ಗುರುವಾರ , ಮೇ 26, 2022
31 °C
ಒಂದು ದೇಶ, ಒಂದು ಪಡಿತರ ಚೀಟಿ ಯೋಜನೆ ಜಾರಿಗೆ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

ವಲಸೆ ಕಾರ್ಮಿಕರ ನೋಂದಣಿ ವಿಳಂಬಕ್ಕೆ ಸುಪ್ರೀಂ ಕೋರ್ಟ್ ಅತೃಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿವಿಧ ಕಲ್ಯಾಣ ಯೋಜನೆಗಳ ಅನುಕೂಲ ದೊರೆಯುವಂತೆ ಅಸಂಘಟಿತ ವಲಸೆ ಕಾರ್ಮಿಕರನ್ನು ನೋಂದಣಿ ಮಾಡಲು ತಂತ್ರಾಂಶ ಅಭಿವೃದ್ಧಿಪಡಿಸದ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.

‘ನಿಮ್ಮ ನಿರ್ದೇಶಕರಿಗೆ ಸಮಯವಿಲ್ಲ ಎಂಬ ಒಂದೇ ಕಾರಣಕ್ಕೆ ಇದನ್ನು ಹೀಗೆ ನಿಲ್ಲಿಸಿಕೊಂಡಿರಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಖಾರವಾಗಿ ಪ್ರತಿಕ್ರಿಯಿಸಿದೆ. ಅಲ್ಲದೆ, ಒಂದು ದೇಶ ಒಂದು ಪಡಿತರ ಚೀಟಿ ಯೋಜನೆಯನ್ನು ಶೀಘ್ರವೇ ಜಾರಿಗೆ ತರಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ವಲಸೆ ಕಾರ್ಮಿಕರು ದೇಶದ ಯಾವುದೇ ಭಾಗದಲ್ಲಿ ಇದ್ದರೂ ಪಡಿತರ ಪಡೆದುಕೊಳ್ಳಲು ಒಂದು ದೇಶ, ಒಂದು ಪಡಿತರ ಚೀಟಿ ಯೋಜನೆ ಅನುಕೂಲ ಮಾಡಿಕೊಡುತ್ತದೆ. ಯೋಜನೆ ಅನುಷ್ಠಾನದಲ್ಲಿನ ವಿಳಂಬಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಾಮಾಜಿಕ ಕಾರ್ಯಕರ್ತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಹೀಗೆ ಹೇಳಿದೆ. 

‘ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ದತ್ತಾಂಶಕೋಶ ಅಭಿವೃದ್ಧಿಪಡಿಸುತ್ತೇವೆ. ಇದಕ್ಕಾಗಿ 417 ಕೋಟಿ ಬಿಡುಗಡೆ ಮಾಡಿದ್ದೇವೆ ಎಂದು ಸರ್ಕಾರವು ಈ ಹಿಂದಿನ ವಿಚಾರಣೆ ವೇಳೆ ಹೇಳಿತ್ತು. ಆದರೆ ಇನ್ನೂ ದತ್ತಾಂಶಕೋಶ ಸಿದ್ಧವಾಗಿಲ್ಲ. ಮೂರು ವರ್ಷಗಳಿಂದ ಈ ವಿಷಯದಲ್ಲಿ ಪ್ರಗತಿಯೇ ಆಗಿಲ್ಲ’ ಎಂದು ಅರ್ಜಿದಾರರ ಪರ ವಕೀಲ ಕೊಲಿನ್ ಗೊನ್ಸಾಲ್ವೆಸ್ ಅವರು ಸುಪ್ರೀಂ ಕೋರ್ಟ್‌ ಪೀಠಕ್ಕೆ ಮಾಹಿತಿ ನೀಡಿದರು. ಆಗ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪೀಠವು ತರಾಟೆಗೆ ತೆಗೆದುಕೊಂಡಿತು.

‘ಕೇಂದ್ರ ಸರ್ಕಾರ ಇನ್ನೂ ಸಮೀಕ್ಷೆಯನ್ನೂ ನಡೆಸಿಲ್ಲ. ನಿಮ್ಮ ರಾಷ್ಟ್ರೀಯ ಡೇಟಾಬೇಸ್‌ನ ಪ್ರಗತಿ ಏನಾಯಿತು? 417 ಕೋಟಿ ಬಿಡುಗಡೆಯಾದರೂ ಇನ್ನೂ ಯಾವ ಕೆಲಸವೂ ಆಗಿಲ್ಲ. ನಿಮಗಿನ್ನು ಎಷ್ಟು ಸಮಯಬೇಕು? ಪ್ರಕ್ರಿಯೆಯೇ ಆರಂಭವಾಗಿಲ್ಲವಲ್ಲ’ ಎಂದು ಪ್ರಶ್ನಿಸಿತು.

‘ದೇಶದಲ್ಲಿ 2.8 ಕೋಟಿ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿಯೇ ಇಲ್ಲ. ಸರ್ಕಾರ ಘೋಷಿಸಿರುವ ಉಚಿತ ಪಡಿತರ ಯೋಜನೆ ಅಡಿ ಅವರಿಗೆ ಪಡಿತರ ಸಿಗುವುದಿಲ್ಲ. ಯೋಜನೆಯನ್ನು ನವೆಂಬರ್‌ವರೆಗೆ ವಿಸ್ತರಿಸಲಾಗಿದೆ’ ಎಂದು ಅರ್ಜಿದಾರರ ಪರ ಮತ್ತೊಬ್ಬ ವಕೀಲ ದುಶ್ಯಂತ್ ದವೆ ಅವರು ಪೀಠಕ್ಕೆ ಮಾಹಿತಿ ನೀಡಿದರು. ಆಗ ಪೀಠವು, ‘ಪಡಿತರ ಚೀಟಿ ಇಲ್ಲದವರಿಗಾಗಿ ಯಾವ ಯೋಜನೆ ಸಿದ್ಧಪಡಿಸಿದ್ದೀರಿ’ ಎಂದು ಸರ್ಕಾರವನ್ನು ಪ್ರಶ್ನಿಸಿತು.

‘ಪಡಿತರ ಚೀಟಿ ಇಲ್ಲದವರಿಗೆ ಪಡಿತರ ನೀಡುವ ಯೋಜನೆಯನ್ನು ಸಿದ್ಧಪಡಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡ
ಲಾಗಿದೆ’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ಪೀಠಕ್ಕೆ ಮಾಹಿತಿ ನೀಡಿದರು. ಆಗ ದುಶ್ಯಂತ್ ದವೆ ಅವರು, ‘ಕೇಂದ್ರ ತನ್ನ ಹೊಣೆಯನ್ನು ರಾಜ್ಯ ಸರ್ಕಾರಗಳ ಮೇಲೆ ಹೇರುತ್ತಿದೆ’ ಎಂದು ಆರೋಪಿಸಿದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಪೀಠವು ಸೂಚನೆ ನೀಡಿದೆ. ಅರ್ಜಿಗೆ ಸಂಬಂಧಿಸಿದ ತನ್ನ ತೀರ್ಪನ್ನು ಕಾಯ್ದಿರಿಸಿದೆ.

‘ತಕ್ಷಣವೇ ಜಾರಿಗೆ ತನ್ನಿ’

ಒಂದು ದೇಶ, ಒಂದು ಪಡಿತರ ಚೀಟಿ ಯೋಜನೆಯನ್ನು ಜಾರಿಗೆ ತರದ ರಾಜ್ಯ ಸರ್ಕಾರಗಳನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಯೋಜನೆ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ಸಲ್ಲಿಸಿದ್ದ ವರದಿಗಳನ್ನು ಪೀಠವು ಪರಿಶೀಲಿಸಿತು.

‘ಆಧಾರ್ ಸಂಖ್ಯೆ ನಮೂದಿಸುವಲ್ಲಿ ತಾಂತ್ರಿಕ ಸಮಸ್ಯೆ ಇದೆ. ಹೀಗಾಗಿ ಯೋಜನೆ ಜಾರಿಗೆ ತರಲಾಗಿಲ್ಲ’ ಎಂದು ಪಶ್ಚಿಮ ಬಂಗಾಳ ಸರ್ಕಾರ ವರದಿ ಸಲ್ಲಿಸಿತ್ತು. ಈ ವರದಿಗೆ ಪೀಠವು ಖಾರವಾಗಿ ಪ್ರತಿಕ್ರಿಯಿಸಿದೆ.

‘ನೀವು ನೀಡುವ ಯಾವ ಕಾರಣವನ್ನೂ ನಾವು ಪರಿಗಣಿಸುವುದಿಲ್ಲ. ನೀವು ಪ್ರತಿ ಬಾರಿ ಒಂದೆರಡು ಕಾರಣಗಳನ್ನು ಹೇಳುತ್ತಲೇ ಇರುವುದು ಸಾಧ್ಯವಿಲ್ಲ. ಈ ಯೋಜನೆ ವಲಸೆ ಕಾರ್ಮಿಕರಿಗಾಗಿ ಮಾಡಿರುವುದು. ತಕ್ಷಣವೇ ಯೋಜನೆಯನ್ನು ಜಾರಿಗೆ ತನ್ನಿ’ ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿತು.

ಸಾಲದ ಕಂತು ಪಾವತಿ ಮುಂದೂಡಿಕೆ: ಆದೇಶಕ್ಕೆ ನಕಾರ

ಸಾಲದ ಕಂತು ಮರುಪಾವತಿಯನ್ನು ಕೋವಿಡ್‌ ಎರಡನೇ ಅಲೆಯ ಕಾರಣ ಮುಂದೂಡಲು ನಿರ್ದೇಶನ ನೀಡಿ ಎಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಪೀಠವು ತಿರಸ್ಕರಿಸಿದೆ. ‘ನಾವು ಹಣಕಾಸು ತಜ್ಞರಲ್ಲ. ಇಂತಹ ಆದೇಶ ನೀಡಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ.ಆರ್‌.ಶಾ ಅವರಿದ್ದ ಪೀಠವು ಹೇಳಿದೆ.

ವಕೀಲ ವಿಶಾಲ್ ತಿವಾರಿ ಅವರು ಈ ಅರ್ಜಿ ಸಲ್ಲಿಸಿದ್ದರು. ಕೋವಿಡ್‌ ಎರಡನೇ ಅಲೆಯ ಲಾಕ್‌ಡೌನ್‌ನಲ್ಲಿ ಒಂದು ಕೋಟಿಗೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗಾಗಿ ಸಾಲ ಮರುಪಾವತಿ ಕಂತನ್ನು ಮುಂದೂಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಅವರು ಕೋರಿದ್ದರು.

‘ನಾವು ಹಣಕಾಸು ತಜ್ಞರಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಹಣಕಾಸು ನೀತಿಗಳ ವಿಚಾರದಲ್ಲಿ ನಾವು ಭಾಗಿಯಾಗುವುದಿಲ್ಲ. ಇವೆಲ್ಲಾ ನೀತಿಯ ಮಟ್ಟದಲ್ಲಿ ಆಗಬೇಕಾದ ಕೆಲಸ. ಪರಿಸ್ಥಿತಿಯನ್ನು ಅವಲೋಕಿಸಿ ಸರ್ಕಾರವೇ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಪೀಠವು ಹೇಳಿದೆ.

ಮೃತರ ಕುಟುಂಬಕ್ಕೆ ಪರಿಹಾರ: ಪರಿಶೀಲಿಸುತ್ತಿರುವ ಕೇಂದ್ರ

ಕೋವಿಡ್‌–19ನಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ ₹ 4 ಲಕ್ಷ ಪರಿಹಾರ ನೀಡುವ ಮತ್ತು ಮರಣ ಪ್ರಮಾಣ ಪತ್ರ ನೀಡುವ ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ನಮೂದಿಸಲಾಗಿದ್ದ ಬೇಡಿಕೆಗಳನ್ನು ಸರ್ಕಾರ ಪರಿಗಣಿಸಿದೆ. ಅರ್ಜಿಗಳಿಗೆ ಸದ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುವುದು ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌ ಮತ್ತು ಎಂ.ಆರ್‌. ಶಾ ಇದ್ದ ಪೀಠಕ್ಕೆ ತಿಳಿಸಿದರು. ಜೊತೆಗೆ ಸಮಯಾವಕಾಶವನ್ನೂ ಕೋರಿದರು. ತುಷಾರ್‌ ಮೆಹ್ತಾ ಅವರ ಮನವಿಯನ್ನು ಪರಿಗಣಿಸಿರುವ ಪೀಠ, ಇದೇ 21ಕ್ಕೆ ಪ್ರತಿಕ್ರಿಯೆ ನೀಡಲು ಸೂಚಿಸಿದೆ.

ಕೋರ್ಟ್ ಕೂಡಲೇ ಮಧ್ಯ ಪ್ರವೇಶಿಸಿ, ಕೋವಿಡ್‌ ಸಂತ್ರಸ್ತರ ಕುಟುಂಬಗಳಿಗೆ ತಲಾ ₹ 4 ಲಕ್ಷ ಪರಿಹಾರ ಧನ ನೀಡುವಂತೆ ಕೇಂದ್ರಕ್ಕೆ ಸೂಚಿಸಬೇಕು ಎಂದು ವಕೀಲರಾದ ಗೌರವ್‌ ಕುಮಾರ್‌ ಬನ್ಸಾಲ್‌ ಮತ್ತು ರೀಪಕ್‌ ಕನ್ಸಲ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕೋವಿಡ್‌–19 ಸಾಂಕ್ರಾಮಿಕವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು 2020ರ ಮಾರ್ಚ್‌ 14ರಂದು ಘೋಷಿಸಿದೆ. ಹೀಗಾಗಿ, ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್‌ 12ರ ಅಡಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಬೇಕು. ಸಂತ್ರಸ್ತರಿಗೆ ಆರ್ಥಿಕ ಸಹಾಯ ನೀಡುವುದು ಸಾಂವಿಧಾನಿಕ ಹೊಣೆಗಾರಿಕೆ ಆಗಿರುತ್ತದೆ ಎಂದು ಅರ್ಜಿಯಲ್ಲಿ ನಮೂದಿಸಿದ್ದರು.

ಅರ್ಜಿದಾರರ ಪರವಾಗಿ ಕೋರ್ಟ್‌ಗೆ ಹಾಜರಾಗಿದ್ದ ಹಿರಿಯ ವಕೀಲ ಎಸ್‌.ಬಿ. ಉಪಾಧ್ಯಾಯ್‌, ಕೋವಿಡ್‌–19 ನೆಪ ಹೇಳಿ ಆಸ್ಪತ್ರೆಗಳು ಮರಣ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ. ಕೋವಿಡ್‌ನಿಂದ ಕಪ್ಪು ಶೀಲಿಂಧ್ರ ಸಮಸ್ಯೆ ಕೂಡಾ ಹೆಚ್ಚಾಗಿದೆ. ಹೀಗಾಗಿ ಮರಣ ಪ್ರಮಾಣ ಪತ್ರಗಳಲ್ಲಿ ಕಪ್ಪು ಶೀಲಿಂಧ್ರ ಕಾರಣವನ್ನೂ ಸೇರಿಸಬೇಕು ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು