ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಂಧೆ ಸರ್ಕಾರದ ವಿರುದ್ಧ ಉದ್ಧವ್‌ ಬಣದಿಂದ ಸುಪ್ರೀಂಗೆ ಹೊಸ ಅರ್ಜಿ

Last Updated 8 ಜುಲೈ 2022, 7:04 IST
ಅಕ್ಷರ ಗಾತ್ರ

ಮುಂಬೈ: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ಅವರ ನೇಮಕವನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಬಣ ಸಲ್ಲಿಸಿರುವ ಹೊಸ ಅರ್ಜಿಯನ್ನು ಜುಲೈ 11 ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ಅರ್ಜಿಯನ್ನು ಜುಲೈ 11 ರಂದು ಸೂಕ್ತ ಪೀಠಕ್ಕೆ ವರ್ಗಾಯಿಸಲಾಗುವುದು ಎಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆಕೆ ಮಾಹೇಶ್ವರಿ ಅವರ ರಜಾಕಾಲದ ಪೀಠ ಹೇಳಿದೆ.

ಶಿವಸೇನೆ ನಾಯಕ ಸುಭಾಷ್ ದೇಸಾಯಿ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ತ್ ಕಾಮತ್, ಜುಲೈ 11 ರಂದು ವಿಚಾರಣೆಗೆ ಬರಲಿರುವ ಬಾಕಿ ಇರುವ ಇತರ ಅರ್ಜಿಗಳ ಜೊತೆಗೆ ಹೊಸ ಮನವಿಯನ್ನು ಸೇರಿಸಲು ಕೋರುತ್ತಿದ್ದೇವೆ ಎಂದು ಹೇಳಿದರು.

ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿರುವುದನ್ನು ನಾವು ಪ್ರಶ್ನಿಸುತ್ತಿದ್ದೇವೆ ಎಂದು ಕಾಮತ್ ಹೇಳಿದ್ದಾರೆ.

ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ವಿರುದ್ಧ ಬಂಡಾಯ ಎದ್ದ ಶಿಂಧೆ ಅವರು ಬಿಜೆಪಿ ಬೆಂಬಲದೊಂದಿಗೆ ಜೂನ್‌ 30ರಂದು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ವಿಧಾನಸಭೆಯಲ್ಲಿ ಜುಲೈ 4ರಂದು (ಸೋಮವಾರ) ವಿಶ್ವಾಸ ಮತ ಸಾಬೀತು ಮಾಡಿದ್ದರು.

288 ಸದಸ್ಯ ಬಲದ (ಈಗ 287 ಸದಸ್ಯರು ಇದ್ದಾರೆ) ವಿಧಾನಸಭೆಯಲ್ಲಿ ಶಿಂಧೆ ಅವರ ಪರವಾಗಿ 164 ಮತಗಳು ಚಲಾವಣೆ ಆದವು. ವಿಶ್ವಾಸಮತದ ವಿರುದ್ಧ 99 ಮತಗಳು ಚಲಾವಣೆ ಆಗಿವೆ. ಒಟ್ಟು 263 ಶಾಸಕರು ಮತ ಚಲಾಯಿಸಿದ್ದರು.

ಶಿಂಧೆ ಮತ್ತು ದೇವೇಂದ್ರ ಫಡಣವೀಸ್‌ ನೇತೃತ್ವದ ಸರ್ಕಾರಕ್ಕೆ ಸಿಕ್ಕ ಎರಡನೇ ಮಹತ್ವದ ಗೆಲುವು ಇದು. ಜುಲೈ 3ರಂದು (ಭಾನುವಾರ) ನಡೆದ ಸ್ಪೀಕರ್ ಚುನಾವಣೆಯಲ್ಲಿ ಬಿಜೆಪಿ ಶಾಸಕ ರಾಹುಲ್‌ ನಾರ್ವೇಕರ್ ಗೆದ್ದಿದ್ದರು. ರಾಹುಲ್ ಅವರಿಗೆ 164 ಮತಗಳು ಸಿಕ್ಕಿದ್ದವು. ಮಹಾ ವಿಕಾಸ್ ಆಘಾಡಿಯ ಅಭ್ಯರ್ಥಿ ರಾಜನ್‌ ಸಾಳ್ವಿ ಅವರಿಗೆ 107 ಮತಗಳು ಸಿಕ್ಕಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT