ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಗಳ ವೆಚ್ಚದ ಮೇಲೆ ಕೇಂದ್ರಕ್ಕೆ ನಿಗಾ ಇಲ್ಲ: ಮಹಿಳೆಯರ ಸಬಲೀಕರಣ ಸಮಿತಿ

ಬೇಟಿ ಬಚಾವೊ ಬೇಟಿ ಪಢಾವೊ ಯೋಜನೆ ಅನುಷ್ಠಾನದ ಹಿನ್ನಡೆ: ಸಂಸತ್ ಸಮಿತಿ ವರದಿ
Last Updated 11 ಡಿಸೆಂಬರ್ 2021, 21:01 IST
ಅಕ್ಷರ ಗಾತ್ರ

ನವದೆಹಲಿ: ‘ಬೇಟಿ ಬಚಾವೊ ಬೇಟಿ ಪಢಾವೊ’ ಯೋಜನೆಯಡಿಯಲ್ಲಿ ರಾಜ್ಯಗಳು ಮಾಡುವ ವೆಚ್ಚದ ಲೆಕ್ಕವನ್ನು ಕೇಂದ್ರ ಇರಿಸಿಕೊಳ್ಳಬೇಕು ಎಂದು ಸಂಸತ್ತಿನ ಮಹಿಳೆಯರ ಸಬಲೀಕರಣ ಸಮಿತಿಯು ಸರ್ಕಾರಕ್ಕೆ ಹೇಳಿದೆ.

ಈ ಯೋಜನೆಯ ಅಡಿಯಲ್ಲಿ ಬಿಡುಗಡೆ ಮಾಡಲಾದ ನಿಧಿಯನ್ನೇ ರಾಜ್ಯಗಳು ಪೂರ್ಣವಾಗಿ ಬಳಸಿಕೊಂಡಿಲ್ಲ. ಹಾಗಿದ್ದರೂ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ರಾಜ್ಯಗಳಿಗೆ ಹೆಚ್ಚುವರಿ ನಿಧಿಯನ್ನು ಬಿಡುಗಡೆ ಮಾಡುತ್ತಲೇ ಇದೆ. ಯಾವ ರಾಜ್ಯವು ಎಷ್ಟು ಹಣವನ್ನು ವೆಚ್ಚ ಮಾಡಿದೆ ಎಂಬ ಮಾಹಿತಿಯೇ ಸಚಿವಾಲಯದ ಬಳಿ ಇಲ್ಲ ಎಂದು ಸಮಿತಿಯು ಹೇಳಿದೆ.

ಯೋಜನೆಗೆ ಮೀಸಲಿಟ್ಟ ಒಟ್ಟು ಮೊತ್ತದಲ್ಲಿ ವೆಚ್ಚ ಆಗಿದ್ದು ಶೇ 25ರಷ್ಟು ಮಾತ್ರ.

ಹೆಣ್ಣು ಶಿಶುವಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಮೂರು ಸಚಿವಾಲಯಗಳ ಕಾರ್ಯಕ್ರಮವಾಗಿ ಬೇಟಿ ಬಚಾವೊ ಬೇಟಿ ಪಢಾವೊ ಯೋಜನೆಯನ್ನು 2014ರಲ್ಲಿ ಆರಂಭಿಸಲಾಯಿತು. ಲಿಂಗಾನುಪಾತದ ಅಂತರ ತಗ್ಗಿಸುವುದು, ಹೆಣ್ಣು ಮಕ್ಕಳ ಶಿಕ್ಷಣ ಹೆಚ್ಚಳ ಮತ್ತು ಗರ್ಭಧಾರಣೆ ಮುಂಚೆ ಮತ್ತು ಪ್ರಸವಪೂರ್ವ ಪರೀಕ್ಷೆ ತಂತ್ರಜ್ಞಾನ ಕಾಯ್ದೆಯ ಪರಿಣಾಮಕಾರಿ ಜಾರಿಯು ಈ ಯೋಜನೆಯ ಉದ್ದೇಶವಾಗಿತ್ತು.

29 ಸದಸ್ಯರ ಸಂಸತ್‌ ಸಮಿತಿಗೆ ಬಿಜೆಪಿ ಸಂಸದೆ ಹೀನಾ ಗವಿತ್‌ ಮುಖ್ಯಸ್ಥೆ. ರಾಜ್ಯಗಳು ಯೋಜನೆಯ ನಿಧಿಯನ್ನು ಬಳಸಿಕೊಳ್ಳದೇ ಇದ್ದಾಗಲೂ ಹೆಚ್ಚುವರಿ ಮೊತ್ತವನ್ನು ಸಚಿವಾಲಯವು ಮಂಜೂರು ಮಾಡಿದೆ ಎಂದು ಅವರು ಹೇಳಿದ್ದಾರೆ. ‘ಬೇಟಿ ಬಚಾವೊ ಬೇಟಿ ಪಢಾವೊ ಯೋಜನೆಯ ಅಡಿಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ಇತರ ಉಪಕ್ರಮಗಳಿಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಷ್ಟು ಹಣ ವೆಚ್ಚ ಮಾಡಿವೆ ಎಂಬ ಮಾಹಿತಿಯೂ ನೋಡಲ್‌ ಸಚಿವಾಲಯದ ಬಳಿ ಇಲ್ಲ’ ಎಂದು ಸಮಿತಿಯ ವರದಿಯು ಹೇಳಿದೆ.

ಕೇಂದ್ರವು ನೀಡಿದ ನಿಧಿಯನ್ನು ಏಕೆ ಬಳಸಿಕೊಳ್ಳುತ್ತಿಲ್ಲ ಎಂಬ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ತಕ್ಷಣ ಮಾಹಿತಿ ಪಡೆದುಕೊಳ್ಳುವಂತೆ ಸಮಿತಿಯು ಸಚಿವಾಲಯಕ್ಕೆ ಶಿಫಾರಸು
ಮಾಡಿದೆ.

ಯೋಜನೆ ಅಡಿಯಲ್ಲಿ ಪ್ರತಿ ಜಿಲ್ಲೆಗೂ ವರ್ಷಕ್ಕೆ ₹50 ಲಕ್ಷ ಅನುದಾನ ನೀಡಲಾಗುತ್ತಿದೆ. ಎರಡು ಕಂತುಗಳಲ್ಲಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಇದು ಸಂಪೂರ್ಣವಾಗಿ ಕೇಂದ್ರದ ಅನುದಾನದ ಯೋಜನೆ. ಯೋಜನೆಯ ಅನುದಾನವು ಸರಿಯಾಗಿ ಬಳಕೆ ಆಗುತ್ತಿಲ್ಲ ಎಂದು ಮಹಾಲೇಖಪಾಲರು 2016–17ರ ವರದಿಯಲ್ಲಿ ಟೀಕಿಸಿದ್ದರು.

ಹೆಣ್ಣು ಶಿಶುವಿನ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯ ಇದೆ. ಆದರೆ, ಯೋಜನೆಯು ಪರಿಣಾಮಕಾರಿಯಾಗಿ ಜಾರಿ ಆಗುವಂತೆ ಸರ್ಕಾರ ನೋಡಿಕೊಳ್ಳಬೇಕು, ಬದ್ಧತೆ ಪ್ರದರ್ಶಿಸಬೇಕು ಎಂದು ಶಿವಸೇನಾದ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.

‘ಬಿಡುಗಡೆ ಮಾಡುವ ನಿಧಿಯ ಮೇಲೆ ನಿಗಾ ಇರಿಸದಿದ್ದರೆ, ನೀವು ಯೋಜನೆಯನ್ನೇ ಅನುಪಯುಕ್ತ ಮಾಡಿದಂತೆ. ಕೋವಿಡ್‌ ಸಂದರ್ಭದಲ್ಲಿ, ಡಿಜಿಟಲ್‌ ಅಸಮಾನ ತೆಯಿಂದಾಗಿ ಹಲವು ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಬೆಂಬಲ ವ್ಯವಸ್ಥೆ ಬೇಕಾಗಿದೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT