ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಮಾತು ಆಲಿಸಬೇಕು,ಅಳವಡಿಸಿಕೊಳ್ಳಬೇಕು: ರಂಜಿತ್ ಸಿನ್ಹಾ ದಿಸಾಳೆ

Last Updated 6 ಡಿಸೆಂಬರ್ 2020, 11:01 IST
ಅಕ್ಷರ ಗಾತ್ರ

ನವದೆಹಲಿ: ‘ಶಿಕ್ಷಕರ ಮಾತುಗಳನ್ನು ಆಲಿಸಬೇಕು, ಗೌರವಿಸಬೇಕು ಮತ್ತು ಅವುಗಳನ್ನು ಅಳವಡಿಸಿಕೊಳ್ಳಲು ಹೆಚ್ಚಿನ ಒತ್ತು ನೀಡಬೇಕು. ಉತ್ತಮ ಕೆಲಸ ಮಾಡುತ್ತಿರುವ ಶಿಕ್ಷಕರ ಸೇವೆಯನ್ನು ಗುರುತಿಸಬೇಕು’.

ಇದು, ಗ್ಲೋಬಲ್‌ ಟೀಚರ್ ಪ್ರಶಸ್ತಿ ವಿಜೇತರಾದ ಮಹಾರಾಷ್ಟ್ರದ ಶಿಕ್ಷಕ, 32 ವರ್ಷದ ರಂಜಿತ್ ಸಿನ್ಹಾ ದಿಸಾಳೆ ಅವರ ನುಡಿ.

‘ಬಹುಮಾನದ ಮೊತ್ತವನ್ನು ಹೊರತುಪಡಿಸಿ ಈ ಪ್ರಶಸ್ತಿಗೆ ಒಂದು ಪ್ರತಿಷ್ಠೆ, ವರ್ಚಸ್ಸು ಇದೆ. ಈ ಪ್ರಶಸ್ತಿಗೆ ಪಾತ್ರರಾದ ಮೊದಲ ಭಾರತೀಯ ಶಿಕ್ಷಕ ಎಂಬುದು ನನಗೆ ಹೆಚ್ಚಿನ ಹೆಮ್ಮೆ ಎನಿಸುತ್ತದೆ’ ಎಂದು ದಿಸಾಳೆ ಅಭಿಪ್ರಾಯಪಟ್ಟರು.

‘ನಾನು ಎಂಜಿನಿಯರಿಂಗ್ ಕಲಿಕೆಯನ್ನು ಮಧ್ಯದಲ್ಲಿಯೇ ಕೈಬಿಟ್ಟೆ. ಅದಕ್ಕಾಗಿ ನನಗೆ ವಿಷಾದವಿಲ್ಲ. ಶಿಕ್ಷಕ ವೃತ್ತಿ ಆಯ್ದುಕೊಂಡಿದ್ದು ನನ್ನ ಅದೃಷ್ಟ’ ಎಂದು ಅವರು ಹೇಳಿದರು. ಪರಿತ್ವಾಡಿಯಲ್ಲಿ ಇರುವ ಜಿಲ್ಲಾ ಪರಿಷತ್ತಿನ ಪ್ರಾಥಮಿಕ ಶಾಲೆ ಶಿಕ್ಷಕರಾದ ಅವರನ್ನು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೀಡಿದ ಆದ್ಯತೆ, ಪಠ್ಯಪುಸ್ತಕದಲ್ಲಿ ಕ್ಯೂಆರ್ ಕೋಡ್ ಅಳವಡಿಕೆಗಾಗಿ ಪ್ರಶಸ್ತಿಗೆ ಪರಿಗಣಿಸಲಾಗಿದೆ.

ಸುದ್ದಿ ಸಂಸ್ಥೆ ಜೊತೆಗೆ ಫೋನ್‌ನಲ್ಲಿ ಮಾತನಾಡಿದ ಅವರು, ಶಿಕ್ಷಕರನ್ನು ಇಂಥ ದೊಡ್ಡ ಪ್ರಮಾಣದಲ್ಲಿ ಗುರುತಿಸಿದ್ದಕ್ಕಾಗಿ ನಾನು ಯುನೆಸ್ಕೊ ಮತ್ತು ವಾರ್ಕೆ ಫೌಂಡೇಷನ್‌ಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ ಎಂದು ಪ್ರತಿಕ್ರಿಯಿಸಿದರು.

‘ನಾನು ಶಿಕ್ಷಕ. ಜೀವನವಿಡೀ ಶಿಕ್ಷಕನಾಗಿಯೇ ಇರಲು ಬಯಸುತ್ತೇನೆ. ವಿಶ್ವದ ಎಲ್ಲ ಶಿಕ್ಷಕರಿಗೆ ಈ ಪ್ರಶಸ್ತಿ ಅರ್ಪಿಸಲು ಬಯಸುತ್ತೇನೆ. ಶಿಕ್ಷಣದಲ್ಲಿ ಬದಲಾವಣೆ ತರಲು ಸರ್ಕಾರ, ಶಿಕ್ಷಕರು ಮತ್ತು ಎಲ್ಲ ಭಾಗಿದಾರರು ಒಟ್ಟಾಗಿ ಕಾರ್ಯ ನಿರ್ವಹಿಸಬೇಕು. ಒಟ್ಟುಗೂಡಿ ಕೆಲಸ ಮಾಡಿದರೆ ಖಂಡಿತವಾಗಿ ಉತ್ತಮ ಫಲಿತಾಂಶ ನಮ್ಮದಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT