ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದರ್ಶನ ಸುದ್ದಿವಾಹಿನಿ: ಯುಪಿಎಸ್‌ಸಿ ಜಿಹಾದ್‌ ಪ್ರಸಾರಕ್ಕೆ ‘ಸುಪ್ರೀಂ’ ತಡೆ

ನಾಗರಿಕ ಸೇವಾ ಕ್ಷೇತ್ರಕ್ಕೆ ನುಸುಳಲು ಮುಸ್ಲಿಮರ ಹುನ್ನಾರ ಎಂಬ ಆರೋಪದ ಕಾರ್ಯಕ್ರಮ
Last Updated 16 ಸೆಪ್ಟೆಂಬರ್ 2020, 2:07 IST
ಅಕ್ಷರ ಗಾತ್ರ

ನವದೆಹಲಿ: ಸುದರ್ಶನ ಸುದ್ದಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಯುಪಿಎಸ್‌ಸಿ ಜಿಹಾದ್’ ಎಂಬ ಕಾರ್ಯಕ್ರಮ ಬಿತ್ತರಿಸದಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ತಡೆ ನೀಡಿದೆ.

‘ಒಂದು ಸಮುದಾಯವನ್ನು ಅವಹೇಳನ ಮಾಡುವ ಇಂತಹ ಕಾರ್ಯಕ್ರಮವನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಕಾರ್ಯಕ್ರಮದ ಉಳಿದ ಕಂತುಗಳನ್ನು ಪ್ರಸಾರ ಮಾಡದಂತೆಯೂ ಸುದ್ದಿವಾಹಿನಿಗೆ ತಾಕೀತು ಮಾಡಿದೆ.

‘ಪತ್ರಕರ್ತರಿಗೆ ಮುಕ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ. ಇಂದಿನ ದಿನಗಳಲ್ಲಿ ಪತ್ರಿಕೆಗಳನ್ನು ಓದುವ ಜನರಿಗಿಂತ ಟಿ.ವಿ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ಮುದ್ರಣ ಮಾಧ್ಯಮಕ್ಕಿಂತಹೆಚ್ಚೆಚ್ಚು ಜನರನ್ನು ತಲುಪುತ್ತಿರುವ ದೃಶ್ಯ ಮಾಧ್ಯಮಗಳನ್ನು ನಿಯಂತ್ರಿಸುವ ಅಗತ್ಯವಿದೆ’ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

‘ದೇಶದ ಆಡಳಿತ ಸೇವೆಗೆ ನುಸುಳಲುಮುಸಲ್ಮಾನರು ಹುನ್ನಾರ ನಡೆಸಿದ್ದಾರೆ ಎಂದು ಬಿಂಬಿಸಲು ಈ ಸುದ್ದಿ ವಾಹಿನಿ ಪ್ರಯತ್ನಿಸಿದೆ’ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ತರಾಟೆಗೆ ತೆಗೆದುಕೊಂಡಿದೆ.ನ್ಯಾಯಮೂರ್ತಿಗಳಾದ ಇಂದು ಮಲ್ಹೋತ್ರಾ ಮತ್ತು ಕೆ.ಎಂ. ಜೋಸೆಫ್‌ ಕೂಡ ಈ ಪೀಠದಲ್ಲಿದ್ದರು.

ಅವಹೇಳನ ಸಲ್ಲದು:‘ದೇಶದ ಎಲ್ಲ ಸಮುದಾಯದವರು ಸಾಮರಸ್ಯದಿಂದ ಕೂಡಿ ಬಾಳಬೇಕು ಎನ್ನುವುದು ಸಂವಿಧಾನದ ಮೂಲ ತತ್ವ ಮತ್ತು ಆಶಯ. ಭಾರತ ಹಲವು ನಾಗರಿಕತೆ, ಸಂಸ್ಕೃತಿ ಮತ್ತು ಮೌಲ್ಯಗಳ ತವರು’ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಸುದರ್ಶನ ಸುದ್ದಿವಾಹಿನಿಯ ‘ಯುಪಿಎಸ್‌ಸಿ ಜಿಹಾದ್’ ಕಾರ್ಯಕ್ರಮ ಪ್ರಸಾರಕ್ಕೂ ಮುನ್ನವೇ ತಡೆ ನೀಡುವಂತೆ ಕೋರಿ ವಕೀಲ ಫಿರೋಜ್‌ ಇಕ್ಬಾಲ್‌ ಖಾನ್‌ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ತಡೆ ನೀಡಲು ಕೋರ್ಟ್‌ ಆಗಸ್ಟ್‌ 28ರಂದು ನಿರಾಕರಿಸಿತ್ತು.

‘ಈ ಕಾರ್ಯಕ್ರಮದ ಕೆಲವು ಕಂತುಗಳು ಈಗಾಗಲೇ ಪ್ರಸಾರವಾಗಿದ್ದು,ತಕ್ಷಣ ಕಾರ್ಯಕ್ರಮ ಪ್ರಸಾರಕ್ಕೆ ತಡೆ ನೀಡಬೇಕು’ ಎಂದು ಫಿರೋಜ್‌ ನ್ಯಾಯಾಲಯದ ಮೊರೆ ಹೋಗಿದ್ದರು.

ತನಿಖಾ ಪತ್ರಿಕೋದ್ಯಮ ಆಧರಿತ ಕಾರ್ಯಕ್ರಮ:‘ಯುಪಿಎಸ್‌ಸಿ ಜಿಹಾದ್‌’ ತನಿಖಾ ಪತ್ರಿಕೋದ್ಯಮ ಆಧರಿತ ಕಾರ್ಯಕ್ರಮವಾಗಿದ್ದು, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ’ ಎಂದು ಸುದ್ದಿವಾಹಿನಿ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್‌ ದಿವಾನ್ ಹೇಳಿದರು.

ಕೆಲವು ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಗುಂಪು ಚರ್ಚೆ ಗುಣಮಟ್ಟದ ಬಗ್ಗೆ ನ್ಯಾಯಮೂರ್ತಿಗಳು ಅಸಮಾಧಾನ ಹೊರಹಾಕಿದರು.

ಅಂಕುಶಕ್ಕೆ ಕೇಂದ್ರ ವಿರೋಧ: ಸುದ್ದಿವಾಹಿನಿಗಳನ್ನು ನಿಯಂತ್ರಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರದ ಪ್ರತಿನಿಧಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಬಲವಾಗಿ ವಿರೋಧಿಸಿದರು. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳನ್ನು ಪ್ರತ್ಯೇಕಿಸಿ ನೋಡುವುದು ಸಾಧುವಲ್ಲ ಎಂದರು. ‘ಕೆಲವೊಂದನ್ನು ನಿಯಂತ್ರಿಸುವ ಭರದಲ್ಲಿ ಕಾನೂನು ಎಲ್ಲವನ್ನೂ ನಿಯಂತ್ರಿಸುವಂತಾಗಬಾರದು’ ಎಂದು ಹೇಳಿದ ನ್ಯಾಯ
ಮೂರ್ತಿಗಳು, ವಿಚಾರಣೆಯನ್ನು ಸೆ.17ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT