ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿ ಮೀಸಲು ನಿಗದಿ ರಾಜ್ಯ ಸರ್ಕಾರಗಳ ಹೊಣೆ: ‘ಸುಪ್ರೀಂ’ ಮಾನದಂಡ ಇಲ್ಲ

ನ್ಯಾಯಾಲಯದ ಸ್ಪಷ್ಟನೆ
Last Updated 28 ಜನವರಿ 2022, 20:27 IST
ಅಕ್ಷರ ಗಾತ್ರ

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ ಮತ್ತು ಎಸ್‌ಟಿ) ಉದ್ಯೋಗಿಗಳಿಗೆ ಸರ್ಕಾರಿ ನೌಕರಿಯಲ್ಲಿ ಬಡ್ತಿ ಮೀಸಲು ನೀಡಲು ಮಾನದಂಡ ರೂಪಿಸಬೇಕು ಎಂಬ ಕೋರಿಕೆಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ.

ಎಸ್‌ಸಿ, ಎಸ್‌ಟಿ ಸಮುದಾಯಗಳ ನೌಕರರಿಗೆ ಅಗತ್ಯ ಪ್ರಾತಿನಿಧ್ಯ ಇಲ್ಲ ಎಂಬುದನ್ನು ದತ್ತಾಂಶಗಳ ಮೂಲಕ ರಾಜ್ಯ ಸರ್ಕಾರವೇ ಸ್ಥಾಪಿಸಬೇಕು ಎಂದು ನ್ಯಾಯಮೂರ್ತಿ ನಾಗೇಶ್ವರ ರಾವ್‌ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿದೆ.

ಎಂ. ನಾಗರಾಜ್‌ ಮತ್ತು ಜರ್ನೈಲ್‌ ಸಿಂಗ್‌ ಪ್ರಕರಣದ ತೀರ್ಪುಗಳ ಆಧಾರದಲ್ಲಿ ಹೇಳುವುದಾದರೆ, ಸುಪ್ರೀಂ ಕೋರ್ಟ್‌ ಮಾನದಂಡ ರೂಪಿಸುವುದು ಸಾಧ್ಯವಿಲ್ಲ. ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ರಾಜ್ಯ ಸರ್ಕಾರಗಳೇ ಸಂಗ್ರಹಿಸಬೇಕು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬಿ.ಆರ್.ಗವಾಯಿ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.

ಎಸ್‌ಸಿ ಮತ್ತು ಎಸ್‌ಟಿಗಳಿಗೆ ಅಗತ್ಯ ಪ್ರಾತಿನಿಧ್ಯ ಇಲ್ಲ ಎಂಬುದನ್ನು ಇಡೀ ಸೇವೆಯಲ್ಲಿ ಅಥವಾ ವರ್ಗದಲ್ಲಿ ಇರುವ ಪ್ರಾತಿನಿಧ್ಯದ ಆಧಾರದಲ್ಲಿ ನಿರ್ಧಾರ ಮಾಡುವಂತಿಲ್ಲ. ಯಾವ ಶ್ರೇಣಿ ಅಥವಾ ಹುದ್ದೆಯ ವರ್ಗಕ್ಕೆ ಬಡ್ತಿ ಕೇಳಲಾಗಿದೆಯೋ ಆ ಶ್ರೇಣಿ ಅಥವಾ ಹುದ್ದೆ ವರ್ಗದಲ್ಲಿ ಪ್ರಾತಿನಿಧ್ಯ ಎಷ್ಟಿದೆ ಎಂಬುದನ್ನು ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪೀಠವು ಸ್ಪಷ್ಟಪಡಿಸಿದೆ.

ಪ್ರಮಾಣಬದ್ಧ ಪ್ರಾತಿನಿಧ್ಯ ಮತ್ತು ಅಗತ್ಯ ಪ್ರಾತಿನಿಧ್ಯದ ವಿಚಾರದಲ್ಲಿ ಹೆಚ್ಚಿನ ವಿಶ್ಲೇಷಣೆ ನಡೆಸಿಲ್ಲ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಲು ಪ್ರಾತಿನಿಧ್ಯ ಮತ್ತು ಇತರ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವ ವಿಚಾರಗಳನ್ನು ರಾಜ್ಯಗಳಿಗೆ ಬಿಡಲಾಗಿದೆ ಎಂದು ಪೀಠವು ಹೇಳಿದೆ.

2021ರ ಅಕ್ಟೋಬರ್‌ 26ರಂದು ತೀರ್ಪನ್ನು ಕಾಯ್ದಿರಿಸಲಾಗಿತ್ತು.

ಬಡ್ತಿ ಮೀಸಲಾತಿಯನ್ನು ಜಾರಿಗೊಳಿಸಲು ನಿಖರ ಮತ್ತು ನಿರ್ದಿಷ್ಟ ಮಾನದಂಡವನ್ನು ರೂಪಿಸುವಂತೆ ಕೇಂದ್ರ ಸರ್ಕಾರ ಕೂಡ ಸುಪ್ರೀಂ ಕೋರ್ಟನ್ನು ಕೋರಿತ್ತು.

ಎಸ್‌ಸಿ, ಎಸ್‌ಟಿ ಸಮುದಾಯಗಳು ವರ್ಷಗಳಿಂದ ಮೂಲೆಗುಂಪಾಗುತ್ತಾ ಬಂದಿವೆ. ಅವರಿಗೆ ಸಮಾನ ಅವಕಾಶ ಕೊಡುವುದಕ್ಕಾಗಿ ಮೀಸಲಾತಿಯ ರೂಪದಲ್ಲಿ ಸಮಾನತೆಯನ್ನು ಜಾರಿ ಮಾಡಬೇಕು ಎಂದು ಕೇಂದ್ರದ ‌ಪರವಾಗಿ ವಾದಿಸಿದ್ದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಹೇಳಿದ್ದರು.

ಕೇಂದ್ರ ಮತ್ತು ರಾಜ್ಯಗಳು ಅನುಸರಿಸುವುದಕ್ಕಾಗಿ ನಿಖರ ಮತ್ತು ನಿರ್ದಿಷ್ಟ ಮಾನದಂಡ ರೂಪುಗೊಳ್ಳದೇ ಇದ್ದರೆ ಅಸಂಖ್ಯ ವ್ಯಾಜ್ಯಗಳು ಸೃಷ್ಟಿಯಾಗಬಹುದು. ಯಾವ ತತ್ವದ ಆಧಾರದಲ್ಲಿ ಮೀಸಲಾತಿ ನೀಡಲಾಗಿದೆ ಎಂಬ ವಿಚಾರಕ್ಕೆ ಕೊನೆಯೇ ಇಲ್ಲದಂತೆ ಆಗಬಹುದು ಎಂದೂ ಅವರು ವಾದಿಸಿದ್ದರು.

ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಬಡ್ತಿ ಮೀಸಲಾತಿ ನೀಡಬೇಕು ಎಂಬ ತೀರ್ಪನ್ನು ಮರಳಿ ವಿಚಾರಣೆಗೆ ಒಳಪಡಿಸುವುದಿಲ್ಲ. ಆದರೆ, ಇದನ್ನು ಹೇಗೆ ಜಾರಿಗೆ ತರಬೇಕು ಎಂಬುದು ರಾಜ್ಯಗಳಿಗೆ ಬಿಟ್ಟ ವಿಚಾರ ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆಯೇ ಸ್ಪಷ್ಟಪಡಿಸಿತ್ತು.

ಪ್ರಾತಿನಿಧ್ಯದ ಕೊರತೆ ಇದೆ ಎಂಬುದನ್ನು ಸಾಬೀತು ಮಾಡುವ ಪ್ರಮಾಣೀಕರಿಸಬಹುದಾದ ದತ್ತಾಂಶದ ಸಂಗ್ರಹವು ಕಡ್ಡಾಯ. ಈ ದತ್ತಾಂಶವನ್ನು ನಿಗದಿತ ಅವಧಿಯಲ್ಲಿ ಮರು ಪರಿಶೀಲನೆಗೂ ಒಡ್ಡಬೇಕು ಎಂದು ಕೋರ್ಟ್‌ ಸ್ಪಷ್ಟವಾಗಿ ತಿಳಿಸಿದೆ.

ಪ್ರಮಾಣೀಕರಿಸಬಹುದಾದ ದತ್ತಾಂಶ ಸಂಗ್ರಹಿಸಬೇಕು, ಅಗತ್ಯ ಪ್ರಾತಿನಿಧ್ಯ ಇದೆಯೇ ಎಂಬುದನ್ನು ಗಮನಿಸಬೇಕು, ಬಡ್ತಿಯಿಂದ ಆಡಳಿತದ ದಕ್ಷತೆಯ ಮೇಲೆ ಪರಿಣಾಮ ಆಗಲಿದೆಯೇ ಎಂಬುದನ್ನು ನೋಡಬೇಕು ಎಂಬ ವಿಚಾರಗಳನ್ನು ಎಂ. ನಾಗರಾಜ್‌ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು. ಈ ಎಲ್ಲ ವಿಚಾರಗಳು ಬಡ್ತಿ ಮೀಸಲು ನಿಗದಿ ಸಮಯದಲ್ಲಿ ಅನ್ವಯ ಆಗಲಿದೆ ಎಂದೂ ಪೀಠ ತಿಳಿಸಿದೆ.

ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಪೀಠವು 2019ರಲ್ಲಿ ನೀಡಿದ್ದ ಬಿ.ಕೆ. ಪವಿತ್ರ ಪ್ರಕರಣ–2ರ ತೀರ್ಪು, 2006ರ ಎಂ. ನಾಗರಾಜ್‌ ಪ್ರಕರಣ ಮತ್ತು 2018ರ ಜರ್ನೈಲ್‌ ಸಿಂಗ್‌ ಪ್ರಕರಣದ ತೀರ್ಪಿಗೆ ವ್ಯತಿರಿಕ್ತವಾಗಿದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ. ಪವಿತ್ರಾ ಪ್ರಕರಣ–2ರಲ್ಲಿ ಒಟ್ಟು ವೃಂದದ ಬದಲಿಗೆ ಹುದ್ದೆ ಗುಂಪಿನ ದತ್ತಾಂಶ ಸಂಗ್ರಹಕ್ಕೆ ಅವಕಾಶ ಕೊಡಲಾಗಿತ್ತು.

ಮೀಸಲಾತಿಗೆ ಅರ್ಹತೆ ಇರುವ ವರ್ಗಗಳಿಗೆ ತತ್ಪರಿಣಾಮ ಜ್ಯೇಷ್ಠತೆ ನೀಡಬೇಕು ಎಂಬ ಕರ್ನಾಟಕದ 2018ರ ಕಾಯ್ದೆಯನ್ನು ಪವಿತ್ರಾ ಪ್ರಕರಣ–2 ತೀರ್ಪು ಎತ್ತಿ ಹಿಡಿದಿತ್ತು. ಸುಪ್ರೀಂ ಕೋರ್ಟ್‌ನ ಈಗಿನ ತೀರ್ಪು, ಕರ್ನಾಟಕದಲ್ಲಿ ಬಡ್ತಿ ಮೀಸಲಾತಿಯ ಬಗ್ಗೆ ಹಲವು ಕಾನೂನು ಪ್ರಶ್ನೆಗಳನ್ನು ಎತ್ತಲಿದೆೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT