ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮನ್ನು ಅವಮಾನಿಸುವ ಹಕ್ಕು ನಿಮಗಿಲ್ಲ: ಕೇಜ್ರಿವಾಲ್‌ಗೆ ಅಸ್ಸಾಂ ಸಿಎಂ ತಿರುಗೇಟು

Last Updated 28 ಮಾರ್ಚ್ 2022, 5:47 IST
ಅಕ್ಷರ ಗಾತ್ರ

ಗುವಾಹಟಿ: 'ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರಕ್ಕೆ ಬಿಜೆಪಿ ಮುಖಂಡರ ಬೆಂಬಲದ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮಾಡಿರುವ ಟೀಕೆಗಳಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮುದಾಯವೊಂದನ್ನು ಅವಮಾನಿಸುವ ಮೂಲಕ ‘ಹಿಂದೂ ವಿರೋಧಿ’ ಆಗಬೇಡಿ ಎಂದು ಕೇಜ್ರಿವಾಲ್‌ಗೆ ಬಿಸ್ವಾ ತಿರುಗೇಟು ನೀಡಿದ್ದಾರೆ.

'ಬಿಜೆಪಿಗರು ದೆಹಲಿಯಲ್ಲಿ ಚಿತ್ರ ಪ್ರದರ್ಶನಕ್ಕೆ ತೆರಿಗೆ ವಿನಾಯಿತಿ ಕೇಳುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಿ. ಇದರಿಂದ ಸಿನಿಮಾವನ್ನು ಉಚಿತವಾಗೇ ನೋಡಲು ಸಾಧ್ಯವಾಗುತ್ತದೆ. ಎಲ್ಲರೂ ಚಿತ್ರವನ್ನು ವೀಕ್ಷಿಸಬಹುದು'' ಎಂದು ಅರವಿಂದ್‌ ಕೇಜ್ರಿವಾಲ್‌ ತಿಳಿಸಿದ್ದರು.

‘ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು 8 ವರ್ಷಗಳ ಕಾಲ ಆಳಿದರೂ ಆರೋಪಿಸುವುದನ್ನು ನಿಲ್ಲಿಸಿಲ್ಲ. ರಾಜಕೀಯ ಲಾಭಕ್ಕಾಗಿ ಒಂದು ಸಿನಿಮಾದ ಸಹಾಯವನ್ನು ಪಡೆಯುತ್ತಿದ್ದಾರೆ. ಕಾಶ್ಮೀರಿ ಪಂಡಿತರ ಹೆಸರಲ್ಲಿ ಕೆಲವರು ಕೋಟಿಗಳನ್ನು ಗಳಿಸುತ್ತಿದ್ದಾರೆ. ಬಿಜೆಪಿಯವರು ಸಿನಿಮಾದ ಪೋಸ್ಟರ್‌ ಅನ್ನು ಅಂಟಿಸುತ್ತಿದ್ದಾರೆ. ಹಿಟ್ಲರ್‌ ಕೂಡ ತನ್ನ ಗುಲಾಮರಿಗೆ ಉದ್ಯೋಗವನ್ನು ನೀಡಿದ್ದ. ನಿಮಗೆ ಅವರೇನು (ಮೋದಿ) ಕೊಟ್ಟಿದ್ದಾರೆ? ಏನೇ ಆದರೂ ಕೇಜ್ರಿವಾಲ್‌ ನಿಮಗಾಗಿ ಕೆಲಸ ಮಾಡಲು ಸಿದ್ಧ. ನಿಮ್ಮ ಕುಟುಂಬದಲ್ಲಿ ಯಾರೊಬ್ಬರಾದರೂ ಅನಾರೋಗ್ಯಕ್ಕೆ ಒಳಗಾದರೆ ಔಷಧಿಗಳನ್ನು ಕೇಜ್ರಿವಾಲ್‌ ಒದಗಿಸುತ್ತಾನೆಯೇ ಹೊರತು ಮೋದಿಯಲ್ಲ. ನಿಮ್ಮ ಕಣ್ಣುಗಳನ್ನು ತೆರೆದು ನೋಡಿ. ಬಿಜೆಪಿ ಬಿಟ್ಟು ಎಎಪಿ ಸೇರಿ'' ಎಂದು ಕೇಜ್ರಿವಾಲ್‌ ಕರೆ ನೀಡಿದರು.

ಕೇಜ್ರಿವಾಲ್‌ ಟೀಕೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಹಿಮಂತ ಶರ್ಮಾ, ‘ನೀವು(ಕೇಜ್ರಿವಾಲ್‌) ಆ ಚಿತ್ರವನ್ನು ತೆರಿಗೆ ಮುಕ್ತಗೊಳಿಸುತ್ತೀರೋ ಇಲ್ಲವೋ, ಆದರೆ, ನಮ್ಮನ್ನು ಅವಮಾನಿಸುವ ಹಕ್ಕು ನಿಮಗಿಲ್ಲ. ನೀವು ಏನು ಬೇಕಾದರೂ ಮಾಡಬಹುದು. ಆದರೆ, ಬಹಿರಂಗವಾಗಿ ಟೀಕಿಸುವ ಮೂಲಕ 'ಹಿಂದೂ ವಿರೋಧಿ' ಆಗಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಹಿಂದೂಗಳಲ್ಲಿಯೇ ಹಿಂದೂ ವಿರೋಧಿಗಳು ಇರುವುದಕ್ಕೆ ನಮ್ಮ ಸಮಾಜ ಈ ಸ್ಥಿತಿಯಲ್ಲಿದೆ. ಇಲ್ಲದಿದ್ದರೆ, ಹಿಂದೂ ನಾಗರಿಕತೆಯು ಜಗತ್ತಿಗೆ ದಾರಿ ತೋರಿಸುತ್ತಿತ್ತು’ ಎಂದು ಶರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT