ್ಕೆ ಮಹತ್ವ ಬಂದಿದೆ.

ಜುಲೈ 13ರ ವರೆಗೆ ಸಮಾವೇಶ ನಡೆಯಲಿದೆ. ಇದು ಆನ್‌ಲೈನ್‌ ಹಾಗೂ ಭೌತಿಕವಾಗಿಯೂ ನಡೆಯಲಿದೆ ಎಂದು ಆರ್‌ಎಸ್‌ಎಸ್‌ ತಿಳಿಸಿದೆ.

ಇತ್ತೀಚೆಗೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಸಂಘಟನೆಯ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು, ಮುಸ್ಲಿಮರಿಗೆ ಪಾಕಿಸ್ತಾನಕ್ಕೆ ಹೋಗುವಂತೆ ಹೇಳುವ ವ್ಯಕ್ತಿ ಹಿಂದೂ ಅಲ್ಲ ಎಂದಿದ್ದರು. ಗೋ ರಕ್ಷಣೆ ಹೆಸರಿನಲ್ಲಿ ವ್ಯಕ್ತಿಯ ಹತ್ಯೆ ಮಾಡುವವರು ಹಿಂದುತ್ವದ ವಿರೋಧಿಗಳು ಎಂದು ಹೇಳಿದ್ದು ಸಹ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಚಿತ್ರಕೂಟದಲ್ಲಿ ಆರಂಭವಾಗಿರುವ ಈ ಸಮಾವೇಶದಲ್ಲಿ ಭಾಗವತ್‌ ಅವರ ಈ ಹೇಳಿಕೆಗಳ ಕುರಿತು ವಿಸ್ತೃತ ಚರ್ಚೆ ನಡೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

‘ಪ್ರತಿ ವರ್ಷ ಪ್ರಚಾರಕರ ಸಮಾವೇಶವನ್ನು ನಡೆಸಲಾಗುತ್ತದೆ. ದೇಶದಲ್ಲಿ ಕೋವಿಡ್‌–19 ಪಿಡುಗಿನ ಕಾರಣ ಚಿತ್ರಕೂಟದಲ್ಲಿ ಕಳೆದ ವರ್ಷ ಸಮಾವೇಶ ನಡೆಯಲಿಲ್ಲ. ಈ ವರ್ಷ ಇದೇ ಊರಿನಲ್ಲಿ ನಡೆಸಲಾಗುತ್ತಿದೆ’ ಎಂದು ಆರ್‌ಎಸ್ಎಸ್‌ನ ಪ್ರಚಾರ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಸುನೀಲ್‌ ಅಂಬೇಕರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕೋವಿಡ್‌ ಪಿಡುಗಿನ ವೇಳೆ ಸಂತ್ರಸ್ತರಿಗೆ ಸಂಘದ ಸ್ವಯಂ ಸೇವಕರು ಯಾವ ರೀತಿ ಸ್ಪಂದಿಸಿದರು. ಸಂಭಾವ್ಯ 3ನೇ ಅಲೆಗೆ ಸಂಬಂಧಿಸಿ ಸಂಘಟನೆಯ ಸಿದ್ಧತೆ ಕುರಿತು ಈ ನಾಲ್ಕು ದಿನಗಳ ಸಮಾವೇಶದಲ್ಲಿ ಚರ್ಚಿಸಲಾಗುವುದು’ ಎಂದೂ ತಿಳಿಸಿದ್ದಾರೆ.

ಸಂಘಟನೆಯ ಮುಖ್ಯಸ್ಥ ಮೋಹನ್‌ ಭಾಗವತ್‌, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹಾಗೂ ಐವರು ಜಂಟಿ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಆರ್‌ಎಸ್‌ಎಸ್‌ನ 11 ಪ್ರಾಂತ್ಯಗಳ ಪ್ರಚಾರಕರು ಶುಕ್ರವಾರ ಸಂವಾದ ನಡೆಸಿದ್ದು, ಶನಿವಾರವೂ (ಜುಲೈ 10) ಇದು ಮುಂದುವರಿಯಲಿದೆ.

ಜುಲೈ 12ರಂದು 45 ಪ್ರಾಂತಗಳ ಪ್ರಚಾರಕರು ಹಾಗೂ ಸಹಪ್ರಚಾರಕರ ಸಭೆ ನಡೆಯುವುದು. ಜುಲೈ 13ರಂದು ಆರ್‌ಎಸ್‌ಎಸ್‌ನ ವಿವಿಧ ಅಂಗಸಂಸ್ಥೆಗಳ ರಾಷ್ಟ್ರೀಯ ಕಾರ್ಯದರ್ಶಿಗಳ ಸಭೆ ನಡೆಯಲಿದೆ ಎಂದೂ ಪ್ರಕಟಣೆ ತಿಳಿಸಿದೆ.

ಟ್ವಿಟರ್‌ ಜತೆ ಜಟಾಪಟಿ: ‘ಕೂ’ಗೆ ಮಣೆ
ನೂತನ ಐಟಿ ನಿಯಮಗಳಿಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮ ಟ್ವಿಟರ್‌ ಹಾಗೂ ಕೇಂದ್ರ ಸರ್ಕಾರ ನಡುವೆ ಕೆಲ ದಿನಗಳಿಂದ ಜಟಾಪಟಿ ನಡೆಯುತ್ತಿದೆ. ಈ ಬೆಳವಣಿಗೆಯ ನಡುವೆಯೇ ದೇಶೀಯ ಸಾಮಾಜಿಕ ಮಾಧ್ಯಮವಾದ ‘ಕೂ’ಗೆ  ಆರ್‌ಎಸ್‌ಎಸ್‌ ಶುಕ್ರವಾರ ಮಣೆ ಹಾಕಿದೆ.

‘ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯ ಅನೇಕ ಮುಖಂಡರು ‘ಕೂ’ ನಲ್ಲಿ ಖಾತೆ ತೆರೆದಿದ್ದು, ತನ್ನ ಆ್ಯಪ್‌ ಮೂಲಕ ಜನರೊಂದಿಗೆ ಸಂವಹನ ಆರಂಭಿಸಿದ್ದಾರೆ’ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು