ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಸೋಲಾರ್ ಹಗರಣ: ಕೇರಳ ಮಾಜಿ ಸಿ.ಎಂ ಮತ್ತಿತರರ ವಿರುದ್ಧ ತನಿಖೆ ಕೈಗೆತ್ತಿಕೊಂಡ ಸಿಬಿಐ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಹುಕೋಟಿ ಸೌರಫಲಕ ಹಗರಣದ ಪ್ರಮುಖ ಮಹಿಳಾ ಆರೋಪಿಯೊಬ್ಬರು ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಮತ್ತು ಮಾಜಿ ಕೇಂದ್ರ ಸಚಿವ ಕೆ.ಸಿ. ವೇಣುಗೋಪಾಲ್‌ ಮತ್ತಿತರರ ವಿರುದ್ಧ ದಾಖಲಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಿಬಿಐ ತನಿಖೆಗೆ ಕೈಗೆತ್ತಿಕೊಂಡಿದೆ.

ಯುಡಿಎಫ್ ಸರ್ಕಾರದ ಅವಧಿಯಲ್ಲಿ ನಡೆದ ಬಹುಕೋಟಿ ಸೋಲಾರ್ ಪ್ಯಾನಲ್ ಹಗರಣದ ಆರೋಪಿಯಾಗಿರುವ ಮಹಿಳೆ, ‘2012ರಲ್ಲಿ ಈ ರಾಜಕೀಯ ನಾಯಕರು ನನ್ನನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ‘ ಎಂದು ಆರೋಪಿಸಿ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಉಮ್ಮನ್‌ ಚಾಂಡಿ ಸೇರಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕುರಿತು ಕೇರಳ ಪೊಲೀಸ್ ಅಪರಾಧ ವಿಭಾಗ ತನಿಖೆ ನಡೆಸಿದ್ದು, ಸಿಪಿಎಂ ನೇತೃತ್ವದ ಸರ್ಕಾರ ಈ ವರ್ಷದ ಆರಂಭದಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು.

ಈ ಪ್ರಕರಣದಲ್ಲಿ ಉಮ್ಮನ್ ಚಾಂಡಿ ಮತ್ತು ವೇಣುಗೋಪಾಲ್ ಜೊತೆಗೆ, ಅನಿಲ್ ಕುಮಾರ್, ಅಡೂರ್ ಪ್ರಕಾಶ್, ಶಾಸಕ ಎ.ಪಿ. ಅನಿಲ್ ಕುಮಾರ್, ಹೈಬಿ ಈಡನ್‌ ಮತ್ತು ಬಿಜೆಪಿ ನಾಯಕ ಎ.ಪಿ. ಅಬ್ದುಲ್ಲಾ ಕುಟ್ಟಿ ಆರೋಪಿಗಳಾಗಿದ್ದಾರೆ. ಕುಟ್ಟಿ ಅವರು 2014 ರಲ್ಲಿ ಕಣ್ಣೂರಿನಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದಾಗ, ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ ಅವರು ಬಿಜೆಪಿ ಸೇರಿದರು.

ಜುಲೈ 19, 2013 ರಂದು ಆರೋಪಿ ಮಹಿಳೆ ಪೊಲೀಸ್ ಆಯುಕ್ತರಿಗೆ ಬರೆದ ಪತ್ರದಲ್ಲಿ, ಚಾಂಡಿ ಮತ್ತು ಅವರ ಕೆಲವು ಸಚಿವ ಸಹೋದ್ಯೋಗಿಗಳು ಮತ್ತು ಕೇಂದ್ರದ ಇಬ್ಬರು ಮಾಜಿ ಸಚಿವರು ಸೇರಿದಂತೆ ಹಲವು ಕಾಂಗ್ರೆಸ್ ಮತ್ತು ಯುಡಿಎಫ್ ನಾಯಕರ ವಿರುದ್ಧ ಲೈಂಗಿಕ ದುರ್ನಡತೆ ಮತ್ತು ಭ್ರಷ್ಟಾಚಾರದ ಆರೋಪ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು