ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೋರಾಟಕ್ಕೆ 6 ತಿಂಗಳು: ಮೇ 26 ಅನ್ನು ‘ಕರಾಳ ದಿನ’ವಾಗಿ ಆಚರಿಸಲು ನಿರ್ಧಾರ

Last Updated 15 ಮೇ 2021, 17:12 IST
ಅಕ್ಷರ ಗಾತ್ರ

ನವದೆಹಲಿ: ಇದೇ 26ರಂದು ಕರಾಳ ದಿನ ಆಚರಿಸಲುಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ 40 ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್‌ ಮೋರ್ಚಾ ತೀರ್ಮಾನಿಸಿದೆ. ದೆಹಲಿಯ ಗಡಿಗಳಲ್ಲಿ ರೈತರು ಪ್ರತಿಭಟನೆ ಆರಂಭಿಸಿ ಅಂದಿಗೆ ಆರು ತಿಂಗಳು ಪೂರ್ಣಗೊಳ್ಳಲಿದೆ.

ಜನರು ತಮ್ಮ ಮನೆ, ವಾಹನ ಮತ್ತು ಅಂಗಡಿಗಳಲ್ಲಿ ಕಪ್ಪು ಬಾವುಟ ಹಾರಿಸಬೇಕು ಎಂದು ರೈತ ಮುಖಂಡ ಬಲಬೀರ್‌ ಸಿಂಗ್‌ ರಾಜೇವಾಲ್‌ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಶನಿವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೇರಿ ಇದೇ 26ಕ್ಕೆ ಏಳು ವರ್ಷ ತುಂಬುತ್ತದೆ ಎಂಬುದನ್ನು ರಾಜೇವಾಲ್‌ ಉಲ್ಲೇಖಿಸಿದ್ದಾರೆ. ಕರಾಳ ದಿನದಂದು ಮೋದಿ ಅವರ ಪ್ರತಿಕೃತಿ ದಹಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂಬ ಬೇಡಿಕೆಯು ಸರ್ಕಾರದ ಕಿವಿಗೇ ಬಿದ್ದಿಲ್ಲ. ರಸಗೊಬ್ಬರ, ಡೀಸೆಲ್‌, ಪೆಟ್ರೋಲ್‌ ದರ ಏರಿಕೆಯಿಂದಾಗಿ ಕೃಷಿ ಮಾಡುವುದೇ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಸಂಘಟನೆಗಳು, ಕಾರ್ಮಿಕ ಸಂಘಗಳು, ವರ್ತಕರು ಮತ್ತು ಸಾರಿಗೆ ಕ್ಷೇತ್ರದ ಸಂಘಟನೆಗಳು ಕರಾಳ ದಿನವನ್ನು ಬೆಂಬಲಿಸಬೇಕು ಎಂದು ಅವರು ಕೋರಿದ್ದಾರೆ.

ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಲು ಪಂಜಾಬ್‌, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ‘ದೆಹಲಿ ಚಲೋ’ ನಡೆಸಿದ್ದರು. ದಾರಿಯುದ್ದಕ್ಕೂ ಪೊಲೀಸರು ರೈತರನ್ನು ತಡೆಯಲು ಯತ್ನಿಸಿದ್ದರು. ಆದರೆ ಅವೆಲ್ಲವನ್ನೂ ದಾಟಿಕೊಂಡು ಕಳೆದ ವರ್ಷ ನವೆಂಬರ್‌ 26ರಂದು ರೈತರು ದೆಹಲಿ ಗಡಿಗಳಿಗೆ ತಲುಪಿದ್ದರು.

ನಂತರದ ದಿನಗಳಲ್ಲಿ ದೆಹಲಿಯ ಟಿಕ್ರಿ, ಸಿಂಘು ಮತ್ತು ಗಾಜಿಪುರ ಗಡಿಗಳಿಗೆ ಸಾವಿರಾರು ರೈತರು ಬಂದು ಸೇರಿದ್ದರು.

ಮಿಷನ್‌ ಉತ್ತರ ಪ್ರದೇಶ, ಉತ್ತರಾಖಂಡ
ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲು ಸರ್ಕಾರದ ಮೇಲೆ ಒತ್ತಡ ಹೇರುವುದಕ್ಕಾಗಿ ‘ಮಿಷನ್‌ ಉತ್ತರ ಪ್ರದೇಶ ಮತ್ತು ಉತ್ತರಾಖಂಡ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಂಯುಕ್ತ ಕಿಸಾನ್‌ ಮೋರ್ಚಾ ನಿರ್ಧರಿಸಿದೆ.

ಈ ಎರಡು ರಾಜ್ಯಗಳು ಅಲ್ಲದೆ ದೇಶದ ಎಲ್ಲೆಡೆಯೂ ರೈತರ ರ‍್ಯಾಲಿಗಳನ್ನು ನಡೆಸಲಾಗುವುದು. ಪ್ರತಿಭಟನೆಯಲ್ಲಿ ಭಾಗವಹಿಸಿರುವ ಎಲ್ಲ ಸಂಘಟನೆಗಳೂ ರ್‍ಯಾಲಿ ನಡೆಸಲಿವೆ ಎಂದು ಮೋರ್ಚಾ ಹೇಳಿದೆ.

ಮಹಿಳಾ ಸುರಕ್ಷಾ ಸಮಿತಿ
ಮಹಿಳಾ ಸುರಕ್ಷಾ ಸಮಿತಿಗಳನ್ನು ರಚಿಸಲಾಗುವುದು. ಅದರ ಸದಸ್ಯರ ಹೆಸರನ್ನು ಎರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿದೆ. ಟಿಕ್ರಿ ಗಡಿಯಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂಬ ಆರೋಪ ಕೆಲ ದಿನಗಳ ಹಿಂದೆ ಕೇಳಿ ಬಂದಿತ್ತು. ಈ ಮಹಿಳೆಯು ಕೋವಿಡ್‌ನಿಂದಾಗಿ ಹರಿಯಾಣದ ಆಸ್ಪತ್ರೆಯಲ್ಲಿ ಮೃತಪಟ್ಟರು.

ಪ್ರತಿಭಟನೆ ನಡೆಯುತ್ತಿರುವ ಎಲ್ಲ ಗಡಿಗಳಲ್ಲಿಯೂ ಮಹಿಳಾ ಸುರಕ್ಷಾ ಸಮಿತಿ ರಚನೆಯಾಗಲಿದೆ ಎಂದು ಮೋರ್ಚಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT