ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನವಾಪಿ ಮಸೀದಿ ಪ್ರಕರಣ: ಏಪ್ರಿಲ್‌ 21ರಂದು ಸುಪ್ರೀಂ ಕೋರ್ಟ್ ವಿಚಾರಣೆ

Last Updated 28 ಮಾರ್ಚ್ 2023, 11:44 IST
ಅಕ್ಷರ ಗಾತ್ರ

ನವದೆಹಲಿ: ಜ್ಞಾನವಾಪಿ ಮಸೀದಿ ಸಂಕೀರ್ಣದ ವಿವಾದಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ಕ್ರೋಢಿಕರಿಸುವಂತೆ ಹಿಂದೂ ಕಡೆಯ ಅರ್ಜಿದಾರರ ಮನವಿಯನ್ನು ಏಪ್ರಿಲ್‌ 21ರಂದು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋ‌ರ್ಟ್‌ ಮಂಗಳವಾರ ಸಮ್ಮತಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿ.ಎಸ್‌. ನರಸಿಂಹ ಮತ್ತು ಜೆ.ಬಿ.ಪಾರ್ದಿವಾಲ ಅವರಿದ್ದ ಪೀಠ ಈ ಕುರಿತು ಒಪ್ಪಿಗೆ ಸೂಚಿಸಿತು. ವಕೀಲ ವಿಷ್ಣು ಶಂಕರ್‌ ಜೈನ್‌ ಅವರು ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ.

ಜ್ಞಾನವಾಪಿ ಮಸೀದಿ ಸಂಕೀರ್ಣದ ವಿವಾದಕ್ಕೆ ಸಂಬಂಧಿಸಿದ ಎಲ್ಲ ಸಿವಿಲ್‌ ಮೊಕದ್ದಮೆಗಳನ್ನು ಒಟ್ಟುಗೂಡಿಸುವ ಕುರಿತ ಮನವಿ ಸಂಬಂಧ, ನಿರ್ಧಾರ ಪ್ರಕಟಿಸುವುದನ್ನು ವಾರಾಣಸಿಯ ಜಿಲ್ಲಾ ನ್ಯಾಯಾಧೀಶರು ಐದು ಬಾರಿ ಮುಂದೂಡಿದ್ದರು.

‘ನಾವು ಏಪ್ರಿಲ್‌ 21ರಂದು ಈ ಕುರಿತ ಅರ್ಜಿಯ ವಿಚಾರಣೆಗೆ ಪಟ್ಟಿ ಮಾಡುತ್ತೇವೆ’ ಎಂದ ಚಂದ್ರಚೂಡ್‌ ನೇತೃತ್ವದ ಪೀಠ ತಿಳಿಸಿತು.

ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ‘ಶಿವಲಿಂಗ’ ಕಂಡು ಬಂದಿದೆ ಎಂದು ಹೇಳಲಾದ ಪ್ರದೇಶದ ಸಂರಕ್ಷಣೆಯನ್ನು ಮುಂದಿನ ಆದೇಶದವರೆಗೆ ಸುಪ್ರೀಂಕೋರ್ಟ್‌ ವಿಸ್ತರಿಸಿತು.

ಜ್ಞಾನವಾಪಿ ಮಸೀದಿಯು ಮೂಲವಾಗಿ ಹಿಂದೂ ದೇವಸ್ಥಾನವಾಗಿದ್ದು, ಇಲ್ಲಿ ಶಿವಲಿಂಗ ಮೂರ್ತಿಯಿದ್ದು, ಪೂಜೆಗೆ ಅವಕಾಶ ಕೊಡಬೇಕೆಂದು ಹಾಗೂ ಮುಸ್ಲಿಮರ ಪ್ರಾರ್ಥನೆಗೆ ಅವಕಾಶ ಕೊಡಬಾರದು ಎಂದು ಕೋರಿ ಹಿಂದೂಗಳು ಅರ್ಜಿ ಸಲ್ಲಿಸಿದ್ದರು, ಇದರ ವಿಚಾರಣೆಗೆ ವಾರಣಾಸಿ ಸಿವಿಲ್ ನ್ಯಾಯಾಲಯ ಅವಕಾಶ ಕೊಟ್ಟಿತು. ಇದಕ್ಕೆ ಪ್ರತಿಯಾಗಿ ಮುಸ್ಲಿಮರು ಸಲ್ಲಿಸಿದ್ದ ‌ಅರ್ಜಿ ತಿರಸ್ಕಾರಗೊಂಡಿತ್ತು.

ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಾಲಯ ತೀರ್ಪು ಕೊಡಲೇ ಇಲ್ಲ. ಈ ನಡುವೆ ಹಿಂದೂ ಪರ ವಕೀಲರು ಮಸೀದಿಯೊಳಗಿನ ಲಿಂಗ ಪತ್ತೆಗಾಗಿ ವೈಜ್ಞಾನಿಕ ಸರ್ವೆ ನಡೆಸಲು ನ್ಯಾಯಮೂರ್ತಿಗಳನ್ನು ಆಗ್ರಹಿಸಿದರು. ಆದರೆ ಪ್ರತಿವಾದಿಗಳು ’ಅಲ್ಲಿ ಇರುವುದು ಕಾರಂಜಿ ಹೊರತು ಶಿವಲಿಂಗವಲ್ಲ’ ಎಂದು ಪ್ರತಿವಾದಿಸಿದ್ದರು.

ಅದಾಗ್ಯೂ ಹಿಂದೂ ದಾವೆದಾರರು ಭಾರತದ ಪುರಾತತ್ವ ಇಲಾಖೆ ಮೂಲಕ ’ಕಾರ್ಬನ್ ಡೇಟ್’(ವಸ್ತುವಿನ ನಿರ್ಮಾಣ ಕಾಲ) ಸಮೀಕ್ಷೆ ನಡೆಸಬೇಕೆಂದು ಆಗ್ರಹಿಸಿದರು. ಆದರೆ ವಾರಣಾಸಿಯ ಸಿವಿಲ್ ನ್ಯಾಯಾಲಯ ಇದನ್ನು ತಿರಸ್ಕರಿಸಿತ್ತು. ಇದರ ವಿರುದ್ಧ ಹಿಂದೂ ಪರ ವಕೀಲರು ಸುಪ್ರೀಂ ಕೋರ್ಟ್ ಮೊರೆಹೋದರು. ನಂತರ ಪ್ರಕರಣವನ್ನು ಸಿವಿಲ್ ಕೋರ್ಟ್‌ನಿಂದ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ವರ್ಗಾಯಿಸಲು ಸುಪ್ರೀಂಕೋರ್ಟ್ ಆದೇಶಿಸಿತ್ತು. ಜತೆಗೆ ತೀರ್ಪು ಬರುವವರೆಗೆ ಜ್ಞಾನವಾಪಿ ಮಸೀದಿಗೆ ಅಗತ್ಯ ಭದ್ರತೆಯನ್ನೂ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಆದರೆ ವಾರಣಾಸಿ ಜಿಲ್ಲಾ ನ್ಯಾಯಾಲಯವು ಈ ಕುರಿತು ತೀರ್ಪು ಕಾಯ್ದಿರಿಸುತ್ತಾ ಹೋಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT