ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಮಂಜೂರು: ಜೈಲಿನಿಂದ ಜುಬೈರ್ ಬಿಡುಗಡೆ

Last Updated 20 ಜುಲೈ 2022, 17:49 IST
ಅಕ್ಷರ ಗಾತ್ರ

ನವದೆಹಲಿ: ಆಕ್ಷೇಪಾರ್ಹ ಟ್ವೀಟ್‌ಗಳಿಗೆ ಸಂಬಂಧಿಸಿ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರ ವಿರುದ್ಧ ಉತ್ತರ ಪ್ರದೇಶದಲ್ಲಿ ದಾಖಲಾಗಿರುವ ಎಲ್ಲ ಆರು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್‌ ಮಧ್ಯಂತರ ಜಾಮೀನು ನೀಡಿದ್ದು, ಬುಧವಾರ ಅವರನ್ನು ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಜುಬೈರ್‌ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಲು ಉತ್ತರಪ್ರದೇಶ ಸರ್ಕಾರ ಜುಲೈ 10ರಂದು ರಚಿಸಿದ್ದ ವಿಶೇಷ ತನಿಖಾ ತಂಡವನ್ನು ವಿಸ ರ್ಜಿಸಿದ ಸುಪ್ರೀಂಕೋರ್ಟ್‌, ಅವರ ವಿರುದ್ಧದ ಎಲ್ಲ ಪ್ರಕರಣಗಳನ್ನು ದೆಹಲಿ ಪೊಲೀಸ್‌ನ ವಿಶೇಷ ಘಟಕಕ್ಕೆ ವರ್ಗಾಯಿಸುವಂತೆಯೂ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌, ಸೂರ್ಯಕಾಂತ್‌ ಹಾಗೂ ಎ.ಎಸ್‌.ಬೋಪಣ್ಣ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.

‘ಈಗಾಗಲೇ ತನಿಖೆ ನಡೆಯುತ್ತಿರುವ ಟ್ವೀಟ್‌ಗಳಿಗೆ ಸಂಬಂಧಿಸಿ ಭವಿಷ್ಯದಲ್ಲಿ ಅವರ ವಿರುದ್ಧ ದಾಖಲಾಗಬಹುದಾದ ಎಲ್ಲ ಎಫ್‌ಐಆರ್‌ಗಳಿಗೂ ಈ ಜಾಮೀನು ಆದೇಶ ಅನ್ವಯವಾಗಲಿದೆ’ ಎಂದು ತಿಳಿ ಸಿದ ನ್ಯಾಯಪೀಠ, ‘ಎಫ್‌ಐಆರ್‌ಗಳನ್ನು ವಜಾಗೊಳಿಸುವಂತೆ ಕೋರಿ ಜುಬೈರ್ ಅವರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು‘ ಎಂದು ಸ್ಷಪ್ಟಪಡಿಸಿತು.

‘ಜುಬೈರ್‌ ಅವರ ಟ್ವೀಟ್‌ಗಳ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ, ಅವರನ್ನು ಕಸ್ಟಡಿಯಲ್ಲಿ ಇರಿಸುವುದನ್ನು ಸಮರ್ಥಿಸಲಾಗದು’ ಎಂದೂ ನ್ಯಾಯಪೀಠ ಹೇಳಿತು.

‘ಜುಬೈರ್‌ ಅವರು ಭವಿಷ್ಯದಲ್ಲಿ ಯಾವುದೇ ಟ್ವೀಟ್‌ಗಳನ್ನು ಮಾಡದಂತೆ ನಿರ್ಬಂಧ ವಿಧಿಸಬೇಕು’ ಎಂಬ ಉತ್ತರಪ್ರದೇಶ ಸರ್ಕಾರ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಗರಿಮಾ ಪ್ರಸಾದ್‌ ಅವರ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿತು.

‘ಒಬ್ಬ ಪತ್ರಕರ್ತನಿಗೆ ಬರೆಯಬೇಡ ಎಂದು ನಾವು ಹೇಳಲು ಹೇಗೆ ಸಾಧ್ಯ? ಇದು ವಕೀಲರೊಬ್ಬರಿಗೆ ವಾದ ಮಂಡಿಸಬೇಡಿ ಎಂದು ತಾಕೀತು ಮಾಡಿದಂತೆ’ ಎಂದು ಅಭಿಪ್ರಾಯಪಟ್ಟಿತು. ಇದಕ್ಕೆ ಪ್ರತಿಕ್ರಿಯಿಸಿದ ಗರಿಮಾ ಪ್ರಸಾದ್‌, ‘ಅವರು (ಜುಬೈರ್) ಪತ್ರಕರ್ತ ಅಲ್ಲ’ ಎಂದು ತಿಳಿಸಿದರು.

‘ಕಾನೂನಿಗೆ ವಿರುದ್ಧವಾಗಿ ಯಾವುದಾದರೂ ಟ್ವೀಟ್‌ ಮಾಡಿದರೆ, ಅದಕ್ಕೆ ಅವರು ಉತ್ತರದಾಯಿಯಾಗಿರುತ್ತಾರೆ. ಒಬ್ಬ ವ್ಯಕ್ತಿ ಮಾತನಾಡಬಾರದು ಎಂದು ಸೂಚಿಸಿ, ಮುಂಚಿತವಾಗಿಯೇ ನಾವು ಆದೇಶ ನೀಡಲು ಹೇಗೆ ಸಾಧ್ಯ. ಅವರು ಪುನಃ ಟ್ವೀಟ್‌ ಮಾಡುವುದಿಲ್ಲ ಎಂದು ನಾವು ಹೇಳಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿಗಳು ಹೇಳಿದರು.

‘ಟ್ವೀಟ್‌ ಮಾಡಿದರೆ ಜುಬೈರ್‌ ಅವರಿಗೆ ಹಣ ಪಾವತಿಸಲಾಗುತ್ತದೆ. ಟ್ವೀಟ್‌ಗಳು ಹೆಚ್ಚು ದ್ವೇಷಪೂರಿತವಾಗಿದ್ದಷ್ಟು ಅವರಿಗೆ ಹೆಚ್ಚು ಹಣ ನೀಡಲಾಗುತ್ತದೆ. ಜುಬೈರ್‌ ಈ ವರೆಗೆ ₹ 2 ಕೋಟಿಗೂ ಹೆಚ್ಚು ಹಣ ಪಡೆದಿದ್ದಾರೆ’ ಎಂದು ಉತ್ತರ ಪ್ರದೇಶ ಪರ ವಕೀಲರು ಹೇಳಿದರು.

ಈ ವಾದವನ್ನು ಅಲ್ಲಗಳೆದ, ಜುಬೈರ್‌ ಪರ ವಕೀಲರಾದ ವೃಂದಾ ಗ್ರೋವರ್, ‘ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಉದ್ದೇಶದಿಂದಲೇ ಪ್ರಕರಣಗಳನ್ನು ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಜುಬೈರ್‌ ವಿರುದ್ಧ ಹಾಥ್ರಸ್‌ನಲ್ಲಿ ಎರಡು ಎಫ್‌ಐಆರ್ ದಾಖಲಾಗಿವೆ. ಲಖೀಂಪುರ ಖೇರಿ, ಮುಜಫ್ಫನಗರ, ಗಾಜಿಯಾಬಾದ್‌ ಹಾಗೂ ಸೀತಾಪುರದಲ್ಲಿ ತಲಾ ಒಂದು ಎಫ್‌ಐಆರ್‌ ದಾಖಲಾಗಿವೆ. ಜೂನ್‌ 27ರಂದು ದೆಹಲಿ ಪೊಲೀಸರು ಬಂಧಿಸಿದ ನಂತರ ಅವರು ನ್ಯಾಯಾಂಗ ಬಂಧನದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT