ಗುರುವಾರ , ಜೂನ್ 30, 2022
23 °C
ಕುರುವೈ ಕೃಷಿ ಚಟುವಟಿಕೆಗಳಿಗೆ ಸಿದ್ಧತೆ

ತಮಿಳುನಾಡು: ನಾಳೆ ಮೆಟ್ಟೂರು ಜಲಾಶಯದಿಂದ ನೀರು ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಕಾವೇರಿ ಅಚ್ಚುಕಟ್ಟು ಪ್ರದೇಶದ ಕುರುವೈ (ಅಲ್ಪಾವಧಿ ಬೆಳೆ) ಕೃಷಿಗೆ ಮೆಟ್ಟೂರು ಜಲಾಶಯದಿಂದ ನೀರು ಬಿಡುಗಡೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಂಗಳವಾರ ಚಾಲನೆ ನೀಡಲಿದ್ದಾರೆ.

ಕರ್ನಾಟಕದ ಕಾವೇರಿ ನದಿಯ ಜಲಾನಯನ ಪ್ರದೇಶಗಳು ಮತ್ತು ತಮಿಳುನಾಡಿನ ಧರ್ಮಪುರಿ ಹಾಗೂ ಕೃಷ್ಣಗಿರಿ ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದಾಗಿ ಜಲಾಶಯಕ್ಕೆ ನಿರಂತರ ಒಳಹರಿವು ಹೆಚ್ಚಾಗಿದೆ. ಹಾಗಾಗಿ, ಈ ಹಿಂದೆ ನಿಗದಿಪಡಿಸಿದಂತೆ ಜೂನ್‌12ಕ್ಕೂ ಮುನ್ನವೇ ನೀರು ಬಿಡಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. 

ಕೃಷಿ ಸಚಿವ ಎಂ.ಆರ್.ಕೆ. ಪನ್ನೀರಸೆಲ್ವಂ ಅವರು ಕೃಷಿ ಸಿದ್ಧತೆಯನ್ನು ಪರಿಶೀಲಿಸಿದ್ದು, ರೈತರಿಗೆ ಸಕಾಲದಲ್ಲಿ ಬಿತ್ತನೆಬೀಜಗಳು ಮತ್ತು ಅಗತ್ಯ ರಸಗೊಬ್ಬರಗಳು ಸಿಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಿ.ಎಂಗೆ ರೈತರ ಪತ್ರ: ನೀರು ಬಿಡುವ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ಕೆಲವು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತಂಜಾವೂರಿನ ಪ್ರಗತಿಪರ ರೈತ ಜಿ. ಶ್ರೀನಿವಾಸನ್ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು, ನೀರು ಬಿಡುಗಡೆಯನ್ನು ಒಂದು ವಾರ ಕಾಲ ಮುಂದೂಡುವಂತೆ ಕೋರಿದ್ದಾರೆ. 

‘ಹೂಳು ತೆಗೆಯುವ ಕಾಮಗಾರಿ ಪ್ರಗತಿಯಲ್ಲಿದ್ದು, ನಿಗದಿತ ಅವಧಿಗಿಂತ ಮುಂಚಿತವಾಗಿ ನೀರು ಬಿಟ್ಟರೆ ಸರಿಯಾಗಿ ಪೂರ್ಣಗೊಳ್ಳುವುದಿಲ್ಲ. ಅಲ್ಲದೆ, ಕೊಯ್ಲಿಗೆ ಸಿದ್ಧವಾಗಿರುವ ಕೆಲವು ಬೆಳೆಗಳು ಹಾನಿಗೊಳಗಾಗುತ್ತವೆ. ಸರ್ಕಾರ ನೀರು ಬಿಡಲು ಬಯಸಿದರೂ ದಿನಕ್ಕೆ 2,000 ಕ್ಯೂಸೆಕ್‌ಗೆ ಸೀಮಿತಗೊಳಿಸಬೇಕು’ ಎಂದೂ ಶ್ರೀನಿವಾಸನ್ ಪತ್ರದಲ್ಲಿ ಕೋರಿದ್ದಾರೆ.

ಸ್ವಾತಂತ್ರ್ಯಾನಂತರ ಎರಡನೇ ಬಾರಿಗೆ ನಿಗದಿತ ದಿನಾಂಕಕ್ಕೂ ಮುನ್ನವೇ ಅಣೆಕಟ್ಟನ್ನು ತೆರೆಯಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಮೇ ತಿಂಗಳಲ್ಲಿ ಅಣೆಕಟ್ಟಿನ ನೀರನ್ನು ಹರಿಸಲಾಗುತ್ತಿದೆ. ಮೆಟ್ಟೂರು ಜಲಾಶಯದಿಂದ ನೀರು ಬಿಡುವುದರಿಂದ ಕುರುವೈ ಕೃಷಿಗೆ ಒಳಪಡುವ 4 ಲಕ್ಷ ಎಕರೆ ಭೂಮಿಗೆ ಅನುಕೂಲವಾಗಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.