ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ವಂಚನೆ ಪ್ರಕರಣ: ಡಿ.ಕೆ. ಶಿವಕುಮಾರ್‌ಗೆ ನೋಟಿಸ್‌

‘ಸುಪ್ರೀಂ’ ಮೆಟ್ಟಿಲೇರಿರುವ ಐ.ಟಿ.
Last Updated 19 ಸೆಪ್ಟೆಂಬರ್ 2022, 20:45 IST
ಅಕ್ಷರ ಗಾತ್ರ

ನವದೆಹಲಿ: ತೆರಿಗೆ ವಂಚನೆ ಪ್ರಕರಣಗಳನ್ನು ವಜಾಗೊಳಿಸಿರುವ ಹೈಕೋರ್ಟ್‌ ಆದೇಶದ ವಿರುದ್ಧ ಆದಾಯ ತೆರಿಗೆ ಇಲಾಖೆ (ಐಟಿ) ಸಲ್ಲಿಸಿರುವ ಅರ್ಜಿಯ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸುಪ್ರೀಂ ಕೋರ್ಟ್‌ ಸೋಮವಾರ ನೋಟಿಸ್‌ ಜಾರಿ ಮಾಡಿದೆ.

ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ಜೆ.ಕೆ. ಮಹೇಶ್ವರಿ ಅವರನ್ನು ಒಳಗೊಂಡ ಪೀಠವು, ಕರ್ನಾಟಕ ಹೈಕೋರ್ಟ್‌ನ ಕೆಲವು ಅಭಿಪ್ರಾಯಗಳಿಗೆ ತಡೆಯಾಜ್ಞೆ ನೀಡಿದೆ. ನೋಟಿಸ್‌ಗೆ ಪ್ರತಿಕ್ರಿಯೆ ನೀಡಲು ನಾಲ್ಕು ವಾರಗಳ ಕಾಲಾವಕಾಶ ನೀಡಿರುವ ನ್ಯಾಯಪೀಠ, ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡಿತು.

ಅಧಿಕಾರಿಯೊಬ್ಬರು ನೀಡಿದ ಕ್ರಿಮಿನಲ್‌ ದೂರನ್ನು ವಿಚಾರಣೆಗೆ ಪರಿಗಣಿಸುವ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯ ಕುರಿತು ಹೈಕೋರ್ಟ್‌ ನೀಡಿರುವ ಹೇಳಿಕೆಗಳಿಗೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆನೀಡಿದೆ. ಆದರೆ, ಈ ಸಂಬಂಧ ಹೊಸದಾಗಿ ವಿಚಾರಣೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲು ಆದಾಯ ತೆರಿಗೆ ಇಲಾಖೆ ಮುಕ್ತವಾಗಿದೆ ಎಂದಿದೆ.

ವಿಚಾರಣೆಯ ವೇಳೆ, ಪ್ರತಿವಾದಿಯ ಪರವಾಗಿ ಹಿರಿಯ ವಕೀಲರಾದ ಮುಕುಲ್‌ ರೊಹಟಗಿ ಹಾಗೂ ಸಿ.ಎ. ಸುಂದರಂ ವಾದ ಮಂಡಿಸಿದರೆ, ಐಟಿ ಇಲಾಖೆಯ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎನ್‌.ವೆಂಕಟರಾಮನ್‌ ವಾದ ಮಂಡಿಸಿದರು.

2017ರ ಆಗಸ್ಟ್‌ನಲ್ಲಿ ನಡೆದ ಐಟಿ ದಾಳಿಯ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ದಾಖಲಾಗಿರುವ ಮೂರು ಪ್ರಕರಣಗಳನ್ನು ರದ್ದುಗೊಳಿಸುವಂತೆ ವಿಶೇಷ ನ್ಯಾಯಾಲಯ 2019ರ ಫೆಬ್ರುವರಿ 29ರಂದು ನೀಡಿದ ಆದೇಶದ ವಿರುದ್ಧ ಆದಾಯ ತೆರಿಗೆ ಇಲಾಖೆಯು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿತ್ತು. ಈ ಮರು ಪರಿಶೀಲನಾ ಅರ್ಜಿಯನ್ನು ಹೈಕೋರ್ಟ್‌ 2021ರ ಏಪ್ರಿಲ್‌ನಲ್ಲಿ ವಜಾಗೊಳಿಸಿತ್ತು.

ಈ ನಡುವೆ, ಶಿವಕುಮಾರ್ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿದ್ದರೂ
ಬಹಿರಂಗಪಡಿಸದ ಆದಾಯದ ಪ್ರಮಾಣವನ್ನು ಅಂದಾಜು ಹಾಕಿದ ನಂತರ ಹೊಸ ವಿಚಾರಣೆ ನಡೆಸಲು ಇಲಾಖೆಗೆ ವಿಶೇಷ ನ್ಯಾಯಾಲಯ ಅನುಮತಿ ನೀಡಿತ್ತು. ಶಿವಕುಮಾರ್ ನಿವಾಸ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯು ಮೂರು ತೆರಿಗೆ ವಂಚನೆ ಪ್ರಕರಣಗಳನ್ನು ದಾಖಲಿಸಿತ್ತು. ಇದರೊಂದಿಗೆ, ಬಿಡದಿ ಬಳಿಯ ಈಗಲ್‌ಟನ್‌ ರೆಸಾರ್ಟ್‌ಗೆ ದಾಳಿ ನಡೆಸಿದಾಗ ಡಿ.ಕೆ.ಶಿವಕುಮಾರ್ ಅವರು ತಮ್ಮ ಬಳಿ ಇದ್ದ ಚೀಟಿಯೊಂದನ್ನು ಹರಿದು ಹಾಕಿ ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಐ.ಟಿ ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT