ಶನಿವಾರ, ಜುಲೈ 2, 2022
25 °C

ಏ.24ಕ್ಕೆ ಜಮ್ಮುವಿಗೆ ಮೋದಿ; ಉಗ್ರರ ದಾಳಿಯಲ್ಲಿ ಎಎಸ್‌ಐ ಹುತಾತ್ಮ, ನಾಲ್ವರಿಗೆ ಗಾಯ

ಪಿಟಿಐ/ ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

Prajavani

ಜಮ್ಮು: ಇಲ್ಲಿನ ಜಲಲಬಾದ್‌ ಸಮೀಪದ ಸುಜ್ವಾನ್‌ ಪ್ರದೇಶದಲ್ಲಿ ಶುಕ್ರವಾರ ಉಗ್ರರ ವಿರುದ್ಧ ಭದ್ರತಾಪಡೆಗಳು ಆರಂಭಿಸಿರುವ ಕಾರ್ಯಾಚರಣೆಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಎಎಸ್‌ಐ ಹುತಾತ್ಮರಾಗಿದ್ದು, ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.

ಎಸ್‌.ಪಿ.ಪಟೇಲ್‌ ಹುತಾತ್ಮರಾದ ಎಎಸ್‌ಐ. ಹೆಡ್‌ಕಾನ್‌ಸ್ಟೆಬಲ್‌ ಬಾಲರಾಜ್‌ ಸಿಂಗ್‌, ಎಸ್‌ಪಿಒ ಸಹಿಲ್‌ ಶರ್ಮಾ, ಸಿಐಎಸ್‌ಎಫ್‌ನ ಒಡಿಶಾ ಮೂಲದ ಪ್ರಮೋದ್‌ ಪಾತ್ರ, ಅಸ್ಸಾಂನ ಅಮಿರ್‌ ಸೊರನ್‌ ಗಾಯಗೊಂಡವರು. ಜಮ್ಮುವಿನ ಹೊರ ಭಾಗದಲ್ಲಿರುವ ಸುಜ್ವಾನ್‌ ಸೇನಾ ಶಿಬಿರದ ಸಮೀಪದಲ್ಲಿ ಈ ಘಟನೆ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳಲ್ಲಿ ಸಾಂಬಾ ಜಿಲ್ಲೆಗೆ ಭೇಟಿ ನೀಡುವುದು ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆ ಹೆಚ್ಚಿಸಲಾಗಿದೆ.

ಏಪ್ರಿಲ್‌ 24ರಂದು ರಾಷ್ಟ್ರೀಯ ಪಂಚಾಯತಿ ರಾಜ್‌ ದಿನದ ಪ್ರಯುಕ್ತ ಪ್ರಧಾನಿ ಮೋದಿ ಅವರು ಪಾಲಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎನ್‌ಕೌಂಟರ್‌ ನಡೆದಿರುವ ಸ್ಥಳದಿಂದ ಪಾಲಿ ಗ್ರಾಮವು 17 ಕಿ.ಮೀ. ದೂರದಲ್ಲಿದೆ.

ಪೊಲೀಸ್‌ ವಿಶೇಷ ಕಾರ್ಯಾಚರಣೆ ತಂಡ ಮತ್ತು ಸಿಆರ್‌ಪಿಎಫ್‌ ಜಂಟಿ ಶೋಧ ಕಾರ್ಯಾಚರಣೆಯ ವೇಳೆ ಎನ್‌ಕೌಂಟರ್‌ ಶುರುವಾಗಿದೆ ಎಂದು ಜಮ್ಮು ಪೊಲೀಸ್‌ ಹೆಚ್ಚುವರಿ ಮಹಾನಿರ್ದೇಶಕ ಮುಕೇಶ್‌ ಸಿಂಗ್‌ ಹೇಳಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹ ಹೊಂದಿರುವ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿಯನ್ನು ಆಧರಿಸಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಪಾಕಿಸ್ತಾನ ಮೂಲದ ಜೈಷ್‌–ಎ–ಮೊಹಮ್ಮದ್‌ ಸಂಘಟನೆಗೆ ಸೇರಿದ ಕನಿಷ್ಠ ಇಬ್ಬರು ಉಗ್ರರು ಸುಂಜ್ವಾನ್‌ ಸೇನಾ ಶಿಬಿರದ ಸಮೀಪದಲ್ಲೇ ಅಡಗಿದ್ದರ ಬಗ್ಗೆ ಮಾಹಿತಿ ಸಿಕ್ಕಿತ್ತು. ಅವರು ನಗರದಲ್ಲಿ ಪ್ರಮುಖ ದಾಳಿ ನಡೆಸಲು ಹೊಂಚು ಹಾಕಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ–

ಎನ್‌ಕೌಂಟರ್‌ ಮುಂದುವರಿದಿದ್ದು, ಭದ್ರತಾ ಪಡೆಯ ಒಬ್ಬ ಸಿಬ್ಬಂದಿ ಸಾವಿಗೀಡಾಗಿದ್ದು, ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿಯ ಮೇಲೆ ಉಗ್ರರು ಗ್ರೆನೇಡ್‌ ಮತ್ತು ಗುಂಡಿನ ದಾಳಿ ನಡೆಸಿದ್ದಾರೆ. ಅದರಿಂದಾಗಿ ಗುಂಡಿನ ಚಕಮಕಿ ಆರಂಭವಾಗಿದೆ. ಹೆಚ್ಚುವರಿ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿರುವುದಾಗಿ ತಿಳಿದು ಬಂದಿದೆ.

2018ರ ಫೆಬ್ರುವರಿ 10ರಂದು ಜೈಷ್‌ ಸಂಘಟನೆಯ ಉಗ್ರರು ಸುಂಜ್ವಾನ್‌ ಸೇನಾ ಶಿಬಿರದ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ಚಕಮಕಿಯಲ್ಲಿ ಆರು ಯೋಧರು ಸೇರಿ ಏಳು ಜನರು ಸಾವಿಗೀಡಾಗಿದ್ದರು. ಮೂವರು ಉಗ್ರರನ್ನು ಹೊಡೆದುರುಳಿಸಲಾಗಿತ್ತು.

2019ರ ಆಗಸ್ಟ್‌ನಲ್ಲಿ ವಿಶೇಷ ಸ್ಥಾನಮಾನ ರದ್ದು ಪಡಿಸಿದ ನಂತರ ಗಡಿ ಭಾಗಗಳಿಗೆ ಭೇಟಿಯನ್ನು ಹೊರತು ಪಡಿಸಿದರೆ, ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಮೋದಿ ಭೇಟಿ ನೀಡುತ್ತಿದ್ದಾರೆ.

ಇದನ್ನೂ ಓದಿ–

2019ರ ಅಕ್ಟೋಬರ್‌ 27ರಂದು ರಾಜೌರಿಯಲ್ಲಿ ಹಾಗೂ 2021ರ ನವೆಂಬರ್‌ 3ರಂದು ನೌಶೆರಾ ಸೆಕ್ಟರ್‌ನಲ್ಲಿ ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು