ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಸರ್ಕಾರ ಉರುಳಿಸಲು ಒತ್ತಡ: ಸಂಜಯ್‌ ರಾವುತ್‌

ವರ್ಷಾ ರಾವುತ್‌ಗೆ ಇ.ಡಿ ನೋಟಿಸ್‌: ಬಿಜೆಪಿ ವಿರುದ್ಧ ಸೇನಾ ಮುಖಂಡರ ವಾಗ್ದಾಳಿ
Last Updated 28 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಮುಂಬೈ: ‘ಮಹಾವಿಕಾಸ ಅಘಾಡಿ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸುವಂತೆ ಬಿಜೆಪಿಯ ಕೆಲವು ನಾಯಕರು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ’ ಎಂದು ಶಿವಸೇನಾ ಮುಖಂಡ ಸಂಜಯ್‌ ರಾವುತ್‌ ಹೇಳಿದ್ದಾರೆ.

ಕೇಂದ್ರ ಸರ್ಕಾರವು ತನ್ನ ರಾಜಕೀಯ ಉದ್ದೇಶ ಸಾಧನೆಗಾಗಿ ಜಾರಿ ನಿರ್ದೇಶನಾಲಯ (ಇ.ಡಿ), ಸಿಬಿಐ, ಆದಾಯ ತೆರಿಗೆ ಇಲಾಖೆ ಮುಂತಾದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.

ಹಣದ ವರ್ಗಾವಣೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಡಿ.29ರಂದು ವಿಚಾರಣೆಗೆ ಹಾಜರಾಗುವಂತೆ ರಾವುತ್ ಅವರ ಪತ್ನಿ ವರ್ಷಾ ರಾವುತ್‌ ಅವರಿಗೆ ಜಾರಿ ನಿರ್ದೇಶನಾಲಯವು ನೋಟಿಸ್‌ ನೀಡಿದೆ. ಈ ಹಿನ್ನೆಲೆಯಲ್ಲಿ ರಾವುತ್‌ ಅವರು ಬಿಜೆಪಿ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

‘ರಾಜ್ಯ ಸರ್ಕಾರವನ್ನು ಅಂತಂತ್ರಗೊಳಿಸುವ ಉದ್ದೇಶದಿಂದ ನನ್ನ ಪತ್ನಿಗೆ ನೋಟಿಸ್‌ ನೀಡಲಾಗಿದೆ. ಅವರು (ಕೇಂದ್ರ ಸರ್ಕಾರ) ಎನ್‌ಸಿಪಿ ಮುಖಂಡರಾದ ಶರದ್‌ ಪವಾರ್‌ ಹಾಗೂ ಪ್ರಫುಲ್‌ ಪಟೇಲ್‌, ಶಿವಸೇನಾದ ಏಕನಾಥ ಖಡ್ಸೆ, ಪ್ರತಾಪ್ ಸರ್ನಾಯಕ್‌ ಮುಂತಾದ ಹಲವರಿಗೆ ಈ ಹಿಂದೆಯೇ ಜಾರಿ ನಿರ್ದೇಶನಾಲಯದ ಮೂಲಕ ನೋಟಿಸ್‌ ನೀಡಿದ್ದಾರೆ. ಈಗ ನನ್ನ ಪತ್ನಿಗೆ ನೋಟಿಸ್‌ ನೀಡಲಾಗಿದೆ ಎಂದರು.

ತನ್ನ ಮೆಲೆ ಒತ್ತಡ ಹೇರುತ್ತಿರುವ ನಾಯಕರ ಹೆಸರು ಬಹಿರಂಗಪಡಿಸಲು ನಿರಾಕರಿಸಿದ ರಾವುತ್‌, ‘ಕೆಲವು ಹಿರಿಯ ನಾಯಕರು ನನ್ನ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರ ಉರುಳಿಸುವ ಪ್ರಯತ್ನವನ್ನು ಅವರು ಈಗಾಗಲೇ ಆರಂಭಿಸಿದ್ದಾರೆ. ಬಿಜೆಪಿಗೆ ಬೆಂಬಲ ನೀಡಲು ಸಿದ್ಧರಿದ್ದಾರೆ ಎನ್ನಲಾದ ಎನ್‌ಸಿಪಿ ಹಾಗೂ ಶಿವಸೇನಾದ 22 ಶಾಸಕರ ಪಟ್ಟಿಯನ್ನೂ ಅವರು ತೋರಿಸಿದ್ದಾರೆ’ ಎಂದರು.

ಕೆಣಕಬೇಡಿ: ‘ನಾನು ಬಾಳಾಸಾಹೇಬ ಠಾಕ್ರೆ ಅವರ ‘ಶಿವಸೈನಿಕ’. ವಿವಿಧ ಹಗರಣಗಳನ್ನು ನಡೆಸಿರುವ ಬೆಜೆಪಿಯ 120 ನಾಯಕರ ಪಟ್ಟಿ ನನ್ನ ಬಳಿ ಇದೆ. ನನ್ನನ್ನು ಕೆಣಕಿದರೆ ನಿಮ್ಮೆಲ್ಲರ ಹಗರಣಗಳನ್ನು ಬಹಿರಂಗಪಡಿಸುತ್ತೇನೆ. ಆಗ ನೀರವ್ ಮೋದಿ, ಮಲ್ಯ ಅವರಂತೆ ಎಲ್ಲರೂ ವಿದೇಶದಲ್ಲಿ ತಲೆಮರೆಸಿಕೊಳ್ಳಬೇಕಾಗುತ್ತದೆ’ ಎಂದು ಬಿಜೆಪಿ ನಾಯಕರಿಗೆ ರಾವುತ್‌ ಎಚ್ಚರಿಕೆ ನೀಡಿದ್ದಾರೆ.

ಸಂಬಂಧವಿಲ್ಲ: ‘ಮನೆ ಖರೀದಿಗಾಗಿ ನನ್ನ ಪತ್ನಿ 12 ವರ್ಷಗಳ ಹಿಂದೆ ತನ್ನ ಸ್ನೇಹಿತರಿಂದ ಪಡೆದ ₹50 ಲಕ್ಷ ಸಾಲಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯಕ್ಕೆ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೇನೆ. ಇ.ಡಿ ಕೊಟ್ಟಿರುವ ನೋಟಿಸ್‌ನಲ್ಲಿ ಪಂಜಾಬ್‌ ಮಹಾರಾಷ್ಟ್ರ ಕೊ–ಆಪರೇಟಿವ್‌ ಬ್ಯಾಂಕ್‌ ಹಗರಣದ ಬಗ್ಗೆ ಉಲ್ಲೇಖವೇ ಇಲ್ಲ. ಹೀಗಿರುವಾಗ, ಬಿಜೆಪಿ ನಾಯಕರು ಹಗರಣದ ಆರೋಪ ಮಾಡುವುದಾದರೂ ಹೇಗೆ? ಎಂದು ರಾವುತ್‌ ಪ್ರಶ್ನಿಸಿದರು.

ಭಯ ಯಾಕೆ ಬಿಜೆಪಿ ಪ್ರಶ್ನೆ
ರಾವುತ್‌ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯು, ‘ರಾವುತ್‌ ಹಾಗೂ ಅವರ ಕುಟುಂಬದವರು ವಿಚಾರಣೆಯನ್ನು ಎದುರಿಸಲೇಬೇಕು. ಆದರೆ, ಅವರ ಚಿಂತೆಗೆ ನಿಜವಾದ ಕಾರಣವೇನು ಎಂಬುದನ್ನು ತಿಳಿಯಲು ನಾವು ಬಯಸುತ್ತೇವೆ’ ಎಂದಿದೆ.

‘ದೂರು ಅಥವಾ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದೆ ತನಿಖಾ ಸಂಸ್ಥೆಗಳು ವಿಚಾರಣೆ ಕೈಗೊಳ್ಳುವುದಿಲ್ಲ. ನೀವು ತಪ್ಪಿತಸ್ಥರಲ್ಲದಿದ್ದರೆ ಭಯಪಡುವ ಅಗತ್ಯವೇನು?’ ಎಂದು ಬಿಜೆಪಿ ಮುಖಂಡ ದೇವೇಂದ್ರ ಫಡಣವಿಸ್‌ ಪ್ರಶ್ನಿಸಿದ್ದಾರೆ. ‘ಬಿಜೆಪಿ ವಿರುದ್ಧ ರಾವುತ್‌ ಅವರು ಮಾಡಿರುವ ಆರೋಪಗಳು ಆಧಾರರಹಿತ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ ಪಾಟೀಲ್‌ ಹೇಳಿದ್ದಾರೆ.

ಮುಂಬೈಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯ ಮುಂದೆ ಶಿವಸೇನಾದ ಕಾರ್ಯಕರ್ತರು ಎನ್ನಲಾದ ಗುಂಪೊಂದು ಸೋಮವಾರ ‘ಬಿಜೆಪಿ ಮಹಾರಾಷ್ಟ್ರ ಘಟಕದ ಕಚೇರಿ’ ಎಂಬ ಬ್ಯಾನರ್‌ ಹಾಕಿದೆ. ಪಕ್ಷವು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT