ಸೋಮವಾರ, ಸೆಪ್ಟೆಂಬರ್ 20, 2021
21 °C
ಕಾರ್ಯಾಚರಣೆ ವೇಳೆ ಮಹಿಳೆಯೊಬ್ಬರ ಸಾವು: ಇಬ್ಬರು ಸಿಆರ್‌ಪಿಎಫ್‌ ಸಿಬ್ಬಂದಿಗೆ ಗಾಯ

ಜಮ್ಮು-ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರ ಹತ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ನಗರದ ಬಾಟಾಮಾಲೂ ಪ್ರದೇಶದಲ್ಲಿ ಗುರುವಾರ ಉಗ್ರರು ಹಾಗೂ ಭದ್ರತಾ ಪಡೆ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಸ್ಥಳೀಯ ಉಗ್ರರು ಹತರಾಗಿದ್ದಾರೆ. ಕಾರ್ಯಾಚರಣೆ ವೇಳೆ ಮಹಿಳೆಯೊಬ್ಬರು ಮೃತಪಟ್ಟಿದ್ದು, ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. 

ಈ ವರ್ಷ ಈ ಭಾಗದಲ್ಲಿ ಉಗ್ರರ ವಿರುದ್ಧ 72 ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ಇದರಲ್ಲಿ ಗಡಿಯಾಚೆಗಿನ 22 ಉಗ್ರರು ಸೇರಿದಂತೆ ಒಟ್ಟು 177 ಉಗ್ರರು ಹತರಾಗಿದ್ದಾರೆ. ಬಾಟಾಮಾಲೂ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇಲೆ ಬುಧವಾರ ತಡರಾತ್ರಿ 2.30ರ ವೇಳೆಗೆ ಈ ಪ್ರದೇಶವನ್ನು ಸಿಬ್ಬಂದಿ ಸುತ್ತುವರಿದಿದ್ದರು. ಈ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದಾಗ, ಸಿಬ್ಬಂದಿ ಪ್ರತಿದಾಳಿ ನಡೆಸಿದ್ದಾರೆ. 

‘ಈ ಸಂದರ್ಭದಲ್ಲಿ 45 ವರ್ಷದ ಕೌನ್ಸರ್‌ ರಿಯಾಜಾ ಎಂಬುವವರು ಮೃತಪಟ್ಟಿದ್ದಾರೆ. ಮೃತಪಟ್ಟ ಮೂವರು ಉಗ್ರರೂ ದಕ್ಷಿಣ ಕಾಶ್ಮೀರದವರು. ಶರಣಾಗುವಂತೆ ಸೂಚಿಸಿದ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದರು. ಘಟನೆಯಲ್ಲಿ ಗಾಯಗೊಂಡ ಸಿಆರ್‌ಪಿಎಫ್‌ ಅಧಿಕಾರಿಯೊಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಮಹಾ ನಿರ್ದೇಶಕ ದಿಲ್ಬಾಗ್‌ ಸಿಂಗ್‌ ಗುರುವಾರ ಹೇಳಿದರು.  

ಶೀಘ್ರವೇ ಡಿಎನ್‌ಎ ವರದಿ: ಶೋಪಿಯನ್‌ನಲ್ಲಿ ನಡೆದ ನಕಲಿ ಎನ್‌ಕೌಂಟರ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಜೌರಿ ಪ್ರದೇಶದ ಮೂರು ಕುಟುಂಬ ಸದಸ್ಯರ ಡಿಎನ್‌ಎ ವರದಿ ಇನ್ನು ಕೆಲವೇ ದಿನಗಳಲ್ಲಿ ಬಹಿರಂಗಗೊಳಿಸಲಾಗುವುದು ಎಂದು ಸಿಂಗ್‌ ಮಾಹಿತಿ ನೀಡಿದರು. 

ಜು.18ರಂದು ದಕ್ಷಿಣ ಕಾಶ್ಮೀರದ ಶೋಪಿಯನ್‌ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆ ತಿಳಿಸಿತ್ತು. ಇದಾದ ನಂತರದಲ್ಲಿ ಶೋಪಿಯನ್‌ನ ಸೇಬಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಕುಟುಂಬದ ತಲಾ ಒಬ್ಬ ಸದಸ್ಯ ಕಾಣೆಯಾಗಿದ್ದಾನೆ ಎಂದು ರಜೌರಿಯಲ್ಲಿ ಮೂರು ಕುಟುಂಬಗಳು ಪೊಲೀಸ್‌ ದೂರು ನೀಡಿದ್ದವು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು