ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಶೇ10 ಮೀಸಲಾತಿ: 13ರಿಂದ ‘ಸುಪ್ರೀಂ’ನಲ್ಲಿ ವಿಚಾರಣೆ

Last Updated 8 ಸೆಪ್ಟೆಂಬರ್ 2022, 10:59 IST
ಅಕ್ಷರ ಗಾತ್ರ

ನವದೆಹಲಿ: ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್‌) ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಸಂಬಂಧಿಸಿ ನ್ಯಾಯನಿರ್ಣಯಕ್ಕಾಗಿ ಸುಪ್ರೀಂಕೋರ್ಟ್‌ ಗುರುವಾರ ಮೂರು ಪ್ರಮುಖ ಅಂಶಗಳನ್ನು ಗುರುತಿಸಿದೆ.

ಈ ಅರ್ಜಿಗಳ ವಿಚಾರಣೆಯನ್ನು ಸೆ.13ರಿಂದ ಆರಂಭಿಸಲಾಗುವುದು ಎಂದು ಮುಖ್ಯನ್ಯಾಯಮೂರ್ತಿ ಯು.ಯು.ಲಲಿತ್‌ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠ ಹೇಳಿದೆ.ನ್ಯಾಯಮೂರ್ತಿಗಳಾದ ದಿನೇಶ ಮಾಹೇಶ್ವರಿ, ಎಸ್‌.ರವೀಂದ್ರ ಭಟ್‌, ಬೇಲಾ ಎಂ.ತ್ರಿವೇದಿ ಹಾಗೂ ಜೆ.ಬಿ.ಪಾರ್ದಿವಾಲಾ ಅವರು ಈ ಪೀಠದಲ್ಲಿದ್ದಾರೆ.

ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಅವರು ಮೂರು ಅಂಶಗಳನ್ನುಸಾಂವಿಧಾನಿಕ ಪೀಠಕ್ಕೆ ಸಲ್ಲಿಸಿದ್ದಾರೆ.

‘ನ್ಯಾಯನಿರ್ಣಯಕ್ಕಾಗಿ ಅಟಾರ್ನಿ ಜನರಲ್ ಅವರು ಸಲ್ಲಿಸಿರುವ ಮೂರು ಅಂಶಗಳು, ಇಡಬ್ಲ್ಯುಎಸ್‌ಗೆ ನೀಡಲಾಗಿರುವ ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಒಳಗೊಂಡಿವೆ’ ಎಂದು ಸಿಜೆಐ ಲಲಿತ್‌ ಹೇಳಿದರು.

‘ಕೇಂದ್ರ ಸರ್ಕಾರವು ಸಂವಿಧಾನದ 103ನೇ ತಿದ್ದುಪಡಿ ಕಾಯ್ದೆ ಮೂಲಕ, ಆರ್ಥಿಕ ಮಾನದಂಡದ ಆಧಾರದಲ್ಲಿ ಮೀಸಲಾತಿ ಸೇರಿದಂತೆ ವಿಶೇಷ ಸೌಲಭ್ಯ ನೀಡಿರುವುದು ಸಂವಿಧಾನದ ಮೂಲಸ್ವರೂಪಕ್ಕೆ ಧಕ್ಕೆಯಾಗಿದೆಯೇ’ ಎಂಬುದು ಮೊದಲ ಅಂಶವಾಗಿದೆ.

‘ಈ ಸಾಂವಿಧಾನಿಕ ತಿದ್ದುಪಡಿ ಮೂಲಕ (103ನೇ ತಿದ್ದುಪಡಿ) ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ವಿಶೇಷ ಅವಕಾಶ ಕಲ್ಪಿಸಿರುವುದು ಸಹ ಸಂವಿಧಾನದ ಮೂಲಸ್ವರೂಪಕ್ಕೆ ಧಕ್ಕೆ ತರುತ್ತದೆಯೇ’ ಎಂಬುದು ಎರಡನೇ ಅಂಶ.

‘ಎಸ್‌ಇಬಿಸಿ/ಒಬಿಸಿಗಳು, ಎಸ್‌ಸಿ,ಎಸ್‌ಟಿಗಳನ್ನು ಇಡಬ್ಲ್ಯೂಎಸ್‌ಗೆ ನೀಡಿರುವ ಮೀಸಲಾತಿ ಸೌಲಭ್ಯದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಈ ನಿರ್ಧಾರವು ಸಹ ಸಂವಿಧಾನದ ಮೂಲಸ್ವರೂಪಕ್ಕೆ ಧಕ್ಕೆ ಉಂಟು ಮಾಡುತ್ತದೆಯೇ’ ಎಂಬುದು ಮೂರನೇ ಅಂಶವಾಗಿದೆ ಎಂದು ಸಾಂವಿಧಾನಿಕ ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT