ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಾಣದಲ್ಲಿ ಹಾಡಹಗಲೇ ವಿದ್ಯಾರ್ಥಿನಿಯ ಹತ್ಯೆ

Last Updated 27 ಅಕ್ಟೋಬರ್ 2020, 16:21 IST
ಅಕ್ಷರ ಗಾತ್ರ

ಫರಿದಾಬಾದ್‌: ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಲು ಯತ್ನಿಸಿದ ವ್ಯಕ್ತಿಯೊಬ್ಬ ನಂತರದಲ್ಲಿ ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ದೆಹಲಿಯಿಂದ 30 ಕಿ.ಮೀ ದೂರದಲ್ಲಿರುವ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ.

ಸೋಮವಾರ ಮಧ್ಯಾಹ್ನ 3.40ರ ವೇಳೆಗೆ ಈ ಘಟನೆ ನಡೆದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. 21 ವರ್ಷದ ನಿಕಿತಾ ತೋಮರ್‌ ಪರೀಕ್ಷೆ ಬರೆಯಲೆಂದು ಬಲ್ಲಾಬ್‌ಗರ್‌ನಲ್ಲಿರುವ ಕಾಲೇಜಿಗೆ ತೆರಳಿದ್ದರು. ವಿದ್ಯಾರ್ಥಿನಿ ವಾಣಿಜ್ಯ ವಿಭಾಗದಲ್ಲಿ ಅಂತಿಮ ವರ್ಷದಲ್ಲಿ ಕಲಿಯುತ್ತಿದ್ದರು. ನಿಕಿತಾ ಕಾಲೇಜಿನಿಂದ ಹೊರಬರುವುದನ್ನೇ ಕಾಯುತ್ತಿದ್ದ ತೌಸೀಫ್‌ ಹಾಗೂ ಆತನ ಸ್ನೇಹಿತ ರೆಹಾನ್‌ ಮೊದಲು ಆಕೆಯನ್ನು ಅಪಹರಿಸಲು ಯತ್ನಿಸಿದ್ದಾರೆ. ನಂತರದಲ್ಲಿ ಗನ್‌ ತೋರಿಸಿ ಬೆದರಿಸುವ ವೇಳೆಗೆ ನಿಕಿತಾ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ತೌಸೀಫ್‌ ಗುಂಡು ಹಾರಿಸಿದ್ದಾನೆ.

ಘಟನೆ ನಡೆದ ಬೆನ್ನಲ್ಲೇ ರೆಹಾನ್‌, ತೌಸೀಫ್‌ನನ್ನು ಕಾರಿಗೆ ಹತ್ತಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ರಸ್ತೆ ಮಧ್ಯದಲ್ಲೇ ರಕ್ತದ ಮಡುವಿನಲ್ಲಿ ನಿಕಿತಾ ನರಳಾಡುತ್ತಿರುವುದು ಹಾಗೂ ಆಕೆಯ ಸ್ನೇಹಿತೆ ಗಾಬರಿಯಿಂದ ಚೀರಾಡುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

‘ತೌಸೀಫ್‌ ಹಾಗೂ ನಿಕಿತಾ ಇಬ್ಬರಿಗೂ ಪರಿಚಯವಿತ್ತು. 2018ರಲ್ಲಿ ನಿಕಿತಾಳನ್ನು ತೌಸೀಫ್‌ ಅಪಹರಿಸಿದ್ದ’ ಎಂದು ಫರಿದಾಬಾದ್‌ ಪೊಲೀಸ್‌ ಅಧಿಕಾರಿ ಒ.ಪಿ.ಸಿಂಗ್‌ ತಿಳಿಸಿದರು. 2018ರಲ್ಲಿ ನಿಕಿತಾ ತಂದೆ ಈ ಕುರಿತು ದೂರು ನೀಡಿದ್ದರು, ನಂತರದಲ್ಲಿ ಅದನ್ನು ಹಿಂಪಡೆದಿದ್ದರು ಎಂದು ಪೊಲೀಸರು ತಿಳಿಸಿದರು. ನಿಕಿತಾ ಹತ್ಯೆ ಬೆನ್ನಲ್ಲೇ ತೌಸೀಫ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ವಿಡಿಯೊ ವೈರಲ್‌ ಆಗುತ್ತಿರುವ ಕಾರಣದಿಂದ ರಾಷ್ಟ್ರೀಯ ಮಹಿಳಾ ಆಯೋಗವೂ ಇದರತ್ತ ಗಮನಹರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT