ಕೋವಿಡ್ ಮಾರ್ಗಸೂಚಿ ಪಾಲಿಸದಿದ್ದರೆ 6–8 ವಾರಗಳಲ್ಲಿ 3ನೇ ಅಲೆ: ರಣದೀಪ್ ಗುಲೆರಿಯಾ

ನವದೆಹಲಿ: ‘ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸದಿದ್ದರೆ ಮತ್ತು ಜನಸಂದಣಿಯನ್ನು ತಡೆಯದಿದ್ದರೆ ಮುಂದಿನ ಆರರಿಂದ ಎಂಟು ವಾರಗಳಲ್ಲಿ ದೇಶದಲ್ಲಿ ಸೋಂಕಿನ ಮತ್ತೊಂದು ಅಲೆಯು ಆರಂಭಗೊಳ್ಳಬಹುದು’ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಿರ್ದೇಶಕ ರಣದೀಪ್ ಗುಲೆರಿಯಾ ಅವರು ಶನಿವಾರ ಎಚ್ಚರಿಕೆ ನೀಡಿದ್ದಾರೆ.
‘ಗಣನೀಯ ಸಂಖ್ಯೆಯಲ್ಲಿ ಜನರು ಲಸಿಕೆ ಪಡೆಯುವವರೆಗೂ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು. ಒಂದು ವೇಳೆ ಸೋಂಕು ಗಮನಾರ್ಹವಾಗಿ ಉಲ್ಬಣಗೊಂಡರೆ ಮತ್ತು ಕೋವಿಡ್ ದೃಢ ಪ್ರಮಾಣ ಶೇಕಡ 5ಕ್ಕಿಂತ ಹೆಚ್ಚಾದ್ದಲ್ಲಿ ಅಂತಹ ಪ್ರದೇಶಗಳಲ್ಲಿ ಕಠಿಣ ಕಣ್ಗಾವಲು ವ್ಯವಸ್ಥೆ ಕೈಗೊಳ್ಳಬೇಕು ಮತ್ತು ಸ್ಥಳೀಯವಾಗಿ ಲಾಕ್‌ಡೌನ್ ಹೇರಬೇಕು. ರಾಷ್ಟ್ರವ್ಯಾಪ್ತಿ ಲಾಕ್‌ಡೌನ್, ಸೋಂಕು ನಿಯಂತ್ರಣಕ್ಕೆ ಪರಿಹಾರವಲ್ಲ. ನಾವು ದೇಶದ ಆರ್ಥಿಕತೆಯ ಮೇಲೂ ಗಮನಹರಿಸಬೇಕು’ ಎಂದು ಅವರು ಅಭಿಪ್ರಾಯಪಟ್ಟರು.
‘ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ’ ಎಂದು ಅವರು ತಿಳಿಸಿದರು.
‘ಸೆಪ್ಟೆಂಬರ್–ಅಕ್ಟೋಬರ್ ತಿಂಗಳಲ್ಲಿ ಕೋವಿಡ್ ಸೋಂಕಿನ ಮೂರನೇ ಅಲೆಯು ಕಾಣಿಸಿಕೊಳ್ಳಬಹುದು. ಈ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಗಳಿವೆ’ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.