ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು- ಕಾಶ್ಮೀರ: ನಾಗರಿಕರೇ ಈಗ ಉಗ್ರರ ಗುರಿ

ಈ ವರ್ಷ 25ಕ್ಕೂ ಹೆಚ್ಚು ಜನರ ಹತ್ಯೆ: ಸಾಮರಸ್ಯ ಕದಡುವ ಯತ್ನ
Last Updated 7 ಅಕ್ಟೋಬರ್ 2021, 18:04 IST
ಅಕ್ಷರ ಗಾತ್ರ

ಶ್ರೀನಗರ: ಸಂವಿಧಾನದ 370ನೇ ವಿಧಿ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್‌ನಲ್ಲಿ ರದ್ದುಗೊಳಿಸಿದ ಬಳಿಕ ಕಾಶ್ಮೀರವು ಸಹಜ ಸ್ಥಿತಿಗೆ ಮರಳಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಕಾಶ್ಮೀರದಲ್ಲಿ ನಿರಂತರವಾಗಿ ನಾಗರಿಕರ ಹತ್ಯೆ ಆಗುತ್ತಿರುವುದು ಬೇರೆಯದೇ ಚಿತ್ರಣ ನೀಡುತ್ತಿದೆ.

ಕಳೆದ ಐದು ದಿನಗಳಲ್ಲಿ ಏಳು ಮಂದಿಯನ್ನು ಉಗ್ರರು ಗುಂಡಿಟ್ಟು ಕೊಂದಿದ್ದಾರೆ. ಈ ವರ್ಷ ಈವರೆಗೆ ಕಣಿವೆಯಲ್ಲಿ ಉಗ್ರರ ಗುಂಡಿಗೆ ಬಲಿಯಾದ ನಾಗರಿಕರ ಸಂಖ್ಯೆ 25ಕ್ಕೂ ಹೆಚ್ಚು. 25 ನಾಗರಿಕರ ಜತೆಗೆ ಭದ್ರತಾ ಪಡೆಯ 20 ಸಿಬ್ಬಂದಿಯೂ ಹುತಾತ್ಮರಾಗಿದ್ದಾರೆ.

ಕೇಂದ್ರ ಸರ್ಕಾರದ ಜನಸಂಪರ್ಕ ಕಾರ್ಯತಂತ್ರದ ಭಾಗವಾಗಿ ಕೇಂದ್ರದ ಸಚಿವರು ಕಣಿವೆಗೆ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೂ ಇದೇ 23ರಿಂದ 25ರವರೆಗೆ ಕಾಶ್ಮೀರದಲ್ಲಿ ಇರಲಿದ್ದಾರೆ. ಹಾಗಾಗಿ,ಕಾಶ್ಮೀರ ಕಣಿವೆಯಲ್ಲಿ ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಏರಿಸಲಾಗಿದೆ. ಗರಿಷ್ಠ ಭದ್ರತೆ ಇದ್ದರೂ ಹತ್ಯೆಗಳು ನಡೆಯುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

ಹತ್ಯೆಯಾದವರಲ್ಲಿ 17 ಮಂದಿ ಬಹುಸಂಖ್ಯಾತ ಸಮುದಾಯದವರಾದರೆ ಎಂಟು ಮಂದಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ರಾಜಧಾನಿ ಶ್ರೀನಗರದಲ್ಲಿಯೇ 10 ಮಂದಿ ನಾಗರಿಕರ ಹತ್ಯೆ ಆಗಿದೆ. ಕುಲ್ಗಾಂ ಜಿಲ್ಲೆಯಲ್ಲಿ ಐವರು, ಪುಲ್ವಾಮಾ ಜಿಲ್ಲೆಯಲ್ಲಿ ನಾಲ್ವರು, ಬಾರಾಮುಲ್ಲಾ ಮತ್ತು ಅನಂತನಾಗ್‌ ಜಿಲ್ಲೆಗಳಲ್ಲಿ ತಲಾ ಇಬ್ಬರು ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.

ಭಯೋತ್ಪಾದಕ ಚಟುವಟಿಕೆಗಳ ಕೇಂದ್ರ ಸ್ಥಾನ ಎಂದೇ ಗುರುತಿಸಲಾಗುವ ಶೋಪಿಯಾನ್‌ ಜಿಲ್ಲೆಯಲ್ಲಿ ಈ ವರ್ಷ ಈ ವರೆಗೆ ನಾಗರಿಕರ ಹತ್ಯೆ ಆಗಿಲ್ಲ.

ಟಿಆರ್‌ಎಫ್‌ ಕೃತ್ಯ

ಪಾಕಿಸ್ತಾನ ಕೇಂದ್ರಿತವಾಗಿ ಕಾರ್ಯಾಚರಣೆ ನಡೆಸುವ ಲಷ್ಕರ್‌ ಎ ತಯಬಾ ಉಗ್ರಗಾಮಿ ಸಂಘಟನೆಯು ದಿ ರೆಸಿಸ್ಟೆನ್ಸ್‌ ಫ್ರಂಟ್‌ (ಟಿಆರ್‌ಎಫ್‌) ಎಂಬ ಗುಂಪನ್ನು ಸ್ಥಾಪಿಸಿದೆ. ಈ ವರ್ಷ ಕಾಶ್ಮೀರದಲ್ಲಿ ಆಗಿರುವ ನಾಗರಿಕರ ಹತ್ಯೆಗಳ ಹೊಣೆಯನ್ನು ಟಿಆರ್‌ಎಫ್‌ ಹೊತ್ತುಕೊಂಡಿದೆ.

ಕಾಶ್ಮೀರಿ ಪಂಡಿತ ಸಮುದಾಯದ ಪ್ರಮುಖ ಉದ್ಯಮಿ ಮಖನ್‌ ಲಾಲ್‌ ಬಿಂದ್ರೂ ಮತ್ತು ಇತರ ಹತ್ಯೆಯ ಬಳಿಕ ಟಿಆರ್‌ಎಫ್‌ ಬುಧವಾರ ಹೇಳಿಕೆ ಬಿಡುಗಡೆ ಮಾಡಿದೆ. ಆರ್‌ಎಸ್‌ಎಸ್‌ ಮತ್ತು ಗು‌ಪ್ತಚರ ಸಂಸ್ಥೆಗಳ ಪರವಾಗಿ ಕೆಲಸ ಮಾಡಿದ್ದಕ್ಕಾಗಿ ಈ ಮೂವರ ಹತ್ಯೆ ಮಾಡಲಾಗಿದೆ ಎಂದು ಹೇಳಿದೆ.

ಆದರೆ, ಟಿಆರ್‌ಎಫ್‌ನ ಹೇಳಿಕೆ ನಿಜವಲ್ಲ, ಬಿಂದ್ರೂ ಅವರು ಆರ್‌ಎಸ್‌ಎಸ್‌ ಪರವಾಗಿ ಕೆಲಸ ಮಾಡಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಮುಖ್ಯಸ್ಥ ದಿಲ್‌ಬಾಗ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ. ಟಿಆರ್‌ಎಫ್‌ ಕರಾಚಿಯಿಂದ ಕಾರ್ಯನಿರ್ವಹಿಸುತ್ತಿದೆ. ಅದನ್ನು ಮಟ್ಟ ಹಾಕುವ ಕೆಲಸ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT