ಲಂಡನ್: ಖಾಲಿಸ್ತಾನ ಪರ ಪ್ರತಿಭಟನೆ ಕೈಗೊಂಡಿದ್ದ ಪ್ರತ್ಯೇಕತಾವಾದಿಗಳು ಇಲ್ಲಿನ ಭಾರತೀಯ ಹೈಕಮಿಷನ್ ಎದುರಿನ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ, ಕಚೇರಿ ಮೇಲೆ ದಾಳಿ ನಡೆಸಿರುವ ಘಟನೆಯನ್ನು ಖಂಡಿಸಿ ಭಾರತೀಯರ ಸಂಘಟನೆಗಳು ಮಂಗಳವಾರ ಇಲ್ಲಿ ರ‍್ಯಾಲಿ ನಡೆಸಿವೆ.
‘ಪ್ರತ್ಯೇಕತಾವಾದಿಗಳು ಭಾರತದ ಧ್ವಜಕ್ಕೆ ಅವಮಾನ ಮಾಡಿರುವುದು ಆಘಾತ ತಂದಿದೆ’ ಎಂದು ಬ್ರಿಟನ್‌ನ ಫ್ರೆಂಡ್ಸ್ ಆಫ್ ಇಂಡಿಯಾ ಸೊಸೈಟಿ ಇಂಟರ್‌ನ್ಯಾಷನಲ್ (ಎಫ್‌ಐಎಸ್‌ಐ) ಸಂಘಟನೆಯು ಹೇಳಿದೆ. ಈ ಸಂಘಟನೆಯ ನೇತೃತ್ವದಲ್ಲಿ ಹೈಕಮಿಷನ್ ಕಚೇರಿ ಮುಂಭಾಗದಲ್ಲಿ ರ‍್ಯಾಲಿ ನಡೆದಿದೆ.
‘ಇಂತಹ ದಾಳಿ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸದಿರುವ ಬ್ರಿಟನ್ ಸರ್ಕಾರದ ವೈಫಲ್ಯವೂ ಆತಂಕ ತಂದಿದೆ’ ಎಂದೂ ಹೇಳಿದೆ.
ಹೈಕಮಿಷನ್ ಕಚೇರಿ ಮೇಲಿನ ದಾಳಿಯನ್ನು ಖಂಡಿಸಿರುವ ನ್ಯಾಷನಲ್ ಇಂಡಿಯನ್ ಸ್ಟೂಡೆಂಟ್ಸ್ ಆ್ಯಂಡ್ ಅಲುಮ್ನಿ ಯೂನಿಯನ್ (ಎನ್‌ಐಎಸ್‌ಎಯು), ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
‘ಭಾರತೀಯ ಹೈಕಮಿಷನ್ ಕಚೇರಿ ಮೇಲೆ ನಡೆದ ದಾಳಿಯ ಕುರಿತು ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದ್ದಾರೆ.
ಇಂಡಿಯಾ ಹೌಸ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಬ್ರಿಟನ್‌ನಲ್ಲಿರುವ ಭಾರತದ ರಾಯಭಾರಿ ವಿಕ್ರಂ ದೊರೈಸ್ವಾಮಿ ಭಾಗವಹಿಸಿ, ಘಟನೆಗೆ ಕಳವಳ ವ್ಯಕ್ತಪಡಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.