ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಬಿಯಿಂದ ಮತ್ತೆ ರಿಯಾ ವಿಚಾರಣೆ

ಸೋಮವಾರ ಎಂಟು ಗಂಟೆ ವಿಚಾರಣೆ ಮಂಗಳವಾರ ಮತ್ತೆ ಹಾಜರಾಗುವ ಸಾಧ್ಯತೆ
Last Updated 7 ಸೆಪ್ಟೆಂಬರ್ 2020, 16:21 IST
ಅಕ್ಷರ ಗಾತ್ರ

ಮಂಬೈ/ನವದೆಹಲಿ: ನಟ ಸುಶಾಂತ್‌ ಸಿಂಗ್ ರಜಪೂತ್‌ ಸಾವಿಗೆ ಸಂಬಂಧಿಸಿದ ಡ್ರಗ್ಸ್‌ ಪ್ರಕರಣದಲ್ಲಿ, ನಟಿ ರಿಯಾ ಚಕ್ರವರ್ತಿ ಅವರನ್ನು ಸೋಮವಾರವೂ ಎಂಟು ಗಂಟೆಗಳ ಕಾಲ ಮಾದಕವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಭಾನುವಾರ ಮೊದಲ ಬಾರಿಗೆ ರಿಯಾ ಅವರನ್ನು ಕರೆಸಿಕೊಂಡಿದ್ದ ಅಧಿಕಾರಿಗಳು ಆರು ತಾಸು ವಿಚಾರಣೆ ನಡೆಸಿದ್ದರು. ಸೋಮವಾರ ಬೆಳಗ್ಗೆ 9.30ರ ವೇಳೆಗೆ ಮತ್ತೆ ಬಲ್ಲಾರ್ಡ್‌ ಎಸ್ಟೇಟ್‌ ಪ್ರದೇಶದಲ್ಲಿ ಇರುವ ಎನ್‌ಸಿಬಿ ಕಚೇರಿಗೆ ರಿಯಾ ಆಗಮಿಸಿದರು. ಸಂಜೆ ಆರು ಗಂಟೆಯವರೆಗೂ ಅವರ ವಿಚಾರಣೆ ನಡೆದಿದೆ. ಮಂಗಳವಾರ ಮತ್ತೆ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಪ್ರಕರಣದಲ್ಲಿ ಈಗಾಗಲೇ ರಿಯಾ ಸಹೋದರ ಶೋವಿಕ್‌ ಚಕ್ರವರ್ತಿ, ರಜಪೂತ್‌ ಮನೆಯ ವ್ಯವಸ್ಥಾಪಕ ಸ್ಯಾಮುಯೆಲ್‌ ಮಿರಾಂಡ ಹಾಗೂ ಮನೆಯಲ್ಲಿ ಕೆಲಸಕ್ಕಿದ್ದ ದೀಪೇಶ್‌ ಸಾವಂತ್‌ ಅವರನ್ನು ಎನ್‌ಸಿಬಿ ಬಂಧಿಸಿದೆ. ಇವರು ಕೆಲ ನಿಷೇಧಿತ ಡ್ರಗ್ಸ್‌ಗಳನ್ನು ಖರೀದಿಸಿದ್ದರು ಎನ್ನುವ ಆರೋಪವಿದೆ.

ಈ ಕುರಿತು ಭಾನುವಾರ ನಡೆದ ವಿಚಾರಣೆ ಸಂದರ್ಭದಲ್ಲಿ ರಿಯಾ ಅವರನ್ನು ಪ್ರಶ್ನಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದು, ಈ ಪೈಕಿ ಏಳು ಜನರು ಈ ಪ್ರಕರಣದಲ್ಲಿ ನೇರವಾದ ಸಂಬಂಧ ಹೊಂದಿದ್ದಾರೆ.

ಸುಶಾಂತ್‌ ಸಾವನ್ನು ರಾಜಕೀಯಗೊಳಿಸಲಾಗುತ್ತಿದೆ: ಕಾಂಗ್ರೆಸ್‌ ಆರೋಪ

ಬಿಹಾರ ಚುನಾವಣೆ ಬೆನ್ನಲ್ಲೇ ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂದು ಕಾಂಗ್ರೆಸ್‌ ಸೋಮವಾರ ಆರೋಪಿಸಿದೆ. ‘ಬಿಹಾರದಲ್ಲಿನ ಸಮಸ್ಯೆಗಳಿಂದ ಜನರ ಚಿತ್ತ ಬೇರೆಡೆಗೆ ಸೆಳೆಯುವ ಉದ್ದೇಶದಿಂದ ರಜಪೂತ್‌ ಸಾವಿನ ಪ್ರಕರಣವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ. ಇದು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನವ ಭಾರತದ ಕೀಳು ರಾಜಕೀಯ’ ಎಂದು ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಟೀಕಿಸಿದ್ದಾರೆ. ‌

ಸುಶಾಂತ್‌ ಸಹೋದರಿ ವಿರುದ್ಧ ರಿಯಾ ದೂರು:

ವ್ಯಾಕುಲತೆಗೆ ಇರುವ ಔಷಧಿ ಖರೀದಿಗೆ ನಕಲಿ ಔಷಧಿ ಚೀಟಿಯನ್ನು ತಯಾರಿಸಿದ್ದಾರೆ ಎಂದು ಆರೋಪಿಸಿ ಸುಶಾಂತ್‌ ಸಿಂಗ್‌ ಸಹೋದರಿ ಪ್ರಿಯಾಂಕಾ ಸಿಂಗ್‌ ಹಾಗೂ ದೆಹಲಿ ಮೂಲದ ವೈದ್ಯರೊಬ್ಬರ ವಿರುದ್ಧ ರಿಯಾ ಚಕ್ರವರ್ತಿ ಸೋಮವಾರ ದೂರು ದಾಖಲಿಸಿದ್ದಾರೆ.

‘ಸುಶಾಂತ್‌ ಸಿಂಗ್‌ಗೆ ಅವರು ಹಲವು ಮಾನಸಿಕ ಆರೋಗ್ಯ ವ್ಯಾಧಿಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಟ್ಟುನಿಟ್ಟಾಗಿ ಅವರು ಇವುಗಳಿಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. 2020ರ ಜೂನ್‌ 8ರಂದು ಪ್ರಿಯಾಂಕ ಅವರು ಕಳುಹಿಸಿದ್ದ ಸಂದೇಶವೊಂದನ್ನು ಸುಶಾಂತ್‌ ನನಗೆ ತೋರಿಸಿದ್ದರು. ಅದರಲ್ಲಿ ಕೆಲವು ಔಷಧಿಗಳ ಪಟ್ಟಿ ಇತ್ತು. ಇವುಗಳನ್ನು ತೆಗೆದುಕೊಳ್ಳುವಂತೆ ಪ್ರಿಯಾಂಕ ಸೂಚಿಸಿದ್ದರು. ಆದರೆ ಈಗಾಗಲೇ ವೈದ್ಯರು ಸೂಚಿಸಿರುವ ಔಷಧಿಗಳನ್ನು ತೆಗೆದುಕೊಳ್ಳುವಂತೆ ನಾನು ತಿಳಿಸಿದ್ದೆ. ಇದನ್ನು ಸುಶಾಂತ್‌ ನಿರಾಕರಿಸಿದ್ದರು. ಸಹೋದರಿ ಹೇಳಿರುವ ಔಷಧಿಯನ್ನೇ ತೆಗೆದುಕೊಳ್ಳುವುದಾಗಿ ಹೇಳಿದ್ದರು.’

‘ವೈದ್ಯರ ಚೀಟಿ ಇಲ್ಲದೇಪ್ರಿಯಾಂಕ ಸೂಚಿಸಿದ್ದ ಔಷಧಿಗಳು ದೊರೆಯದ ಸಂದರ್ಭದಲ್ಲಿ, ಡಾ.ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ತರುಣ್‌ ಕುಮಾರ್‌ ಅವರ ಸಹಿ ಇದ್ದ ವೈದ್ಯರ ಚೀಟಿಯನ್ನು ಪ್ರಿಯಾಂಕ ಸುಶಾಂತ್‌ಗೆ ಕಳುಹಿಸಿರುವುದು ಇದೀಗ ನನ್ನ ಗಮನಕ್ಕೆ ಬಂದಿದೆ. ಮೇಲ್ನೋಟಕ್ಕೆ ಈ ಚೀಟಿ ನಕಲಿಯಾಗಿದೆ. ರೋಗಿಯ ಆರೋಗ್ಯ ಪರಿಶೀಲಿಸದೇ ಈ ಔಷಧಿಗಳನ್ನು ಶಿಫಾರಸು ಮಾಡುವಂತಿಲ್ಲ. ಇದಾದ ಕೆಲವೇ ದಿನಗಳಲ್ಲಿ ಸುಶಾಂತ್‌ ಮೃತಪಟ್ಟಿದ್ದಾರೆ’ ಎಂದು ದೂರಿನಲ್ಲಿ ರಿಯಾ ಉಲ್ಲೇಖಿಸಿದ್ದು, ಆರೋಪಿಗಳ ವಿರುದ್ಧ ಪ‍್ರಕರಣ ದಾಖಲಿಸಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT