ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯ್ನಾಡಿಗೆ ಮರಳಿದ ಶಶಿಕಲಾ: ಬೆಂಬಲಿಗರಿಂದ ಅದ್ಧೂರಿ ಸ್ವಾಗತ

Last Updated 8 ಫೆಬ್ರುವರಿ 2021, 14:06 IST
ಅಕ್ಷರ ಗಾತ್ರ

ಕೃಷ್ಣಗಿರಿ: ಭ್ರಷ್ಟಾಚಾರ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ನಟರಾಜನ್‌ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ವರ್ಷಗಳ ಶಿಕ್ಷೆ ಪೂರ್ಣಗೊಳಿಸಿ, ತಮಿಳುನಾಡಿಗೆ ಸೋಮವಾರ ಹಿಂತಿರುಗಿದರು. ತಾಯ್ನಾಡಿನಲ್ಲಿ ಅವರ ಬೆಂಬಲಿಗರು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಆಪ್ತೆಯಾಗಿದ್ದವರು ಶಶಿಕಲಾ. ಜಯಲಲಿತಾ ನಿಧನದ ನಂತರ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಂಡಿದ್ದರು. ಜೈಲಿನಿಂದ ಬಿಡುಗಡೆಯಾದಾಗ ಶಶಿಕಲಾ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದ ಅವರು ಬೆಂಗಳೂರಿನ ದೇವನಹಳ್ಳಿಯ ಬಳಿ ಇರುವ ರೆಸಾರ್ಟ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದರು.

ಸೋಮವಾರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಅವರು ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕೃಷ್ಣಗಿರಿ ಜಿಲ್ಲೆಯ ಅತಿಪಳ್ಳಿಯನ್ನು ಪ್ರವೇಶಿಸಿದಾಗ, ಅವರ ಬೆಂಬಲಿಗರು ಅದ್ಧೂರಿ ಸ್ವಾಗತ ನೀಡಿದರು. ತಮ್ಮ ನಾಯಕಿಯನ್ನು ನಾಲ್ಕು ವರ್ಷಗಳ ನಂತರ ಕಂಡ ಬೆಂಬಲಿಗರು, ಅವರ ಮೇಲೆ ಹೂವಿನ ಮಳೆಗರೆದರು. ಪಟಾಕಿ ಸಿಡಿಸಿ, ಡ್ರಮ್‌ ನಿನಾದಕ್ಕೆ ನೃತ್ಯ ಮಾಡಿ ಸಂಭ್ರಮಿಸಿದರು.

ನಂತರ ಶಶಿಕಲಾ ಅವರು ತಮ್ಮ ಅಣ್ಣನ ಮಗ ಟಿ.ಟಿ.ವಿ. ದಿನಕರನ್‌ ಜತೆಗೆ ಹೊಸೂರು ಪಟ್ಟಣದ ಮರಿಯಮ್ಮನ್ ದೇಗುಲಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.

‘ಹಲವು ಕಡೆಗಳಲ್ಲಿ ಪಕ್ಷದ ಕಡೆಯಿಂದ ಸ್ವಾಗತ ಸಮಾರಂಭಗಳನ್ನು ಆಯೋಜಿಸಲಾಗಿದೆ. ಶಶಿಕಲಾ ಅವರ ಕಾರಿನಲ್ಲಿ ತೊಂದರೆ ಕಾಣಿಸಿಕೊಂಡಿದ್ದ್ದದರಿಂದ ಪಕ್ಷದ ಮುಖಂಡರೊಬ್ಬರ ಕಾರಿನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ. ಎಐಎಡಿಎಂಕೆ ಸಂಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಎಂ.ಜಿ. ರಾಮಚಂದ್ರನ್‌ ಅವರ ಚೆನ್ನೈ ನಿವಾಸಕ್ಕೆ ಅವರು ಭೇಟಿ ನೀಡಲಿದ್ದಾರೆ’ ಎಂದು ಟಿ.ಟಿ.ವಿ. ದಿನಕರನ್‌ ತಿಳಿಸಿದ್ದಾರೆ.

‘ಶಶಿಕಲಾ ಮತ್ತು ಅವರ ಬೆಂಬಲಿಗರಿಗೆ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ. ಪಕ್ಷದ ಬಾವುಟವನ್ನು ಅವರು ಕಾರಿನ ಮೇಲೆ ಅನಧಿಕೃತವಾಗಿ ಬಳಸುತ್ತಿರುವುದು ಕಾನೂನುಬಾಹಿರ’ ಎಂದು ಎಐಎಎಂಡಿಕೆ ಪುನರುಚ್ಚರಿಸಿದೆ.

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸಿರುವ ಸಂದರ್ಭದಲ್ಲೇ ಶಶಿಕಲಾ ರಾಜ್ಯಕ್ಕೆ ಮರಳಿದ್ದು, ರಾಜಕಾರಣದ ಮೇಲೆ ಉಂಟಾಗಲಿರುವ ಪರಿಣಾಮವನ್ನು ರಾಜಕೀಯ ಪಕ್ಷಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT