ಸೋಮವಾರ, ಜೂನ್ 27, 2022
24 °C
ಮಹಾರಾಷ್ಟ್ರದ ಮರಾಠಾ ಮೀಸಲಾತಿ ಕಾಯ್ದೆ ರದ್ದು

ಮೀಸಲು ಮಿತಿ ತೀರ್ಪು ಮರುಪರಿಶೀಲನೆ ಇಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮೀಸಲಾತಿಯ ಒಟ್ಟು ಪ್ರಮಾಣವು ಶೇ 50ರಷ್ಟನ್ನು ಮೀರಬಾರದು ಎಂದು ಹೇಳಿದ್ದ 1992ರ ಇಂದಿರಾ ಸಾಹ್ನಿ ಪ್ರಕರಣದ ತೀರ್ಪನ್ನು (ಇದನ್ನು ಮಂಡಲ್ ತೀರ್ಪು ಎಂದೂ ಹೇಳಲಾಗುತ್ತದೆ) ಮರುಪರಿಶೀಲನೆಗೆ ಒಳಪಡಿಸುವ ಅಗತ್ಯ ಇಲ್ಲ. ವಿವಿಧ ತೀರ್ಪುಗಳ ಸಂದರ್ಭದಲ್ಲಿ ಪದೇ ಪದೇ ಈ ತೀರ್ಪನ್ನು ಎತ್ತಿ ಹಿಡಿಯಲಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಬುಧವಾರ ಹೇಳಿದೆ. 

ಮರಾಠಾ ಸಮುದಾಯಕ್ಕೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಮೀಸಲು ನೀಡುವುದಕ್ಕಾಗಿ ಮಹಾರಾಷ್ಟ್ರ ಸರ್ಕಾರ ರೂಪಿಸಿದ್ದ ಕಾಯ್ದೆಯನ್ನು ಪೀಠವು ರದ್ದುಪಡಿಸಿದೆ. ಶೇ 50ರ ಮೀಸಲು ಮಿತಿಯನ್ನು ಮೀರಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡಲು ಅಸಾಧಾರಣ ಎನ್ನುವಂತಹ ಪರಿಸ್ಥಿತಿ ಏನೂ ಸೃಷ್ಟಿಯಾಗಿಲ್ಲ ಎಂದು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ಪೀಠವು ಹೇಳಿದೆ.

ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡಲು ಆಧಾರವಾಗಿರುವ ಎಂ.ಸಿ. ಗಾಯಕವಾಡ್‌ ಸಮಿತಿಯು ಅಸಾಧಾರಣ ಎನ್ನಬಹುದಾದ ಸನ್ನಿವೇಶವನ್ನು ವರದಿಯಲ್ಲಿ  ಉಲ್ಲೇಖಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಎಲ್‌.ಎನ್‌. ರಾವ್‌, ಹೇಮಂತ್‌ ಗುಪ್ತಾ,ಎಸ್‌. ರವೀಂದ್ರ ಭಟ್‌ ಮತ್ತು ಎಸ್‌. ಅಬ್ದುಲ್‌ ನಜೀರ್‌ ಅವರು ಸದಸ್ಯರಾಗಿರುವ ಪೀಠ ಹೇಳಿದೆ. 

ಸಂವಿಧಾನ ಪೀಠವು ಒಟ್ಟು ನಾಲ್ಕು ತೀರ್ಪುಗಳನ್ನು ನೀಡಿದೆ. ಅದರ ಪೈಕಿ ಮೂರರ ಬಗ್ಗೆ ಎಲ್ಲ ನ್ಯಾಯಮೂರ್ತಿಗಳಲ್ಲಿ ಒಮ್ಮತ ಇತ್ತು. ಇದರಲ್ಲಿ ಮರಾಠಾ ಮೀಸಲು ರದ್ದತಿಯೂ ಸೇರಿದೆ. 

ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು (ಎಸ್‌ಇಬಿಸಿ) ಗುರುತಿಸಲು ರಾಜ್ಯಗಳಿಗೆ ಅಧಿಕಾರ ಇಲ್ಲ ಎಂದು ಹೇಳುವ ಸಂವಿಧಾನದ 102ನೇ ತಿದ್ದುಪಡಿ ವಿಚಾರದಲ್ಲಿ ಪೀಠವು ಭಿನ್ನಮತದ ತೀರ್ಪು ನೀಡಿದೆ. ಮೂವರು ನ್ಯಾಯಮೂರ್ತಿಗಳು ಇದರ ಪರವಾಗಿ ತೀರ್ಪು ನೀಡಿದ್ದಾರೆ. ಅಶೋಕ್ ಭೂಷಣ್‌ ಮತ್ತು ನಜೀರ್‌ ಅವರು ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಅಧಿಕಾರ ಇರಬೇಕು ಎಂದು ಹೇಳಿದ್ದಾರೆ. 

ಎಸ್‌ಇಬಿಸಿಯ ಹೊಸ ಪಟ್ಟಿಯನ್ನು ಕೇಂದ್ರವು ಸಿದ್ಧಪಡಿಸಬೇಕು ಮತ್ತು ಅಲ್ಲಿಯವರೆಗೆ ಈಗ ಇರುವ ಪಟ್ಟಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂಬ ವಿಚಾರದಲ್ಲಿಯೂ ಪೀಠವು ಒಮ್ಮತದ ತೀರ್ಪು ಕೊಟ್ಟಿದೆ. 

ಮರಾಠರಿಗೆ ಮೀಸಲಾತಿ ನೀಡುವ ಕಾಯ್ದೆಯನ್ನು ಬಾಂಬೆ ಹೈಕೋರ್ಟ್‌ 2019ರಲ್ಲಿ ಎತ್ತಿ ಹಿಡಿದಿತ್ತು.

102ನೇ ತಿದ್ದುಪಡಿ ಏನು?

ಸಂವಿಧಾನಕ್ಕೆ 2018ರಲ್ಲಿ 102ನೇ ತಿದ್ದುಪಡಿ ಮಾಡಿ 338ಬಿ ಮತ್ತು 342ಎ ವಿಧಿಗಳನ್ನು ಸೇರಿಸಲಾಗಿದೆ. 338ಬಿ ವಿಧಿಯು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ರಚನೆ, ಕರ್ತವ್ಯಗಳು ಮತ್ತು ಅಧಿಕಾರಕ್ಕೆ ಸಂಬಂಧಿಸಿದ್ದಾಗಿದೆ. 342ಎ ವಿಧಿಯು ನಿರ್ದಿಷ್ಟ ಜಾತಿಯು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಕ್ಕೆ ಸೇರುತ್ತದೆಯೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ರಾಷ್ಟ್ರಪತಿಗೆ ನೀಡುತ್ತದೆ; ಪಟ್ಟಿಯನ್ನು ಬದಲಾಯಿಸುವ ಅಧಿಕಾರವನ್ನು ಸಂಸತ್ತಿಗೆ ನೀಡುತ್ತದೆ.

ಮಂಡಲ್‌ ತೀರ್ಪು ಮರುಪರಿಶೀಲನೆ ಹಿನ್ನೆಲೆ

ಸಂವಿಧಾನದ 102ನೇ ತಿದ್ದುಪಡಿಯನ್ನು ವ್ಯಾಖ್ಯಾನಿಸುವುದು ಮಹತ್ವದ್ದು ಎಂದು ಸುಪ್ರೀಂ ಕೋರ್ಟ್‌ ಮಾರ್ಚ್‌ 8ರಂದು ಪರಿಗಣಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಪರಿಶೀಲಿಸಲು ಆರು ಪ್ರಶ್ನೆಗಳನ್ನು ರೂಪಿಸಿತ್ತು. 

‘ನಂತರ, ಸಂವಿಧಾನಕ್ಕೆ ಆಗಿರುವ ತಿದ್ದುಪಡಿಗಳು, ಬಂದಿರುವ ತೀರ್ಪುಗಳು ಮತ್ತು ಸಾಮಾಜಿಕ ಸ್ಥಿತಿಯಲ್ಲಿನ ಬದಲಾವಣೆ’ಯ ಹಿನ್ನೆಲೆಯಲ್ಲಿ ಇಂದಿರಾ ಸಾಹ್ನಿ ಪ್ರಕರಣದ ತೀರ್ಪಿನ ಮರುಪರಿಶೀಲನೆಯ ಅಗತ್ಯ ಇದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡುವಂತೆ ರಾಜ್ಯಗಳಿಗೆ ಸೂಚಿಸಲಾಗಿತ್ತು. 

342ಎ ವಿಧಿಯು ಯಾವುದೇ ಜಾತಿಯನ್ನು ಹಿಂದುಳಿದ ವರ್ಗ ಎಂದು ಗುರುತಿಸಿ, ಶಾಸನ ರಚಿಸುವ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುತ್ತದೆಯೇ ಮತ್ತು ಆ ಮೂಲಕ ಒಕ್ಕೂಟ ನೀತಿ ಹಾಗೂ ಸಂವಿಧಾನದ ನಿಯಮಗಳನ್ನು ಉಲ್ಲಂಘಿಸುತ್ತದೆಯೇ ಎಂಬುದು ಆರು ಪ್ರಶ್ನೆಗಳಲ್ಲಿ ಒಂದಾಗಿತ್ತು. 

ಮಹಾರಾಷ್ಟ್ರ ಸರ್ಕಾರ ರೂಪಿಸಿದ್ದ ಮರಾಠಾ ಮೀಸಲಾತಿ ಕಾಯ್ದೆಯನ್ನು ಪರಿಶೀಲನೆಗೆ ಒಳಪಡಿಸುವುದು ಇನ್ನೊಂದು ಅಂಶವಾಗಿತ್ತು. 

102ನೇ ತಿದ್ದುಪಡಿಯು ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆ ಅಲ್ಲ ಮತ್ತು ಮಹಾರಾಷ್ಟ್ರದ ಮರಾಠಾ ಮೀಸಲು ಕಾಯ್ದೆಯು ಸಾಂವಿಧಾನಿಕವೇ ಆಗಿದೆ ಎಂದು ಕೇಂದ್ರ ಸರ್ಕಾರವು ವಿಚಾರಣೆಯ ಸಂದರ್ಭದಲ್ಲಿ ವಾದಿಸಿತ್ತು. 

ಮರಾಠಾ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿ ನೀಡುವ ಎಸ್‌ಇಬಿಸಿ ಕಾಯ್ದೆಯನ್ನು ಮಹಾರಾಷ್ಟ್ರ 2018ರಲ್ಲಿ ಅಂಗೀಕರಿಸಿತ್ತು. 2019ರ ಜೂನ್‌ನಲ್ಲಿ ಬಾಂಬೆ ಹೈಕೋರ್ಟ್‌ ಅದನ್ನು ಎತ್ತಿ ಹಿಡಿದಿತ್ತು. ಆದರೆ ನೇಮಕಾತಿಯಲ್ಲಿನ ಮೀಸಲಾತಿಯನ್ನು ಶೇ 12ಕ್ಕೆ ಮತ್ತು ಶಿಕ್ಷಣ ಸಂಸ್ಥೆ ಪ್ರವೇಶಾತಿ ಮೀಸಲಾತಿಯನ್ನು ಶೇ 13ಕ್ಕೆ ಇಳಿಸಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು