ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನಲ್ಲಿ ಅಧಿಕಾರಕ್ಕೆ ಪೈಪೋಟಿ: ಸಿಎಂ ಸರ್ಬಾನಂದ್, ಹಿಮಂತ ಶರ್ಮಾ ದೆಹಲಿಗೆ

Last Updated 8 ಮೇ 2021, 3:50 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಂನಲ್ಲಿ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಎನ್‌ಡಿಎ ವಲಯದಲ್ಲಿ ಅಧಿಕಾರಕ್ಕಾಗಿ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಮತ್ತು ಆರೋಗ್ಯ ಸಚಿವ ಹಿಮಂತ ಬಿಶ್ವ ಶರ್ಮಾ ನಡುವೆ ಪೈಪೋಟಿ ಏರ್ಪಟ್ಟಿದೆ.

ಹೀಗಾಗಿ, ಬಿಕ್ಕಟ್ಟು ಪರಿಹರಿಸಲು ಉಭಯ ನಾಯಕರಿಗೆ ದೆಹಲಿಗೆ ಬರುವಂತೆ ವರಿಷ್ಠರು ಸೂಚಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತು ತಮಿಳುನಾಡಿನ ಎಂ ಕೆ ಸ್ಟಾಲಿನ್ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ, ಫಲಿತಾಂಶ ಬಂದು ಐದು ದಿನ ಕಳದರೂ ಅಸ್ಸಾಂನಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿಲ್ಲ.

ಅಸ್ಸಾಂ ರಾಜ್ಯದ ಈಶಾನ್ಯ ಭಾಗದಲ್ಲಿಎನ್‌ಡಿಎ ಸಂಚಾಲಕರಾಗಿರುವ ಹಿಮಂತ ಶರ್ಮಾ 2016 ರಲ್ಲಿ ಅಂದಿನ ಸಿಎಂ ತರುಣ್ ಗೋಗೊಯ್ ಜೊತೆ ಸಿಎಂಗಾದಿಗಾಗಿ ಜಗಳ ಮಾಡಿಕೊಂಡು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದರು. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.

ಸ್ಥಳೀಯ ಸೊನೊವಾಲ್-ಕಾಚಾರಿ ಬುಡಕಟ್ಟು ಜನಾಂಗದವರಾದ ಸರ್ಬಾನಂದ ಸೊನೊವಾಲ್ ಜನಪ್ರಿಯ ನಾಯಕರಾವಾಗಿದ್ದರೂಸಹ 2016 ರಲ್ಲಿ ಅವರ ವಿಜಯದ ಬಹುಪಾಲು ಶ್ರೇಯ ಶರ್ಮಾ ಅವರದ್ದಾಗಿದೆ. ಚುನಾವಣೆಗೂ ಮುನ್ನ ಸೊನೊವಾಲ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಬಿಂಬಿಸುವ ಮೂಲಕ ನಾಯಕತ್ವ ನೀಡಲಾಗಿತ್ತು.

ಆದರೆ, ಈ ಬಾರಿ ಶರ್ಮಾ, ಸಿಎಂಗಾದಿಗೆ ತಮ್ಮ ಹಕ್ಕು ಪ್ರತಿಪಾದಿಸುವುದನ್ನು ಬಿಡುವುದಿಲ್ಲ ಎಂಬುದು ಸ್ಪಷ್ಟವಾಗಿದ್ದು, ಸೊನೊವಾಲ್ ಜೊತೆಪೈಪೋಟಿ ನಡೆಸಿದ್ದಾರೆ. ಹೀಗಾಗಿ, ಬಿಕ್ಕಟ್ಟು ನಿವಾರಿಸುವ ಮೂಲಕ ಸುರಕ್ಷಿತ ರಾಜಕೀಯ ನಡೆ ಅನುಸರಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.

ಬಿಜೆಪಿ ಹೈಕಮಾಂಡ್ ಈ ವಿಷಯದಲ್ಲಿ ಸಂದಿಗ್ಧ ಸ್ಥಿತಿಯಲ್ಲಿದೆ. ಇಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೊಂದಿಗೆ ನಡೆಯುವ ಸಭೆಯಲ್ಲಿ ಸೋನೊವಾಲ್ ಮತ್ತು ಶರ್ಮಾ ಭಾಗವಹಿಸುತ್ತಿದ್ದು, ಈಶಾನ್ಯ ಭಾರತದ ಗೇಟ್ ವೇ ಎಂದು ಪರಿಗಣಿಸುವ ಅಸ್ಸಾಂ ರಾಜ್ಯದ ಅಧಿಕಾರ ಬಿಕ್ಕಟ್ಟಿನ ಬಗ್ಗೆ ಅಂತಿಮ ತೀರ್ಮಾನ ಹೊರಬೀಳಲಿದೆ. ಎನ್‌ಡಿಎ ಒಕ್ಕೂಟದ ಇತರ ಪಕ್ಷಗಳು ಮತ್ತು ಇನ್ನುಳಿದ ಈಶಾನ್ಯ ರಾಜ್ಯಗಳಲ್ಲಿ ಶರ್ಮಾ ಉತ್ತಮ ಸಮೀಕರಣಗಳನ್ನು ಹೊಂದಿದ್ದಾರೆ.

126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ 60 ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದು, ಎನ್‌ಡಿಎ ಮಿತ್ರಪಕ್ಷಗಳಾದ ಎಜಿಪಿ ಮತ್ತು ಯುಪಿಪಿಎಲ್ ಕ್ರಮವಾಗಿ ಒಂಬತ್ತು ಮತ್ತು ಆರು ಸ್ಥಾನಗಳನ್ನು ಗೆದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT