ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವಕ್ಕೆ ಸಂಕಷ್ಟ ಬಂದೊದಗಿದೆ: ಸೋನಿಯಾ ಆರೋಪ

Last Updated 18 ಅಕ್ಟೋಬರ್ 2020, 15:44 IST
ಅಕ್ಷರ ಗಾತ್ರ

ನವದೆಹಲಿ: ನೂತನ ಕೃಷಿ ಕಾಯ್ದೆಗಳು, ಕೋವಿಡ್‌–19 ಪಿಡುಗಿನ ನಿರ್ವಹಣೆ, ಆರ್ಥಿಕತೆ ವಿಷಯಗಳನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ‘ದೇಶದ ಪ್ರಜಾತಂತ್ರ ವ್ಯವಸ್ಥೆ ಸಂಕಷ್ಟದ ಸಮಯ ಎದುರಿಸುತ್ತಿದೆ’ ಎಂದು ಟೀಕಿಸಿದ್ದಾರೆ.

ಭಾನುವಾರ ನಡೆದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಪರಿಶಿಷ್ಟ ಜನರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು, ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದೆ’ ಎಂದೂ ಆರೋಪಿಸಿದರು.

ಬಿಹಾರ ವಿಧಾನಸಭೆಗೆ ಚುನಾವಣೆ, ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಹಲವು ರಾಜ್ಯಗಳಲ್ಲಿ ಉಪಚುನಾವಣೆಗೆ ದಿನಗಣನೆ ಆರಂಭಗೊಂಡಿರುವ ಹೊತ್ತಿನಲ್ಲಿ ನಡೆದಿರುವ ಸಭೆಗೆ ಮಹತ್ವಬಂದಿದೆ. ಅಲ್ಲದೇ, ಸಂಘಟನೆಯಲ್ಲಿ ಕಳೆದ ತಿಂಗಳು ಭಾರಿ ಬದಲಾವಣೆ ತಂದ ನಂತರ ನಡೆದ ಮೊದಲ ಸಭೆಯೂ ಇದಾಗಿದೆ.

‘ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆಗಳು ಕೃಷಿ ಕ್ಷೇತ್ರಕ್ಕೆ ಮಾರಕವಾಗಿವೆ. ಹಸಿರು ಕ್ರಾಂತಿಯಿಂದ ಈ ದೇಶಕ್ಕೆ ಆಗಿರುವ ಲಾಭವನ್ನು ಅಳಿಸಿ ಹಾಕುವ ಪಿತೂರಿಯ ಭಾಗವಾಗಿ ಈ ಕಾಯ್ದೆಗಳನ್ನು ರೂಪಿಸಲಾಗಿದೆ’ ಎಂದೂ ಆಪಾದಿಸಿದರು.

‘ಈ ನೂತನ ಕಾಯ್ದೆಗಳು ಭಾರತದ ಕೃಷಿ ಕ್ಷೇತ್ರ, ಕೃಷಿ ಆಧಾರಿತ ಆರ್ಥಿಕ ವ್ಯವಸ್ಥೆಯ ಬುನಾದಿಯನ್ನೇ ಬುಡಮೇಲು ಮಾಡಲಿವೆ. ಕೋಟ್ಯಂತರ ಜನ ಸಣ್ಣ–ಮಧ್ಯಮ ಹಿಡುವಳಿದಾರರು, ಕೃಷಿ ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರ ಜೀವನೋಪಾಯವನ್ನೂ ಅಪಾಯಕ್ಕೆ ತಳ್ಳಿದೆ. ಆದರೆ, ಕೇಂದ್ರದ ಈ ಹುನ್ನಾರವನ್ನು ತಡೆಯುವ ಕರ್ತವ್ಯ ನಮ್ಮದು’ ಎಂದೂ ಹೇಳಿದರು.

‘ಈ ದೇಶದ ಆಡಳಿತ ಚುಕ್ಕಾಣಿಯನ್ನು ಜನರಿಂದ ಕಸಿದುಕೊಂಡು ಕೆಲವೇ ಕೆಲವು ಬಂಡವಾಳಶಾಹಿಗಳ ಕೈಗೆ ಹಸ್ತಾಂತರಿಸಲು ಈಗಿನ ಸರ್ಕಾರ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ’ ಎಂದು ಟೀಕಿಸಿದರು.

‘ಕೊರೊನಾ ಸೋಂಕು ಪ್ರಸರಣವನ್ನು ತಡೆಗಟ್ಟುವ ಕಾರ್ಯ ಸಮರ್ಪಕವಾಗಿ ಆಗದ ಕಾರಣ ಈ ಪಿಡುಗು ಇಡೀ ದೇಶವನ್ನೇ ವ್ಯಾಪಿಸುವಂತಾಯಿತು. ವಲಸೆ ಕಾರ್ಮಿಕರು ಪಟ್ಟ ಕಷ್ಟ, ಕೋವಿಡ್‌ ಪ್ರಸರಣ ನಿಯಂತ್ರಣಕ್ಕಾಗಿ ಯೋಜನೆಯೇ ಇಲ್ಲದಿರುವುದೇ ಈ ಮಾತಿಗೆ ಸಾಕ್ಷಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT