ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅವಿಭಜಿತ ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್: ರಾಜನಾಥ್‌ ಸಿಂಗ್‌

Last Updated 12 ನವೆಂಬರ್ 2022, 3:01 IST
ಅಕ್ಷರ ಗಾತ್ರ

ನೊಯ್ಡಾ: ಸುಭಾಷ್ ಚಂದ್ರ ಬೋಸ್ ಅವರು ಅವಿಭಜಿತ ಭಾರತದ ಮೊದಲ ಪ್ರಧಾನಿಯಾಗಿದ್ದರು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಪ್ರತಿಪಾದಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಅವರ ಕೊಡುಗೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

‘ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪಾತ್ರ ಮತ್ತು ದೃಷ್ಟಿಕೋನವನ್ನು ಮರು ಮೌಲ್ಯಮಾಪನ ಮಾಡುವ ಅವಶ್ಯಕತೆಯಿದೆ. ಕೆಲವರು ಇದನ್ನು ಇತಿಹಾಸವನ್ನು ಪುನರ್‌ರಚನೆ ಎನ್ನುತ್ತಾರೆ. ನಾನು ಅದನ್ನು ತಿದ್ದುಪಡಿ ಎಂದು ಕರೆಯುತ್ತೇನೆ’ ಎಂದು ಅವರು ಹೇಳಿದರು.

ಗ್ರೇಟರ್ ನೊಯ್ಡಾದ ಖಾಸಗಿ ವಿಶ್ವವಿದ್ಯಾನಿಲಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಂಗ್‌, ‘ಆಜಾದ್ ಹಿಂದ್ ಸರ್ಕಾರ್' ಭಾರತದ ಮೊದಲ 'ಸ್ವದೇಶಿ' ಸರ್ಕಾರವಾಗಿತ್ತು. ಅದನ್ನು ಮೊದಲ 'ಸ್ವದೇಶಿ ಸರ್ಕಾರ' ಎಂದು ಕರೆಯಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ಅದನ್ನು ಸ್ಥಾಪನೆ ಮಾಡಿದ್ದವರು ನೇತಾಜಿ ಸುಭಾಷ್ ಚಂದ್ರ ಬೋಸ್. 1943ರ ಅಕ್ಟೋಬರ್ 21 ರಂದು ನೇತಾಜಿ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು’ ಎಂದು ತಿಳಿಸಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾದಾಗಿನಿಂದ ಬೋಸ್ ಅವರಿಗೆ ‘ಸೂಕ್ತ’ ಗೌರವ ಸಲ್ಲಿಸಲು ಪ್ರಯತ್ನಿಸಲಾಗುತ್ತಿದೆ ಎಂದೂ ರಾಜನಾಥ್‌ ಸಿಂಗ್‌ ಹೇಳಿದರು.

‘ಸ್ವತಂತ್ರ ಭಾರತದಲ್ಲಿ ಬೋಸ್ ಅವರ ಕೊಡುಗೆಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುವ ಪ್ರಯತ್ನಗಳು ನಡೆದಿವೆ. ಅದನ್ನು ಸರಿಯಾಗಿ ಮೌಲ್ಯಮಾಪನ ಮಾಡಿಲ್ಲ. ಅವರಿಗೆ ಸಂಬಂಧಿಸಿದ ಹಲವಾರು ದಾಖಲೆಗಳನ್ನು ಎಂದೂ ಬಹಿರಂಗಗೊಳಿಸದಂತೆ ಇಡಲಾಗಿತ್ತು’ ಎಂದು ಸಿಂಗ್ ಹೇಳಿದರು.

‘ನೇತಾಜಿ ಅವರ ಬಗ್ಗೆ ತಿಳಿಯದೇ ಇರುವುದು ಇನ್ನೇನಿದೆ ಎಂದು ಕೆಲ ಮಂದಿ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಹೆಚ್ಚಿನ ಭಾರತೀಯರು ಅವರನ್ನು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ, ಆಜಾದ್ ಹಿಂದ್ ಫೌಜ್‌ನ ಸರ್ವೋಚ್ಚ ಕಮಾಂಡರ್ ಮತ್ತು ಭಾರತದ ಸ್ವಾತಂತ್ರ್ಯಕ್ಕಾಗಿ ಹಲವಾರು ಕಷ್ಟಗಳನ್ನು ಅನುಭವಿಸಿದ ಕ್ರಾಂತಿಕಾರಿ ಎಂದು ಮಾತ್ರ ತಿಳಿದಿದ್ದಾರೆ. ಆದರೆ ಅವರು ಅವಿಭಜಿತ ಭಾರತದ ಮೊದಲ ಪ್ರಧಾನಿ ಎಂಬುದು ಕೆಲವೇ ಕೆಲವು ಜನರಿಗಷ್ಟೇ ಗೊತ್ತು’ ಎಂದು ಹೇಳಿದರು.

ಆಜಾದ್ ಹಿಂದ್ ಸರ್ಕಾರವು ಸಾಂಕೇತಿಕ ಸರ್ಕಾರವಾಗಿರಲಿಲ್ಲ. ಆದರೆ, ಮಾನವನ ಜೀವನದ ಹಲವಾರು ಪ್ರಮುಖ ಅಂಶಗಳ ಬಗ್ಗೆ ಚಿಂತನೆಗಳು ಮತ್ತು ನೀತಿಗಳನ್ನು ಪ್ರಸ್ತುತಪಡಿಸಿದೆ. ಇದು ತನ್ನದೇ ಆದ ಅಂಚೆ ಚೀಟಿಗಳು, ಕರೆನ್ಸಿ ಮತ್ತು ಗುಪ್ತಚರ ಸೇವೆಯನ್ನು ಹೊಂದಿತ್ತು. ಸೀಮಿತ ಸಂಪನ್ಮೂಲಗಳೊಂದಿಗೆ ಅಂತಹ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಸಾಮಾನ್ಯ ಸಾಧನೆಯಲ್ಲ’ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.

ಬೋಸ್ ಅವರು ಪ್ರಬಲ ಬ್ರಿಟಿಷ್ ಸಾಮ್ರಾಜ್ಯವನ್ನು ಎದುರಿಸುತ್ತಿದ್ದರೂ, ಭಾರತವನ್ನು ವಿದೇಶಿ ಆಳ್ವಿಕೆಯಿಂದ ಮುಕ್ತಗೊಳಿಸುವ ಸಂಕಲ್ಪದಲ್ಲಿ ಅವರು ಧೈರ್ಯಶಾಲಿಯಾಗಿದ್ದರು ಎಂದು ಸಿಂಗ್ ತಿಳಿಸಿದರು.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT