ಸೋಮವಾರ, ಸೆಪ್ಟೆಂಬರ್ 20, 2021
25 °C
ವಿಳಂಬ ತಪ್ಪಿಸಲು ಪರಿಶೀಲನಾ ವ್ಯವಸ್ಥೆ ರೂಪಿಸಲು ಸಿಬಿಐ ಮುಖ್ಯಸ್ಥರಿಗೆ ‘ಸುಪ್ರೀಂ’ ಸೂಚನೆ

ಭ್ರಷ್ಟಾಚಾರ ಪ್ರಕರಣಗಳಲ್ಲಿ ಮೇಲ್ಮನವಿ ವಿಳಂಬ: ಸಿಬಿಐಗೆ ಛೀಮಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭ್ರಷ್ಟಾಚಾರ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿದ ಸಿಬಿಐಗೆ ಛೀಮಾರಿ ಹಾಕಿರುವ ಸುಪ್ರೀಂ ಕೋರ್ಟ್, ಅಧಿಕಾರಿಗಳ ಕಾರ್ಯವಿಧಾನವು ಆರೋಪಿಗಳೊಂದಿಗೆ ಸಹಭಾಗಿತ್ವ ಹೊಂದಿರುವ ಬಗ್ಗೆ ಅನುಮಾನ ಮೂಡಿಸುತ್ತದೆ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎಂ.ಆರ್. ಷಾ ಅವರನ್ನೊಳಗೊಂಡ ನ್ಯಾಯಪೀಠವು ಈ ಕುರಿತು ತೀಕ್ಷ್ಣವಾದ ಹೇಳಿಕೆ ನೀಡಿದ್ದು, ಮೇಲ್ಮನವಿ ಸಲ್ಲಿಸುವಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ಪರಿಶೀಲನಾ ವ್ಯವಸ್ಥೆಯೊಂದನ್ನು ರೂಪಿಸುವುವಂತೆ ಸಿಬಿಐ ಮುಖ್ಯಸ್ಥರಿಗೆ ಸೂಚನೆ ನೀಡಿದೆ.

ಛತ್ತೀಸಗಡ ಹೈಕೋರ್ಟ್‌ನ ತೀರ್ಪಿನ ವಿರುದ್ಧ 647 ದಿನಗಳ ಕಾಲ ವಿಳಂಬವಾಗಿ ಮೇಲ್ಮನವಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಪೀಠವು, ಖೋಟಾ ಹಣ ಮತ್ತು ದುರುಪಯೋಗ ಪ್ರಕರಣದಲ್ಲಿ ಈಗಾಗಲೇ ಆರೋಪಿಗಳಿಗೆ ಮೂರು ವರ್ಷ ಶಿಕ್ಷೆಯಾಗಿದೆ ಎಂದು ಹೇಳಿದೆ.

‘ಕೋವಿಡ್‌–19 ಸಾಂಕ್ರಾಮಿಕ ರೋಗದ ಕಾರಣಕ್ಕಾಗಿ ಮೇಲ್ಮನವಿ ಅರ್ಜಿ ಸಲ್ಲಿಸಲು ವಿಳಂಬವಾಯಿತು’ ಎನ್ನುವ ಸಿಬಿಐನ ವಾದವನ್ನು ತಳ್ಳಿಹಾಕಿದ ನ್ಯಾಯಪೀಠವು, ಇದು ಸ್ವೀಕಾರಾರ್ಹವಲ್ಲ ಎಂದೂ ಹೇಳಿತು.

‘ಭವಿಷ್ಯದಲ್ಲಿ ಈ ರೀತಿಯ ವಿಳಂಬಗಳು ಸಂಭವಿಸದಂತೆ ಸಿಬಿಐ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಿಳಂಬ ಧೋರಣೆಯು ಗಂಭೀರ ಅನುಮಾನಗಳನ್ನು ಉಂಟುಮಾಡಲು ಕಾರಣವಾಗುತ್ತವೆ. ಐಸಿಟಿ ವೇದಿಕೆಯಲ್ಲಿ ಮೇಲ್ಮನವಿ ಸಲ್ಲಿಸುವಿಕೆಯನ್ನು ಮೇಲ್ವಿಚಾರಣೆ ಮಾಡಲು ಅಗತ್ಯ ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಸಿಬಿಐ ನಿರ್ದೇಶಕರಿಗೆ ನಿರ್ದೇಶಿಸುತ್ತೇವೆ’ ಎಂದು ನ್ಯಾಯಪೀಠವು ಹೇಳಿದೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ಈ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ಉಲ್ಲೇಖಿಸಲು ಪ್ರಯತ್ನಿಸಿದರು.

‘ಇಂಥ ಗಂಭೀರವಾದ ವಿಷಯದಲ್ಲಿ ಮೇಲ್ಮನವಿ ಸಲ್ಲಿಸಲು ತ್ವರಿತವಾಗಿ ಏಕೆ ಕ್ರಮ ಕೈಗೊಳ್ಳಲಿಲ್ಲ? ಅಧಿಕಾರಿಗಳ ಈ ಕಾರ್ಯವಿಧಾನವು, ಮೇಲ್ಮನವಿಯನ್ನು ಸಲ್ಲಿಸದಂತೆ ಆರೋಪಿಗಳೊಂದಿಗೆ ಸಂಪರ್ಕ ಹೊಂದಿರುವುದನ್ನು ಸೂಚಿಸುತ್ತದೆ’ ಎಂದು ನ್ಯಾಯಪೀಠವು ಹೇಳಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು