ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸಂಸ್ಥೆಗಳಿಂದ ಅರ್ಜಿ ಸಲ್ಲಿಕೆ ವಿಳಂಬ: ‘ಸುಪ್ರೀಂ’ ಅಸಮಾಧಾನ

Last Updated 16 ಜನವರಿ 2021, 13:47 IST
ಅಕ್ಷರ ಗಾತ್ರ

ನವದೆಹಲಿ: ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಸೇರಿದಂತೆ ಇತರೆ ಸರ್ಕಾರಿ ಏಜೆನ್ಸಿಗಳು ತನ್ನೆದುರು ಪ್ರಕರಣಗಳನ್ನು ದಾಖಲಿಸುತ್ತಿರುವುದರಲ್ಲಿ ಆಗುತ್ತಿರುವ ಮಿತಿಮೀರಿದ ವಿಳಂಬಕ್ಕೆ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದ್ದು, ‘ಪದೇ ಪದೇ ಈ ಕುರಿತು ಆದೇಶ ನೀಡುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಹೇಳಿದೆ.

ಜಾಮೀನು ಆದೇಶವೊಂದಕ್ಕೆ ಸಂಬಂಧಪಟ್ಟ ವಿಚಾರಣೆ ವೇಳೆ ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ಅವರಿದ್ದ ತ್ರಿಸದಸ್ಯ ಪೀಠವು ಈ ಅಭಿಪ‍್ರಾಯ ವ್ಯಕ್ತಪಡಿಸಿತು. ‘ಈ ಪ್ರಕರಣದಲ್ಲಿ 2018 ಡಿ.20ರಂದು ಅಲಹಾಬಾದ್‌ ಹೈಕೋರ್ಟ್‌ ಆದೇಶ ಹೊರಡಿಸಿದೆ. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ 607 ದಿನಗಳ ಬಳಿಕ ಅಪೀಲು ಸಲ್ಲಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಎದ್ದು ಕಾಣುವ ನಿರ್ಲಕ್ಷ್ಯಕ್ಕೆ ಇದು ಸಾಕ್ಷ್ಯ’ ಎಂದು ಪೀಠವು ಹೇಳಿತು. ಎನ್‌ಸಿಬಿ ಸಲ್ಲಿಸಿದ್ದ ಈ ಅರ್ಜಿಯನ್ನು ಪೀಠವು ತಿರಸ್ಕರಿಸಿತು.

‘ಇಷ್ಟು ವಿಳಂಬವಾಗಿ ಅಪೀಲು ಸಲ್ಲಿಸುತ್ತಿರುವುದರ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡಿದರೂ, ಇತಿಮಿತಿ ತಮಗೆ ಅನ್ವಯವೇ ಆಗುವುದಿಲ್ಲ ಎಂಬಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ’ ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿತು. ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ ಕಾರಣಕ್ಕೆ ಅಪೀಲು ಸಲ್ಲಿಸಿದ ಸಂಬಂಧಪಟ್ಟ ಅಧಿಕಾರಿಗಳಿಗೆ ₹25 ಸಾವಿರ ದಂಡ ವಿಧಿಸಿದ ಪೀಠವು, ಇಂತಹ ಇತರೆ ಅಪೀಲುಗಳಿಗೂ ಇದೇ ರೀತಿಯ ದಂಡ ವಿಧಿಸುತ್ತಿರುವುದಾಗಿ ತಿಳಿಸಿತು.

ಎನ್‌ಸಿಬಿಯು ಈ ರೀತಿ ಹಲವು ಬಾರಿ ವಿಳಂಬವಾಗಿ ಅಪೀಲು ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಪಿನ ಆದೇಶವನ್ನು ಎನ್‌ಸಿಬಿ ಪ್ರಧಾನ ನಿರ್ದೇಶಕರಿಗೆ ಕಳುಹಿಸುವಂತೆ ಪೀಠವು ನಿರ್ದೇಶಿಸಿತು. ಈ ನಿರ್ದೇಶನವನ್ನು ಪಾಲಿಸದೇ ಇದ್ದರೆ, ಪ್ರಧಾನ ನಿರ್ದೇಶಕರ ವಿರುದ್ಧವೂ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪೀಠವು ಇದೇ ವೇಳೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT