ಮಂಗಳವಾರ, ಜನವರಿ 25, 2022
25 °C
ಓಮೈಕ್ರಾನ್: ರಾಜಸ್ಥಾನದಲ್ಲಿ 9, ಮಹಾರಾಷ್ಟ್ರದಲ್ಲಿ 7, ದೆಹಲಿಯಲ್ಲಿ ಒಬ್ಬರಿಗೆ ಸೋಂಕು ದೃಢ

ದೇಶದಲ್ಲಿ ಒಂದೇ ದಿನ ಓಮೈಕ್ರಾನ್‌ನ 17 ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ (ಪಿಟಿಐ): ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ಓಮೈಕ್ರಾನ್‌ನ 17 ಪ್ರಕರಣಗಳು ಭಾರತದಲ್ಲಿ ಭಾನುವಾರ ಒಂದೇ ದಿನ ಪತ್ತೆ ಆಗಿವೆ. ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಒಂಬತ್ತು, ಮಹಾರಾಷ್ಟ್ರದ ಪುಣೆಯಲ್ಲಿ ಏಳು, ದೆಹಲಿಯಲ್ಲಿ ಒಂದು ಪ‍್ರಕರಣಗಳು ದೃಢಪಟ್ಟಿವೆ. ದೇಶದಲ್ಲಿ ಈವರೆಗೆ ಓಮೈಕ್ರಾನ್‌ ತಳಿಯ 21 ಸೋಂಕು ಪ್ರಕರಣಗಳು ವರದಿ ಆಗಿವೆ. 

ಹೆಚ್ಚಿನ ಪ್ರಕರಣಗಳಲ್ಲಿ ಸೋಂಕಿತ ವ್ಯಕ್ತಿಗಳು ದಕ್ಷಿಣ ಆಫ್ರಿಕಾ ಖಂಡದ ದೇಶಗಳಿಗೆ ಇತ್ತೀಚೆಗೆ ಭೇಟಿ ಕೊಟ್ಟವರು ಅಥವಾ ಅಲ್ಲಿಗೆ ಹೋಗಿ ಬಂದವರ ಜತೆಗೆ ಸಂಪರ್ಕದಲ್ಲಿದ್ದವರು. 

ಈಗ, ನಾಲ್ಕು ರಾಜ್ಯಗಳು ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಓಮೈಕ್ರಾನ್‌ ಪ್ರಕರಣ ದೃಢಪಟ್ಟಂತಾಗಿದೆ. 

ಜೈಪುರದಲ್ಲಿ ಪತ್ತೆಯಾದ ಒಂಬತ್ತು ಪ್ರಕರಣಗಳಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದ್ದಾರೆ. ಈ ನಾಲ್ವರು ದಕ್ಷಿಣ ಆಫ್ರಿಕಾಕ್ಕೆ ಇತ್ತೀಚೆಗೆ ಹೋಗಿ ಬಂದಿದ್ದರು. ‘ಈ ಒಂಬತ್ತು ಜನರಲ್ಲಿ ಪತ್ತೆಯಾದ ವೈರಾಣುವಿನ ಸಂರಚನೆ ವಿಶ್ಲೇಷಣೆಯಲ್ಲಿ ಓಮೈಕ್ರಾನ್‌ ಸೋಂಕು ಇರುವುದು ದೃಢಪಟ್ಟಿತು’ ಎಂದು ರಾಜಸ್ಥಾನ ಆರೋಗ್ಯ ಕಾರ್ಯದರ್ಶಿ ವೈಭವ್‌ ಗಲ್ರಿಯಾ ತಿಳಿಸಿದ್ದಾರೆ. 

ಮಹಾರಾಷ್ಟ್ರದಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ನೈಜೀರಿಯಾದಿಂದ ಬಂದ ತಾಯಿ, ಮಗಳು ಮತ್ತು ಒಬ್ಬ ಸಂಬಂಧಿ ಸೇರಿದ್ದಾರೆ. ಇನ್ನೊಬ್ಬರು ಫಿನ್ಲೆಂಡ್‌ನಿಂದ ಇತ್ತೀಚೆಗೆ ಬಂದವರು. ಮಹಾರಾಷ್ಟ್ರದಲ್ಲಿ ದೃಢಪಟ್ಟ ಪ್ರಕರಣಗಳ ಒಟ್ಟು ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. 

ಎಲ್ಲ ಪ್ರಕರಣಗಳಲ್ಲಿಯೂ ಸೋಂಕಿತರ ಸಂಪರ್ಕಿತರ ಪತ್ತೆ ಕೆಲಸ ನಡೆಯುತ್ತಿದೆ. 

ದೇಶದಲ್ಲಿ ಓಮೈಕ್ರಾನ್‌ನ ಮೊದಲ ಪ್ರಕರಣ ಕರ್ನಾಟಕದಲ್ಲಿ ಗುರುವಾರ ದೃಢಪಟ್ಟಿತ್ತು. 66 ವರ್ಷದ ಆಫ್ರಿಕಾದ ವ್ಯಕ್ತಿ ಮತ್ತು 46 ವರ್ಷ ವಯಸ್ಸಿನ ಬೆಂಗಳೂರಿನ ವೈದ್ಯರಲ್ಲಿ ಪ್ರಕರಣ ಪತ್ತೆಯಾಗಿತ್ತು. ಬೆಂಗಳೂರಿನ ವೈದ್ಯ ಯಾವುದೇ ದೇಶಕ್ಕೆ ಇತ್ತೀಚೆಗೆ ಹೋಗಿಲ್ಲ. ಈ ಇಬ್ಬರೂ ಲಸಿಕೆಯ ಎರಡೂ ಡೋಸ್‌ ಹಾಕಿಸಿಕೊಂಡಿದ್ದರು. 

ಗುಜರಾತ್‌ನ ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬರಲ್ಲಿ ಶನಿವಾರ ಸೋಂಕು ದೃಢಪಟ್ಟಿತ್ತು. ಮಹಾರಾಷ್ಟ್ರದ ಠಾಣೆಯ ವ್ಯಕ್ತಿಯಲ್ಲಿಯೂ ಹೊಸ ವೈರಾಣು ತಳಿ ಪತ್ತೆಯಾಗಿತ್ತು. ಸೋಂಕಿತರಲ್ಲಿ ಸೌಮ್ಯ ಸ್ವರೂಪದ ಲಕ್ಷಣಗಳಷ್ಟೇ ಕಾಣಿಸಿಕೊಂಡಿವೆ. 

– ಮಹಾರಾಷ್ಟ್ರದಲ್ಲಿ ಮೊದಲ ಓಮೈಕ್ರಾನ್ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ

– ದಕ್ಷಿಣ ಕೊರಿಯಾದಲ್ಲಿ ಮತ್ತೆ 3 ಓಮೈಕ್ರಾನ್ ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ರೂಪಾಂತರ ತಳಿ ಹೊಂದಿರುವವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ

– ಅಮೆರಿಕದ ನ್ಯೂಯಾರ್ಕ್‌ನಲ್ಲಿ ಮತ್ತೆ ಮೂರು ಪ್ರಕರಣ ಪತ್ತೆ; ಕೊಲರಾಡೊ, ಪೆನ್ಸಿಲ್ವೇನಿಯಾ, ಮಿಸ್ಸೌರಿ, ಮೆಸಾಚುಸೆಟ್ಸ್, ವಾಷಿಂಗ್ಟನ್‌, ಮೇರಿಲ್ಯಾಂಡ್‌ನಲ್ಲೂ ಕಾಣಿಸಿಕೊಂಡ ರೂಪಾಂತರ ತಳಿ

– ಆಸ್ಟ್ರೇಲಿಯಾದಲ್ಲಿ 5–11 ವರ್ಷದೊಳಗಿನ ಮಕ್ಕಳಿಗೆ ಜನವರಿ 10ರಿಂದ ಫೈಝರ್ ಲಸಿಕೆ 
ಅಮೆರಿಕ, ಬ್ರಿಟನ್‌ ಪ್ರವೇಶಕ್ಕೆ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ

– ಅಮೆರಿಕ ಹಾಗೂ ಬ್ರಿಟನ್‌ಗೆ ಹೋಗುವವರು ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ಹೊಂದಿರುವುದು ಇನ್ನು ಕಡ್ಡಾಯ. ಓಮೈಕ್ರಾನ್ ವ್ಯಾಪಿಸುತ್ತಿರುವ ಕಾರಣ, ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. 

ಮಂಗಳವಾರದಿಂದ ದೇಶವನ್ನು ಪ್ರವೇಶಿಸುವ ಎಲ್ಲ ಪ್ರಯಾಣಿಕರು 48 ಗಂಟೆಗೂ ಮುನ್ನ ಪಡೆದ ಆರ್‌ಟಿ–ಪಿಸಿಆರ್‌ ಪರೀಕ್ಷೆಯ ಫಲಿತಾಂಶದ ವರದಿ ಹೊಂದಿರಬೇಕು ಎಂದು ಬ್ರಿಟನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಎಲ್ಲ ದೇಶಗಳ, 12 ವರ್ಷ ಮೇಲ್ಪಟ್ಟ ಎಲ್ಲ  ಪ್ರಯಾಣಿಕರಿಗೂ ಈ ನಿಯಮ  ಅನ್ವಯವಾಗಲಿದೆ. ಈ ನಿಯಮವು ಪ್ರವಾಸೋದ್ಯಮಕ್ಕೆ ಹೊಡೆತ ನೀಡಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಬ್ರಿಟನ್‌ನಲ್ಲಿ ಈವರೆಗೆ 264 ಜನರಲ್ಲಿ ಓಮೈಕ್ರಾನ್ ದೃಢಪಟ್ಟಿದೆ. 

ಭಾರತವೂ ಸೇರಿದಂತೆ ಅಮೆರಿಕಕ್ಕೆ ಭೇಟಿ ನೀಡುವ ಎಲ್ಲ ದೇಶಗಳ ಪ್ರಯಾಣಿಕರೂ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಅಥವಾ ಕೋವಿಡ್‌ನಿಂದ ಗುಣಮುಖರಾಗಿರುವ ಪ್ರಮಾಣಪತ್ರವನ್ನು ಒದಗಿಸುವುದನ್ನು ಕಡ್ಡಾಯ ಮಾಡಲಾಗಿದೆ. ಡಿ.6ರಿಂದ ಈ ನಿಯಮ ಜಾರಿಗೆ ಬರಲಿದೆ. ಪ್ರಯಾಣಕ್ಕೆ ಒಂದು ದಿನಕ್ಕೆ ಮೊದಲು ಪಡೆದ ವರದಿಯನ್ನು ಸಲ್ಲಿಸಬೇಕಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು