ಗುರುವಾರ , ಅಕ್ಟೋಬರ್ 28, 2021
18 °C

ಭಾರತದಂತೆ ಕೋವಿಡ್‌ ನಿರ್ವಹಿಸಲು ಬೇರಾವ ರಾಷ್ಟ್ರಕ್ಕೂ ಸಾಧ್ಯವಿಲ್ಲ: ಸುಪ್ರೀಂ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ದೊಡ್ಡ ಜನಸಂಖ್ಯೆಯನ್ನು ಇಟ್ಟುಕೊಂಡು ಭಾರತವು ಕೋವಿಡ್‌-19 ಪರಿಸ್ಥಿತಿಯನ್ನು ನಿಭಾಯಿಸಿದಂತೆ ಬೇರೆ ಯಾವ ರಾಷ್ಟ್ರಕ್ಕೂ ನಿಭಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ಭಾರತ ಸರ್ಕಾರ ಕೋವಿಡ್‌-19 ಸೋಂಕನ್ನು ಅತ್ಯುತ್ತಮವಾಗಿ ನಿರ್ವಹಿಸಿದೆ ಎಂದು ನ್ಯಾಯಮೂರ್ತಿ ಎಂ.ಆರ್‌. ಶಾ ಮತ್ತು ಎ.ಎಸ್‌.ಬೊಪಣ್ಣ ಪೀಠವು ಶ್ಲಾಘಿಸಿದ್ದು, ಕೋವಿಡ್‌-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹50,000 ಸಹಾಯಧನ ನೀಡುವುದು ಸೇರಿದಂತೆ ಕೇಂದ್ರ ತಳೆದ ನಿರ್ಣಯಗಳನ್ನು ಮೆಚ್ಚಿಕೊಂಡಿದೆ.

ಕೇಂದ್ರದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಕೋವಿಡ್‌-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹50,000 ಸಹಾಯಧನ ನೀಡಲು ಇರುವ ಮಾರ್ಗಸೂಚಿಗಳು, ಮರಣ ಪ್ರಮಾಣ ಪತ್ರ ಮತ್ತು ಸಂಕಷ್ಟ ಪರಿಹರಿಹಸಲು ಇರುವ ಕುಂದುಕೊರತೆಗಳ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದರು.

'ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ, ಆದರೆ ನಾವು ಏನಾದರೂ ಮಾಡಬಹುದು. ಎಸ್‌ಡಿಆರ್‌ಎಫ್‌ನಿಂದ ₹50,000 ಸಹಾಯಧನ ನೀಡಲು ನಿರ್ಧರಿಸಿದ್ದೇವೆ. ಕೋವಿಡ್‌ ದೃಢ ಪಟ್ಟು, 30 ದಿನಗಳಲ್ಲಿ ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರೂ, ಆತನ ಕುಟುಂಬವನ್ನು ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಹಣಕಾಸಿನ ನೆರವು ನೀಡಲಾಗುವುದು' ಎಂದು ತುಷಾರ್‌ ಮೆಹ್ತಾ ತಿಳಿಸಿದರು.

'ನಮಗೆ ಸಂತೋಷವಾಗಿದೆ. ಇದರಿಂದ ಸಾಕಷ್ಟು ಮಂದಿಗೆ ಸಾಂತ್ವನ ಸಿಕ್ಕಂತಾಗುತ್ತದೆ. ಹಲವರ ಕಣ್ಣೀರನ್ನು ಒರೆಸುತ್ತದೆ' ಎಂದು ಪೀಠವು ಪ್ರತಿಕ್ರಿಯಿಸಿದೆ.

'ನೊಂದವರ ಕಣ್ಣೀರನ್ನು ಒರೆಸಲು ನಡೆಸುತ್ತಿರುವ ಪ್ರಯತ್ನದಿಂದ ಸಂತೋಷವಾಗಿದೆ. ಕೋವಿಡ್‌ ಸೋಂಕಿನ ಪರಿಸ್ಥಿತಿಯನ್ನು ಭಾರತ ನಿರ್ವಹಿಸಿದಂತೆ ಬೇರೆ ಯಾವ ರಾಷ್ಟ್ರವೂ ನಿರ್ವಹಿಸಲು ಸಾಧ್ಯವಿಲ್ಲ ಎಂಬುದು ಗಮನಾರ್ಹ ಎಂದು ಪೀಠ ಅಭಿಪ್ರಾಯ ಪಟ್ಟಿದೆ.

ಜನಸಂಖ್ಯೆಯ ಗಾತ್ರ, ಲಸಿಕೆಗಳ ಖರ್ಚು, ಆರ್ಥಿಕ ಪರಿಸ್ಥಿತಿ ಮತ್ತು ಪ್ರತಿಕೂಲ ಅಡೆತಡೆಗಳ ನಡುವೆ ಕೋವಿಡ್‌-19 ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಉತ್ತಮ ಹೆಜ್ಜೆಗಳನ್ನು ಇಟ್ಟಿದೆ ಎಂದು ಸುಪ್ರೀಂ ಪೀಠವು ಶ್ಲಾಘಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು