ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೈಸ್ತ –ಮುಸ್ಲಿಂ ದಲಿತರಿಗೆ ಮೀಸಲು ವಿಚಾರ: ಜನವರಿಯಲ್ಲಿ ‘ಸುಪ್ರೀಂ’ ಪರಿಶೀಲನೆ

Last Updated 7 ಡಿಸೆಂಬರ್ 2022, 15:32 IST
ಅಕ್ಷರ ಗಾತ್ರ

ನವದೆಹಲಿ: ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಮೀಸಲಾತಿ ಸೌಲಭ್ಯ ವಿಸ್ತರಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು 2023ರ ಜನವರಿಯಲ್ಲಿ ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್‌ ಬುಧವಾರ ತಿಳಿಸಿದೆ.

ಈ ಸಂಬಂಧ ಅಹವಾಲುಗಳನ್ನು ಪರಿಶೀಲಿಸಲು ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್‌ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿರುವುದಾಗಿ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ ಎಂದು ಪೀಠ ಹೇಳಿದೆ.

‘ಈ ಆಯೋಗ ವರದಿ ಸಲ್ಲಿಸುವವರೆಗೂ ಕಾಯಬೇಕಾ ಅಥವಾ ಈ ಸಂಬಂಧ ಲಭ್ಯ ಇರುವ ದಾಖಲೆಗಳ ಆಧಾರದ ಮೇಲೆ ನಿರ್ಧರಿಸಬಹುದಾ ಎಂಬುದನ್ನು ಮೊದಲು ಪರಿಶೀಲಿಸುವುದಾಗಿ’ ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌, ಅಭಯ್‌ ಎಸ್‌. ಓಕಾ ಮತ್ತು ವಿಕ್ರಂ ನಾಥ್‌ ಅವರನ್ನೊಳಗೊಂಡ ಪೀಠ ತಿಳಿಸಿದೆ.

ಕೇಂದ್ರದ ಪರ ವಿಚಾರ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಕ್ರೈಸ್ತ ಮತ್ತು ಇಸ್ಲಾಂ ಧರ್ಮದಲ್ಲಿ ದಲಿತರನ್ನು ಗುರುತಿಸಲು ಶಿಫಾರಸು ಮಾಡಿದ್ದ ನ್ಯಾಯಮೂರ್ತಿ ರಂಗನಾಥ್‌ ಮಿಶ್ರಾ ಆಯೋಗವನ್ನು (2007) ಕೇಂದ್ರ ಸರ್ಕಾರ ಅಂಗೀಕರಿಸಿಲ್ಲ. ಈ ಆಯೋಗದ ವರದಿಯು ‘ದೋಷಪೂರಿತ’ ಎಂದು ಕೇಂದ್ರ ಪರಿಗಣಿಸಿದೆ ಎಂದು ತಿಳಿಸಿದರು.

ಅರ್ಜಿದಾರರೊಬ್ಬರ ಪರ ವಾದಿಸಿದ ವಕೀಲ ಪ್ರಶಾಂತ್ ಭೂಷಣ್‌, ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದು ಅಸಾಂವಿಧಾನಿಕವಾಗಿದೆ. ಹಿಂದೂ, ಸಿಖ್‌, ಬೌದ್ಧ ಧರ್ಮದಲ್ಲಿರುವ ದಲಿತರಿಗೆ ಮೀಸಲಾತಿ ಸೌಲಭ್ಯ ನೀಡಲಾಗಿದೆ. ಆದರೆ ಇತರ ಧರ್ಮದಲ್ಲಿರುವ ದಲಿತರಿಗೆ ಈ ಅವಕಾಶ ಒದಗಿಸಲಾಗಿಲ್ಲ ಎಂದು ಅವರು ಹೇಳಿದರು. ಇದು ತಾರತಮ್ಯ ಎಂದು ನ್ಯಾಯಮೂರ್ತಿ ರಂಗನಾಥ್‌ ಮಿಶ್ರ ಆಯೋಗವೂ ಈಗಾಗಲೇ ಹೇಳಿದೆ ಎಂದು ಅವರು ತಿಳಿಸಿದರು.

‘ಜಾತಿ ವ್ಯವಸ್ಥೆಯು ಹಿಂದೂ ಧರ್ಮದ ಭಾಗವಾಗಿತ್ತು ಎಂಬುದರ ನೆಲೆಯಲ್ಲಿ ಇದನ್ನು ಊಹಿಸಬೇಕು’ ಎಂದು ಪೀಠ ಇದೇ ವೇಳೆ ತಿಳಿಸಿತು.

ಇತರ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲರಾದ ಸಿ.ಯು. ಸಿಂಗ್ ಮತ್ತು ಸಂಜಯ್ ಹೆಗ್ಡೆ ಅವರು ಭೂಷಣ್ ಅವರ ಅರ್ಜಿಯನ್ನು ಬೆಂಬಲಿಸಿದರು.

‘ಕ್ರೈಸ್ತ ಮತ್ತು ಇಸ್ಲಾಂನಲ್ಲಿ ಅಸ್ಪೃಶ್ಯತೆಯಂತಹ ದಬ್ಬಾಳಿಕೆಗಳು ಇಲ್ಲ ಎಂಬುದನ್ನು 1950ರ ಸಂವಿಧಾನ (ಪರಿಶಿಷ್ಟ ಜಾತಿ) ಆದೇಶವು ಈಗಾಗಲೇ ಸಾಬೀತು ಮಾಡಿದೆ. ಆ ಎರಡೂ ಧರ್ಮಗಳಲ್ಲಿ ಅಸ್ಪೃಶ್ಯತೆಯಂತಹ ಆಚರಣೆಗಳು ಇಲ್ಲ ಎಂಬ ಕಾರಣಕ್ಕೇ ಪರಿಶಿಷ್ಟ ಜಾತಿಗೆ ಸೇರಿದ ಜನರು ಆ ಧರ್ಮಗಳಿಗೆ ಮತಾಂತರವಾಗಿದ್ದಾರೆ. ಅಲ್ಲಿ ಅವರು ಅಂತಹ ದೌರ್ಜನ್ಯಕ್ಕೆ ಒಳಗಾಗುತ್ತಿಲ್ಲ. ಈ ಕಾರಣದಿಂದ ಅವರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ಮತ್ತು ಮೀಸಲಾತಿ ನೀಡಲು ಸಾಧ್ಯವಿಲ್ಲ’ ಎಂದು ಕೇಂದ್ರ ಸರ್ಕಾರ ನವೆಂಬರ್‌ನಲ್ಲಿ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT