ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳ ಅಪರಾಧ ಹಿನ್ನೆಲೆ ಬಹಿರಂಗಪಡಿಸದ ರಾಜಕೀಯ ಪಕ್ಷಗಳಿಗೆ ‘ಸುಪ್ರೀಂ’ ದಂಡ

ಅಪರಾಧ ದಾಖಲೆ ಬಹಿರಂಗ ಪಡಿಸದೇ ಆದೇಶ ಉಲ್ಲಂಘನೆ: ನ್ಯಾಯಪೀಠ ಚಾಟಿ
Last Updated 11 ಆಗಸ್ಟ್ 2021, 2:02 IST
ಅಕ್ಷರ ಗಾತ್ರ

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮ ಪಕ್ಷದ ಚುನಾವಣಾ ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯನ್ನು ಬಹಿರಂಗಪಡಿಸದ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳಿಗೆ, ಸುಪ್ರೀಂ ಕೋರ್ಟ್ ಮಂಗಳವಾರ ದಂಡ ವಿಧಿಸಿದೆ.

‘ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯನ್ನು ಹಾಗೂ ಅವರನ್ನು ಆಯ್ಕೆ ಮಾಡಿದ್ದಕ್ಕೆ ಕಾರಣವನ್ನು ಬಹಿರಂಗಪಡಿಸದೇ, ಈ ಪಕ್ಷಗಳು ನ್ಯಾಯಾಂಗ ನಿಂದನೆ ಎಸಗಿವೆ’ ಎಂದು ನ್ಯಾಯಮೂರ್ತಿಗಳಾದ ಆರ್‌.ಎಫ್‌.ನರೀಮನ್‌ ಹಾಗೂ ಬಿ.ಆರ್‌. ಗವಾಯಿ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.

ರಾಜಕೀಯ ಅಪರಾಧೀಕರಣವನ್ನು ತಡೆಯುವ ನಿಟ್ಟಿನಲ್ಲಿ, ಅಪರಾಧಿಗಳು ರಾಜಕಾರಣಕ್ಕೆ ಪ್ರವೇಶಿಸದಂತೆ ತಡೆಯಲು ಕಾನೂನಿಗೆ ತಿದ್ದುಪಡಿ ಆಗುವ ಅಗತ್ಯವಿದೆ ಎಂಬುದನ್ನು ಒತ್ತಿ ಹೇಳಿದ ನ್ಯಾಯಪೀಠ, ರಾಜಕೀಯ ದಲ್ಲಿನ ಅಪರಾಧೀಕರಣ ಎಂಬ ಕ್ಯಾನ್ಸರ್‌ ಅನ್ನು ಕಿತ್ತು ಹಾಕಬೇಕಿದೆ ಎಂದು ಕಟು ಮಾತುಗಳಲ್ಲಿ ಹೇಳಿತು.

ಈ ಬಗೆಗಿನ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಪೀಠ, ಅಭ್ಯರ್ಥಿಗಳ ಮಾಹಿತಿ ಬಹಿರಂಗಕ್ಕೆ ಸಂಬಂಧಿಸಿದಂತೆ 2020ರ ಫೆ.13ರಂದು ಸುಪ್ರೀಂ ಕೋರ್ಟ್‌ ಹೊರಡಿಸಿದ ಆದೇಶವನ್ನು ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಉಲ್ಲಂಘಿಸಿದ್ದಾಗಿ ಹೇಳಿತು. ಜೆಡಿಯು, ಆರ್‌ಜೆಡಿ, ಲೋಕಜನಶಕ್ತಿ, ಕಾಂಗ್ರೆಸ್‌, ಬಿಜೆಪಿ ಹಾಗೂ ಸಿಪಿಐ ‍ಪಕ್ಷಗಳಿಗೆ ತಲಾ ₹1 ಲಕ್ಷ ರೂಪಾಯಿಯನ್ನು ಹಾಗೂ ಸಿಪಿಎಂ ಮತ್ತು ಎನ್‌ಸಿಪಿ ಪಕ್ಷಗಳಿಗೆ ತಲಾ ₹ 5 ಲಕ್ಷ ದಂಡ ವಿಧಿಸಿತು.

‘ಅಭ್ಯರ್ಥಿಗಳ ಮಾಹಿತಿ ಕುರಿತಾಗಿ ಆದೇಶ ಹೊರಡಿಸಿದ ನಂತರದಲ್ಲಿ ನಡೆದದ್ದು ಇದೇ ಮೊದಲ ಚುನಾವಣೆ ಯಾಗಿದ್ದರಿಂದ, ಸುಪ್ರೀಂ ಕೋರ್ಟ್‌ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದರೆ, ಮುಂಬರುವ ಚುನಾವಣೆಗಳ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಸುಪ್ರೀಂ ಕೋರ್ಟ್‌ ನಿರ್ದೇಶನ ಹಾಗೂ ಚುನಾವಣಾ ಆಯೋಗದ ನಿಯಮಗಳನ್ನು ಚಾಚೂತಪ್ಪದೇ ಪಾಲಿಸಬೇಕು’ ಎಂದು ತಿಳಿಸಿತು.

ಯಾವುದೇ ರಾಜಕೀಯ ಪಕ್ಷವು ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಿದ್ದಲ್ಲಿ, ಅಂಥ ಪ‍್ರಕರಣಗಳನ್ನು ಕೂಡಲೇ ನ್ಯಾಯಾಲಯದ ಗಮನಕ್ಕೆ ತರುವಂತೆ ಚುನಾವಣಾ ಆಯೋಗಕ್ಕೂ ಎಚ್ಚರಿಸಿತು.

ಅಭ್ಯರ್ಥಿಯನ್ನು ಘೋಷಿಸಿದ 48 ಗಂಟೆಗಳ ಒಳಗಾಗಿ ರಾಜಕೀಯ ಪಕ್ಷಗಳು, ಅಪರಾಧ ಹಿನ್ನೆಲೆಯ ದಾಖಲೆಗಳು ಸೇರಿದಂತೆ ಆ ವ್ಯಕ್ತಿಯ ಮಾಹಿತಿಯನ್ನು ಪ್ರಕಟಿಸಬೇಕು.

ಅಷ್ಟೇ ಅಲ್ಲ, ಈ ಮಾಹಿತಿಯನ್ನು ತಮ್ಮ ಪಕ್ಷದ ವೆಬ್‌ಸೈಟ್‌ನ ಹೋಂಪೇಜ್‌ನಲ್ಲಿಯೂ ಪ್ರಕಟಿಸಬೇಕು ಎಂದು ನ್ಯಾಯ‍‍ಪೀಠ ಸೂಚಿಸಿತು. ಇದರಿಂದ ಮತದಾರರಿಗೆ ತಮ್ಮ ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ತಿಳಿದುಕೊಳ್ಳುವುದು ಸುಲಭವಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.

ಇದರೊಂದಿಗೆ, ಇಂಥವರ ಮಾಹಿತಿ ನೀಡುವಾಗ, ಹೋಂಪೇಜ್‌ನಲ್ಲಿ ಆಯಾ ರಾಜ್ಯದ ವಿಭಾಗದಲ್ಲಿ ‘ಅಪರಾಧ ಹಿನ್ನೆಲೆ ಇರುವ ಅಭ್ಯರ್ಥಿಗಳು’ ಎಂಬ ಶೀರ್ಷಿಕೆಯೂ ಅಗತ್ಯ ಎಂದಿದೆ.

ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯ ವಿವರವನ್ನು ಒಳಗೊಂಡ ಮೊಬೈಲ್‌ ಅಪ್ಲಿಕೇಶನ್‌ ಸಿದ್ಧಪಡಿಸುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದ ಸುಪ್ರೀಂ ಕೋರ್ಟ್‌, ಇದರೊಂದಿಗೆ ಮತದಾರರಲ್ಲಿ ಅರಿವು ಮೂಡಿಸುವ ಅಭಿಯಾನವನ್ನೂ ನಡೆಸುವಂತೆ ತಿಳಿಸಿತು.

ಪ್ರಕರಣ ಹಿಂಪಡೆಯಲು ಹೈಕೋರ್ಟ್‌ ಅನುಮತಿ ಕಡ್ಡಾಯ:

ಹಾಲಿ/ ಮಾಜಿ ಸಂಸದರು ಹಾಗೂ ಶಾಸಕರ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳನ್ನು ಆಯಾ ರಾಜ್ಯಗಳ ಹೈಕೋರ್ಟ್‌ಗಳ ಅನುಮತಿ ಇಲ್ಲದೆಯೇ ಹಿಂಪಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಮಹತ್ವದ ಆದೇಶ ನೀಡಿದೆ. ಅಲ್ಲದೇ, ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ಮುಗಿಯುವವರೆಗೆ, ಅವರ ವಿರುದ್ಧದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯಗಳ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಬಾರದು ಎಂದೂ ಸುಪ್ರೀಂಕೋರ್ಟ್‌ ಹೇಳಿದೆ.

ಬಿಜೆಪಿ ಮುಖಂಡ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಪಿಐಎಲ್‌ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ವಿನೀತ್‌ ಶರಣ್‌ ಹಾಗೂ ಸೂರ್ಯಕಾಂತ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ವಿಶೇಷ ಪೀಠಕ್ಕೆ ಚಿಂತನೆ: ರಾಜಕಾರಣಿಗಳ ವಿರುದ್ಧದ ಪ್ರಕರಣಗಳ ಮೇಲ್ವಿಚಾರಣೆಗಾಗಿ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಪೀಠ ಸ್ಥಾಪಿಸುವ ಚಿಂತನೆ ನಡೆದಿದೆ ಎಂದೂ ನ್ಯಾಯಪೀಠ ಹೇಳಿದೆ.

ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದರೆ, ಅವುಗಳ ಕುರಿತು ನಿಗದಿತ ನಮೂನೆಯಲ್ಲಿ ಮಾಹಿತಿ ಸಲ್ಲಿಸುವಂತೆ ಎಲ್ಲ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ ಅವರಿಗೆ ನಿರ್ದೇಶನ ನೀಡಲಾಗಿದೆ. ಬಾಕಿ ಇರುವ ಪ್ರಕರಣಗಳ ಸಂಖ್ಯೆ ಹಾಗೂ ಅವುಗಳ ವಿಚಾರಣೆ ಯಾವ ಹಂತಗಳಲ್ಲಿದೆ ಎಂಬ ಮಾಹಿತಿ ನೀಡುವಂತೆಯೂ ನ್ಯಾಯಪೀಠ ಸೂಚಿಸಿದೆ.

ಸಂಸದರು, ಶಾಸಕರ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳ ತ್ವರಿತ ವಿಚಾರಣೆಗೆ ನಿರ್ದೇಶನ ನೀಡುವಂತೆ ಕೋರಿ ಅಶ್ವಿನಿ ಉಪಾಧ್ಯಾಯ 2016ರಲ್ಲಿ ಪಿಐಎಲ್‌ ಸಲ್ಲಿಸಿದ್ದರು. ಶಿಕ್ಷೆಗೆ ಗುರಿಯಾದ ರಾಜಕಾರಣಿಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಶಾಶ್ವತ ನಿಷೇಧ ಹೇರಬೇಕು ಎಂದೂ ಅವರು ಅರ್ಜಿಯಲ್ಲಿ ಕೋರಿದ್ದರು.

ಈ ಪ್ರಕರಣದಲ್ಲಿ ನ್ಯಾಯಾಲಯದ ಸಲಹೆಗಾರರಾಗಿ ನೇಮಕವಾಗಿದ್ದ ವಿಜಯ್ ಹಂಸಾರಿಯಾ ಅವರು ವರದಿ ಸಲ್ಲಿಸಿದ್ದರು.

ಹಲವು ರಾಜ್ಯ ಸರ್ಕಾರಗಳು ಹಾಲಿ ಹಾಗೂ ಮಾಜಿ ಶಾಸಕರು/ಸಂಸದರ ವಿರುದ್ಧದ ಪ್ರಕರಣಗಳನ್ನು ಅನ್ಯ ಕಾರಣಗಳಿಂದ ಹಿಂತೆಗೆದುಕೊಂಡಿವೆ. ಈ ಬಗ್ಗೆ ಕರ್ನಾಟಕ ಸರ್ಕಾರವು 2020ರ ಆಗಸ್ಟ್‌ನಲ್ಲಿ ಜನಪ್ರತಿನಿಧಿಗಳ ವಿರುದ್ಧದ 61 ಪ್ರಕರಣಗಳನ್ನು ಹಿಂಪಡೆದಿರುವುದನ್ನು ಹಾಗೂ ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶದಲ್ಲಿ ಇದೇ ರೀತಿಯ ಪ್ರಕ್ರಿಯೆಗಳನ್ನೂ ಅವರು ಉಲ್ಲೇಖಿಸಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ, ಶಾಸಕರು ಹಾಗೂ ಸಂಸದರ ವಿರುದ್ಧದ ಮೊಕದ್ದಮೆಗಳ ಮಾಹಿತಿಯನ್ನು ನೀಡುವಲ್ಲಿ ಸಿಬಿಐ ವಿಫಲವಾಗಿದೆ ಎಂದೂಸುಪ್ರೀಂ ಕೋರ್ಟ್‌ ಚಾಟಿ ಬೀಸಿತು. ಅಲ್ಲದೇ ಈ ಬಗ್ಗೆ ಕೊನೆಯ ಅವಕಾಶ ನೀಡುವುದಾಗಿ ಹೇಳಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್‌ 25ಕ್ಕೆ ನಿಗದಿಪಡಿಸಿತು.

ದೇಶದ ಸಹನೆ ಮೀರುತ್ತಿದೆ:

ರಾಜಕೀಯ ಕ್ಷೇತ್ರವು ದಿನದಿಂದ ದಿನಕ್ಕೆ ಕಲುಷಿತವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ, ಇದನ್ನು ಸ್ವಚ್ಛಗೊಳಿಸುವುದು ಶಾಸಕಾಂಗದ ಆದ್ಯತೆಯಾಗದೇ ಇರುವುದರಿಂದ ದೇಶವು ಅದನ್ನು ಸುಮ್ಮನೇ ನೋಡುತ್ತಲೇ ಇದ್ದು, ಸಹನೆ ಕಳೆದುಕೊಳ್ಳುತ್ತಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

ಅಪರಾಧ ಹಿನ್ನೆಲೆಯ ವ್ಯಕ್ತಿಗಳು ಕಾನೂನು ರೂಪಿಸುವ ಸ್ಥಾನದಲ್ಲಿ ಇರಲು ಅವಕಾಶ ನೀಡಬಾರದು. ಆದರೆ, ಅಪರಾಧಿಗಳು ರಾಜಕೀಯಕ್ಕೆ ಬರುವುದನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ತಿದ್ದುಪಡಿ ತರುವಂತೆ ನ್ಯಾಯಾಲಯವು ಪದೇ ಪದೇ ಮನವಿ ಮಾಡಿದರೂ ಅದನ್ನು ಕೇಳಿಸಿಕೊಳ್ಳಬೇಕಾದ ಕಿವಿ ಕಿವುಡಾಗಿವೆ. ರಾಜಕೀಯ ಪಕ್ಷಗಳೂ ಗಾಢ ನಿದ್ದೆಯಿಂದ ಏಳಲು ಬಯಸುತ್ತಿಲ್ಲ ಎಂದು ಚಾಟಿ ಬೀಸಿತು. ಇದನ್ನು ತಡೆಯಲು ತುರ್ತಾಗಿ ಏನಾದರೂ ಮಾಡಬೇಕೆಂದು ನ್ಯಾಯಾಲಯವು ಇಚ್ಛಿಸಿದರೂ, ಅದರ ಕೈಗಳನ್ನು ಕಟ್ಟಿಹಾಕಲಾಗಿದೆ. ನ್ಯಾಯಾಲಯವು, ಕಾನೂನು ಮಾಡುವಂತೆ ಹೇಳಬಹುದೇ ಹೊರತು, ಶಾಸಕಾಂಗದ ಕರ್ತವ್ಯಕ್ಕೆ ಮೀಸಲಾದ ಕ್ಷೇತ್ರವನ್ನು ಅತಿಕ್ರಮಿಸಲಾಗದು ಎಂದು ಅಭಿಪ್ರಾಯಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT