ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ಹಂಚಿಕೆ: ವರದಿ ಸಲ್ಲಿಸಲು ಕೇಂದ್ರಕ್ಕೆ ‘ಸುಪ್ರೀಂ‘ ಸೂಚನೆ

Last Updated 9 ಆಗಸ್ಟ್ 2021, 9:11 IST
ಅಕ್ಷರ ಗಾತ್ರ

ನವದೆಹಲಿ: ‘ಕೋವಿಡ್‌–19‘ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವೈದ್ಯಕೀಯ ಆಮ್ಲಜನಕ ಹಂಚಿಕೆ ಮಾಡುವ ಸಂಬಂಧ ರಾಷ್ಟ್ರೀಯ ಕಾರ್ಯಪಡೆಯ (ಎನ್‌ಟಿಎಫ್‌) ಶಿಫಾರಸುಗಳನ್ನು ಆಧರಿಸಿ ತೆಗೆದುಕೊಂಡ ಕ್ರಮಗಳ ಕುರಿತ ವರದಿಯನ್ನು ಎರಡು ವಾರಗಳಲ್ಲಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಪ್ರಸ್ತುತ ಹಾಗೂ ಭವಿಷ್ಯದಲ್ಲಿ ಎದುರಾಗುವ ಅಗತ್ಯಗಳನ್ನು ಪೂರೈಸುವ ಕುರಿತು ನ್ಯಾಯಾಲಯ ನೇಮಿಸಿದ ಎನ್‌ಟಿಎಫ್‌ ನೀಡಿರುವ ಶಿಫಾರಸುಗಳನ್ನು ಕೇಂದ್ರ ಸರ್ಕಾರ ನೀತಿ ನಿರೂಪಣೆ ಹಂತದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನ್ಯಾಯಾಲಯ ರಚಿಸಿರುವ ಈ ರಾಷ್ಟ್ರೀಯ ಕಾರ್ಯಪಡೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿರುವ ಹಿರಿಯ ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರದ ತಜ್ಞರು ಇದ್ದಾರೆ.

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎಂ.ಆರ್ ಶಾ ಅವರನ್ನೊಳಗೊಂಡ ಪೀಠವು, ಹೆಚ್ಚಿನ ವಿಚಾರಣೆಗಾಗಿ ಈ ವಿಷಯವನ್ನು ಎರಡು ವಾರಗಳ ನಂತರ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು. ಹಾಗೆಯೇ ಕೋವಿಡ್ ಸಿದ್ಧತೆ ಕುರಿತು ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸುವ ವಿಷಯಗಳ ಪಟ್ಟಿಯಲ್ಲಿ ಇದನ್ನು ಸೇರಿಸಿತು.

ಎನ್‌ಟಿಎಫ್ ಸಮಿತಿಯು ಅಂತಿಮ ವರದಿ ಸಲ್ಲಿಸಿದೆ. ರಾಷ್ಟ್ರ ರಾಜಧಾನಿಗೆ ಆಮ್ಲಜನಕದ ಅಗತ್ಯತೆ ಕುರಿತು ಮೌಲ್ಯಮಾಪನ ನಡೆಸಿರುವ ಉಪ ಸಮಿತಿಯ ಮಧ್ಯಂತರ ವರದಿಯನ್ನು ಸಲ್ಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ದೆಹಲಿಗೆ 700 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕ ಪೂರೈಸಬೇಕೆಂಬ ನ್ಯಾಯಾಲಯದ ನಿರ್ದೇಶನ ಪಾಲಿಸದ ಅಧಿಕಾರಿಗಳ ವಿರುದ್ಧ ದೆಹಲಿ ಹೈಕೋರ್ಟ್‌ನ ನ್ಯಾಯಾಂಗ ನಿಂದನೆ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಆಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT