ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ‌ ಕಡಿವಾಣ‌ಕ್ಕೆ ಕಠಿಣ ನೀತಿಗೆ ಸೂಚನೆ

ಮೂರು ರಾಜ್ಯಗಳಲ್ಲಿ ವೇಗದಲ್ಲಿ ಪಸರಿಸುತ್ತಿರುವ ಕೋವಿಡ್‌
Last Updated 6 ಸೆಪ್ಟೆಂಬರ್ 2020, 3:01 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಕೋವಿಡ್‌ ಪ್ರಕರಣ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವುದರಿಂದ ಸೋಂಕಿನ ಸರಪಳಿಯನ್ನು ಭೇದಿಸಲು ಮತ್ತು ಮರಣ ಪ್ರಮಾಣವನ್ನು ಶೇ 1ಕ್ಕಿಂತ ಕಡಿಮೆ ಮಾಡಲು ಕಠಿಣ ಕ್ರಮ ಕೈಗೊಳ್ಳುವಂತೆ ಈ ಮೂರೂ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.

‘ಕಳೆದ 24 ಗಂಟೆಗಳಲ್ಲಿ ಸೋಂಕಿಗೆ ಒಳಗಾದವರಲ್ಲಿ ಶೇ 46ರಷ್ಟು ಮಂದಿ ಹಾಗೂ ಸತ್ತವರಲ್ಲಿ ಶೇ 52ರಷ್ಟು ಮಂದಿ ಈ ಮೂರು ರಾಜ್ಯಗಳಿಗೆ ಸೇರಿದವರಾಗಿದ್ದಾರೆ’ ಎಂದು ಕೇಂದ್ರದ ಆರೋಗ್ಯ ಸಚಿವಾಲಯ ಹೇಳಿದೆ.

‘ರಾಜ್ಯದಲ್ಲಿ ಕೊಪ್ಪಳ, ಮೈಸೂರು, ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸೋಂಕು ತಡೆಗೆ ಹೆಚ್ಚಿನ ಗಮನ ಹರಿಸಬೇಕು. ಆರ್‌ಟಿ–ಪಿಸಿಆರ್‌ ಪರೀಕ್ಷಾ ಸೌಲಭ್ಯವನ್ನು ಈ ಜಿಲ್ಲೆಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಬಳಸಬೇಕು. ಮನೆಮನೆಗೆ ಹೋಗಿ ತಪಾಸಣೆ ನಡೆಸಬೇಕು’ ಎಂದು ಕೇಂದ್ರವು ಸಲಹೆ ನೀಡಿದೆ.

ಗ್ರಾಮೀಣ ಭಾಗದಲ್ಲಿ ವೇಗದ ಪ್ರಸರಣ: ಆರಂಭದ ದಿನಗಳಲ್ಲಿ ನಗರಗಳಲ್ಲಿ ಮಾತ್ರ ತೀವ್ರವಾಗಿ ಹಬ್ಬುತ್ತಿದ್ದ ಸೋಂಕು, ಈಗ ಗ್ರಾಮೀಣ ಪ್ರದೇಶದಲ್ಲೂ ನಿಯಂತ್ರಣಕ್ಕೆ ಬಾರದೆ ಹಬ್ಬುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

‘ಸಣ್ಣ ಪಟ್ಟಣ ಹಾಗೂ ಗ್ರಾಮಿಣ ಪ್ರದೇಶದಿಂದಲೇ ಇತ್ತೀಚೆಗೆ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಭಾರತದ ಬಹುತೇಕ ಎಲ್ಲಾ ಭಾಗಗಳಿಗೂ ಸೋಂಕು ಹರಡಿದೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ’ ಎಂದು ಸಾರ್ವಜನಿಕ ಆರೋಗ್ಯ ಕುರಿತ ತಜ್ಞರ ತಂಡವೊಂದು ಈಚೆಗೆ ಹೇಳಿದೆ.

ಎರಡನೇ ಸ್ಥಾನಕ್ಕೆ ಭಾರತ:ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಭಾರತವು ಬ್ರೆಜಿಲ್‌ ಅನ್ನು ಹಿಂದಿಕ್ಕಿ, ಜಾಗತಿಕ ಮಟ್ಟದಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಬ್ರೆಜಿಲ್‌ನಲ್ಲಿ 40.91 ಲಕ್ಷ ಸೋಂಕಿತರಿದ್ದರೆ, ಭಾರತದಲ್ಲಿ ಸೋಂಕಿತರ ಸಂಖ್ಯೆಯು ಶನಿವಾರ 41 ಲಕ್ಷವನ್ನು ದಾಟಿದೆ. 63 ಲಕ್ಷಕ್ಕೂ ಹೆಚ್ಚಿನ ಸೋಂಕಿತರನ್ನು ಹೊಂದಿರುವ ಅಮೆರಿಕವು ಮೊದಲ ಸ್ಥಾನದಲ್ಲಿದೆ. ಆದರೆ ಮೃತರ ಸಂಖ್ಯೆಯು ಬ್ರೆಜಿಲ್‌ನಲ್ಲಿ 1.25 ಲಕ್ಷದಷ್ಟಿದ್ದರೆ, ಭಾರತದಲ್ಲಿ ಅದು 70,596ರಷ್ಟಿದೆ.

13 ದಿನದಲ್ಲಿ 10 ಲಕ್ಷ: ದೇಶದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ 40 ಲಕ್ಷ ದಾಟಿದ್ದು, ಕಳೆದ 13 ದಿನಗಳಲ್ಲಿ ಹತ್ತು ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಸೋಂಕಿತರ ಸಂಖ್ಯೆಯು 10 ಲಕ್ಷದಿಂದ 20ಲಕ್ಷಕ್ಕೆ ಏರಲು 21 ದಿನಗಳಾಗಿದ್ದವು. ಮುಂದಿನ 16 ದಿನಗಳಲ್ಲಿ ಅದು 30 ಲಕ್ಷಕ್ಕೆ ಏರಿತ್ತು. ಈಗ, 13 ದಿನಗಳಲ್ಲಿ ಸೋಂಕಿತರ ಸಂಖ್ಯೆ 40 ಲಕ್ಷಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT