ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ ನಿವಾಸ ತಲುಪಿದ ವಿ.ಕೆ. ಶಶಿಕಲಾ

Last Updated 9 ಫೆಬ್ರುವರಿ 2021, 13:01 IST
ಅಕ್ಷರ ಗಾತ್ರ

ಚೆನ್ನೈ: ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿನಿಂದ ಹೊರಟಿದ್ದ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ನಟರಾಜನ್‌ ರಸ್ತೆ ಮಾರ್ಗವಾಗಿ 23 ತಾಸು ಪ್ರಯಾಣ ಮಾಡಿ, ಇಲ್ಲಿನ ಟಿ. ನಗರದ ತಮ್ಮ ನಿವಾಸಕ್ಕೆ ಮಂಗಳವಾರ ಬೆಳಿಗ್ಗೆ 7 ಗಂಟೆಗೆ ತಲುಪಿದರು.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಆಪ್ತೆ, 65ರ ಹರೆಯದ ಶಶಿಕಲಾ ಅವರು ಭ್ರಷ್ಟಾಚಾರ ಆರೋಪದ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಶಿಕ್ಷೆ ಪೂರ್ಣಗೊಳಿಸಿ ಬಿಡುಗಡೆಯಾದಾಗ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ನಂತರ ಅವರು ಕೆಲ ದಿನಗಳು ಬೆಂಗಳೂರಿನ ದೇವನಹಳ್ಳಿಯ ರೆಸಾರ್ಟ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದರು.

ಸೋಮವಾರ ಬೆಂಗಳೂರಿನಿಂದ ತಾಯ್ನಾಡಿನತ್ತ ಪ್ರಯಾಣ ಆರಂಭಿಸಿದ ಶಶಿಕಲಾ ಅವರಿಗೆ ತಮಿಳುನಾಡು ಗಡಿ ಜಿಲ್ಲೆ ಕೃಷ್ಣಗಿರಿ ಪ್ರವೇಶಿಸುತ್ತಿದ್ದಂತೆ ಬೆಂಬಲಿಗರಿಂದ ಅದ್ಧೂರಿ ಸ್ವಾಗತ ಸಿಕ್ಕಿತು. ಚೆನ್ನೈಗೆ ಬರುವ ಮಾರ್ಗದುದ್ದಕ್ಕೂ ಅವರಿಗೆ ಬೆಂಬಲಿಗರು ಮತ್ತು ಅಭಿಮಾನಿಗಳಿಂದ ಭವ್ಯ ಸ್ವಾಗತ ಸಿಕ್ಕಿತು.

‘ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು ಮತ್ತು ಎಐಎಡಿಎಂಕೆ ಪಕ್ಷದ ಚುಕ್ಕಾಣಿಯನ್ನು ಪುನಾ ಹಿಡಿತಕ್ಕೆ ಪಡೆಯುವುದು ಶಶಿಕಲಾ ಅವರ ಉದ್ದೇಶ. ಈ ಚುನಾವಣೆಯಲ್ಲಿ ಅವರು ಕಣಕ್ಕೂ ಇಳಿಯಲಿದ್ದಾರೆ’ ಎಂದು ಶಶಿಕಲಾ ಅವರ ಅಣ್ಣನ ಮಗ ಮತ್ತು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಎಂಕೆ) ಪಕ್ಷದ ನಾಯಕ ಟಿ.ಟಿ.ವಿ. ದಿನಕರನ್‌ ತಿಳಿಸಿದ್ದಾರೆ.

ಖ್ಯಾತ ನಟ ರಜನಿಕಾಂತ್‌ ಅವರು ಸೋಮವಾರ ಶಶಿಕಲಾ ಅವರ ಆರೋಗ್ಯ ವಿಚಾರಿಸಿದರು. ಶಶಿಕಲಾ ಅವರು ಮನೆ ತಲುಪುವುದಕ್ಕೂ ಮೊದಲು ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಎಂ.ಜಿ. ರಾಮಚಂದ್ರನ್ ಅವರ ರಾಮಪುರಮ್‌ನ ಮನೆಗೆ ಭೇಟಿ ನೀಡಿ, ಎಂಜಿಆರ್‌ ಭಾವಚಿತ್ರ ಮತ್ತು ಅವರ ಪ್ರತಿಮೆಗೆ ಹೂವಿನ ಹಾರ ಹಾಕಿ, ನಮನ ಸಲ್ಲಿಸಿದರು.

ಕಾನೂನು ಮೊರೆಹೋಗಲಿದ್ದಾರೆ ಶಶಿಕಲಾ

ಡಿಎಂಕೆ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಎಎಂಎಂಕೆ ಮತ್ತು ಎಐಎಡಿಎಂಕೆ ಕೈಜೋಡಿಸಲಿವೆಯೇ ಎಂಬ ಪ್ರಶ್ನೆಗೆ, ಅಮ್ಮನ ಕೈಗೆ ಅಧಿಕಾರ ನೀಡಲು ಮತ್ತುಎಐಎಡಿಎಂಕೆ ಪಕ್ಷದ ಚುಕ್ಕಾಣಿಯನ್ನು ಪುನಃ ಅವರಿಗೆ ಒಪ್ಪಿಸುವ ಸಲುವಾಗಿಯೇ ನಾನು 2018ರಲ್ಲಿ ಎಎಂಎಂಕೆ ಪಕ್ಷ ಸ್ಥಾಪಿಸಿದ್ದೇನೆ ಎಂದು ದಿನಕರ್‌ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

ಎಐಎಡಿಎಂಕೆ ಮತ್ತು ಎಎಂಎಂಕೆ ಹೊಂದಾಣಿಕೆಯಲ್ಲಿ ಬಿಜೆಪಿಯ ಪಾತ್ರವಿದೆಯೇ ಎನ್ನುವ ಪ್ರಶ್ನೆಗೆ ದಿನಕರನ್‌ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಲು ಆಗದು. ಆದರೆ, ಕಾನೂನಿನಲ್ಲಿ ಇದಕ್ಕೆ ಅವಕಾಶಗಳು ಇವೆ. ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದಿದ್ದಾರೆ.

‘ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜಯಲಲಿತಾ ಸಾವಿನ ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸಲಾಗುವುದು ಎಂದು ಹೇಳಿರುವುದು ನಿಜವಾದ ಕಾಳಜಿಯಿಂದಲ್ಲ. ಶಶಿಕಲಾ ಅವರ ಮೇಲೆ ಡಿಎಂಕೆ ಆಧಾರ ರಹಿತ ಆರೋಪ ಮಾಡುತ್ತಿದೆ’ ಎಂದು ದಿನಕರನ್‌ ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT