ಶುಕ್ರವಾರ, ಮಾರ್ಚ್ 24, 2023
22 °C
ಯುನಿಟೆಕ್‌ ಮಾಜಿ ಪ್ರವರ್ತಕರೊಂದಿಗೆ ಸೇರಿ ಪಿತೂರಿ

ತಿಹಾರ್‌ ಜೈಲು ಅಧಿಕಾರಿಗಳ ವಿರುದ್ಧ ತನಿಖೆಗೆ ‘ಸುಪ್ರೀಂ’ ಆದೇಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಯುನಿಟೆಕ್‌ ಕಂಪನಿಯ ಮಾಜಿ ಪ್ರವರ್ತಕರಾದ ಸಂಜಯ್‌ ಚಂದ್ರ ಹಾಗೂ ಅಜಯ್‌ ಚಂದ್ರ ಅವರೊಂದಿಗೆ ಕೈಜೋಡಿಸಿ ಪಿತೂರಿ ನಡೆಸಿರುವ ತಿಹಾರ್‌ ಜೈಲು ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್‌ ಬುಧವಾರ ಆದೇಶಿಸಿದೆ.

ಈ ಸಂಬಂಧ ದೆಹಲಿ ಪೊಲೀಸ್‌ ಕಮಿಷನರ್ ರಾಕೇಶ್‌ ಆಸ್ತಾನ ಅವರು ಸುಪ್ರೀಂಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಹಾಗೂ ಎಂ.ಆರ್‌.ಶಾ ಅವರಿರುವ ನ್ಯಾಯಪೀಠ ತನಿಖೆಗೆ ಆದೇಶಿಸಿದೆ.

ತಿಹಾರ್‌ ಜೈಲು ಅಧಿಕಾರಿಗಳು ಮತ್ತು ಅಪರಿಚಿತ ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಹಾಗೂ ಈ ಪಿತೂರಿಯಲ್ಲಿ ಶಾಮೀಲಾಗಿರುವವರ ವಿರುದ್ಧ ಐಪಿಸಿ ಅಡಿ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆಯೂ ನ್ಯಾಯಪೀಠ ನಿರ್ದೇಶನ ನೀಡಿತು.

ತನಿಖೆ ಎದುರಿಸುತ್ತಿರುವ ಜೈಲು ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಜೈಲುಗಳ ನಿರ್ವಹಣೆಯನ್ನು ಉನ್ನತೀಕರಿಸಬೇಕು. ಈ ಸಂಬಂಧ ದೆಹಲಿ ಪೊಲೀಸ್‌ ಕಮಿಷನರ್ ಆಸ್ತಾನ ಸಲ್ಲಿಸಿರುವ ವರದಿಯಲ್ಲಿನ ಸಲಹೆಗಳನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿತು.

ಯುನಿಟೆಕ್‌ನ ಮಾಜಿ ಪ್ರವರ್ತಕರಾದ ಚಂದ್ರ ಸಹೋದರರು ಜೈಲಿನಲ್ಲಿದ್ದುಕೊಂಡೇ ತಮ್ಮ ವ್ಯವಹಾರ ನಡೆಸುತ್ತಿದ್ದರು. ಭೂಗತ ಕಚೇರಿ ಸ್ಥಾಪಿಸಿದ್ದರು. ಇದಕ್ಕೆ ಕೆಲ ಜೈಲು ಅಧಿಕಾರಿಗಳು ನೆರವಾಗಿದ್ದರು ಎಂದು ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು