ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ ಹಕ್ಕು; ಸಾರ್ವತ್ರಿಕ ನೀತಿ ಅಸಾಧ್ಯ: ಸುಪ್ರೀಂ ಕೋರ್ಟ್

Last Updated 21 ಸೆಪ್ಟೆಂಬರ್ 2020, 20:33 IST
ಅಕ್ಷರ ಗಾತ್ರ

ನವದೆಹಲಿ: ‘ಜನಸಾಮಾನ್ಯರಿಗೆ ತೊಂದರೆಯಾಗದಂತೆ ಶಾಂತಿ ಯುತ ಪ್ರತಿಭಟನೆ ನಡೆಸುವ ಹಕ್ಕು ಜನರಿಗೆ ಇದೆ. ಆದರೆ, ಅದನ್ನು ಪೂರ್ಣಪ್ರಮಾಣದ ಹಕ್ಕು ಎಂದು ಪ್ರತಿ ಪಾದಿಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಸಿಎಎ ವಿರೋಧಿ ಪ್ರತಿಭಟನೆ ವೇಳೆ ದೆಹಲಿಯ ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಮುಗಿಸಿರುವ ಕೋರ್ಟ್‌, ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣದ ತೀರ್ಪು ಕಾಯ್ದಿರಿಸಿದೆ.

‘ಪ್ರತಿಭಟನೆಯ ಹಕ್ಕು ಮತ್ತು ಪ್ರತಿಭಟನೆಯನ್ನು ತಡೆಯುವ ವಿಧಾನಕ್ಕೆ ಸಂಬಂಧಿಸಿದಂತೆ ಸಾರ್ವತ್ರಿಕ ನೀತಿ ಇರಲು ಸಾಧ್ಯವಿಲ್ಲ. ಅದು ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತದೆ. ಆದ್ದರಿಂದ, ಪ್ರತಿಭಟನೆ ನಡೆಸುವ ಹಕ್ಕು ಮತ್ತು ಸ್ವತಂತ್ರವಾಗಿ ಓಡಾಡುವ ಜನರ ಹಕ್ಕಿನ ಮಧ್ಯೆ ಸಮತೋಲನ ಸಾಧಿಸುವುದು ಅಗತ್ಯ’ ಎಂದಿದೆ.

‘ಸಾರ್ವಜನಿಕ ಪ್ರದೇಶದಲ್ಲಿ ಇಂಥ ಪ್ರತಿಭಟನೆ ನಡೆಸಲು ಅವಕಾಶ ನೀಡಲೇಬಾರದು. ರಸ್ತೆಗಳನ್ನು ತಡೆಯಬಾರದು ಎಂದು ಸೂಚನೆ ನೀಡಿದ ಹೊರತಾಗಿಯೂ ಪ್ರತಿ ಭಟನಾಕಾರರು ನೂರು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು’ ಎಂದು ಪ್ರತಿಭಟನೆಯನ್ನು ವಿರೋಧಿಸಿ ಅರ್ಜಿ ಸಲ್ಲಿಸಿದ್ದ ವಕೀಲರಲ್ಲಿ ಒಬ್ಬರಾದ ಅಮಿತ್‌ ಸಾಹ್ನಿ ವಾದಿಸಿದರು.

‘ಪ್ರತಿಭಟನೆ ಕೊನೆಗೊಂಡಿರುವುದರಿಂದ ಈ ವಿಚಾರ ಅಪ್ರಸ್ತುತ. ಪ್ರತಿಭಟನೆ ನಡೆಸುವುದು ಪೂರ್ಣ ಪ್ರಮಾಣದ ಹಕ್ಕು ಎಂದು ಭಾವಿಸುವಂತಿಲ್ಲ’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದಿಸಿದರು.

‘ಸಂಸದೀಯ ಪ್ರಜಾಪ್ರಭುತ್ವದಲ್ಲಿ ರಸ್ತೆಯಲ್ಲೂ, ಸಂಸತ್ತಿನಲ್ಲೂ ಪ್ರತಿಭಟನೆ ನಡೆಯಬಹುದು. ರಸ್ತೆಗಳಲ್ಲಿ ನಡೆಯುವ ಪ್ರತಿಭಟನೆಯು ಶಾಂತಿಯುತವಾಗಿರಬೇಕು. ಸಿಎಎ ವಿರೋಧಿ ಪ್ರತಿಭಟನೆಯು ಕೆಲವು ಅನಿರೀಕ್ಷಿತ ಸನ್ನಿವೇಶಗಳು ಸೃಷ್ಟಿಯಾಗಿ ಕೊನೆಗೊಂಡಿತು. ಅದು ಯಾರ ಕೈಯಲ್ಲೂ ಇರಲಿಲ್ಲ. ದೇವರೇ ಮಧ್ಯಪ್ರವೇಶಿಸಿದ್ದಾರೆ’ ಎಂದು ನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್‌, ಅನಿರುದ್ಧ ಬೋಸ್‌ ಹಾಗೂ ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠ ಹೇಳಿದೆ.

ಕೋವಿಡ್‌–19ನಿಂದಾಗಿ ಸಿಎಎ ವಿರೋಧಿ ಪ್ರತಿಭಟನೆಗಳು ಸ್ಥಗಿತಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT