ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಟೆಗಾರರ ಗುಂಡಿನ ದಾಳಿ: ಮೂವರು ಪೊಲೀಸರ ಹತ್ಯೆ

ಸಿ.ಎಂ ತುರ್ತು ಸಭೆ; ಮೃತರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ
Last Updated 14 ಮೇ 2022, 10:58 IST
ಅಕ್ಷರ ಗಾತ್ರ

ಭೋಪಾಲ್‌(ಪಿಟಿಐ): ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಬೇಟೆಗಾರರ ಗುಂಡಿನ ದಾಳಿಗೆ ಸಬ್‌ ಇನ್ಸ್‌ಪೆಕ್ಟರ್‌ ಸೇರಿ ಮೂವರು ಪೊಲೀಸರು ಹುತಾತ್ಮರಾದ ಘಟನೆ ಶನಿವಾರ ನಸುಕಿನಲ್ಲಿ ನಡೆದಿದೆ.

ಮೃತರನ್ನು ಎಸ್‌ಐ ರಾಜ್‌ಕುಮಾರ್‌ ಜಾಟವ್‌, ಕಾನ್ಸ್‌ಟೆಬಲ್‌ಗಳಾದ ನೀಲೇಸ್‌ ಭಾರ್ಗವಾ ಮತ್ತು ಶಾಂತಾರಾಮ್‌ ಮೀನಾ ಎಂದು ಗುರುತಿಸಲಾಗಿದೆ.

ರಾಜ್ಯ ರಾಜಧಾನಿಯಿಂದ ಸುಮಾರು 160 ಕಿ.ಮೀ ದೂರದ ಅರಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾಗಾ ಬರ್ಖೇಡಾ ಗ್ರಾಮದ ಶಹರೋಕ್‌ ರಸ್ತೆಯಲ್ಲಿಮುಂಜಾನೆ 3 ಗಂಟೆ ಸುಮಾರಿಗೆ, ಖಚಿತ ಮಾಹಿತಿ ಆಧರಿಸಿ ಪೊಲೀಸರುಬೇಟೆಗಾರರ ಬಂಧನಕ್ಕೆ ಬೆನ್ನಟ್ಟಿಹೋಗಿದ್ದರು. ಬೇಟೆಗಾರರನ್ನು ಪೊಲೀಸರು ಸುತ್ತುವರಿದಾಗ, ದುಷ್ಕರ್ಮಿಗಳು ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ’ ಎಂದು ಸಚಿವ ಮಿಶ್ರಾ ಸುದ್ದಿಗಾರರಿಗೆ ತಿಳಿಸಿದರು.

ಘಟನೆಯಲ್ಲಿ ಭಾಗಿಯಾಗಿರುವ ಶಂಕಿತ ಮತ್ತು ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಮೃತಪಟ್ಟ ವ್ಯಕ್ತಿಯ ಶವ ಸಮೀಪದ ಬಿದೋರಿಯಾ ಗ್ರಾಮದಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಪೊಲೀಸರು ಮತ್ತು ಕಳ್ಳ ಬೇಟೆಗಾರರ ನಡುವೆ ಗುಂಡಿನ ದಾಳಿ ನಡೆದ ಸ್ಥಳದಿಂದ ನಾಲ್ಕು ಜಿಂಕೆ ಮತ್ತು ನವಿಲಿನ ಮೃತ ದೇಹಗಳು ಸಹ ಪತ್ತೆಯಾಗಿವೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಿ.ಎಂ ಉನ್ನತ ಸಭೆ: ಪರಿಹಾರ ಘೋಷಣೆ

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘಟನೆ ಸಂಬಂಧ ತಮ್ಮ ನಿವಾಸದಲ್ಲಿ ಉನ್ನತ ಸಭೆ ನಡೆಸಿದರು.‌ ಹುತಾತ್ಮರಾದ ಪ್ರತಿ ಪೊಲೀಸರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದರು.

ಘಟನೆ ನಡೆದ ಸ್ಥಳ ತಲುಪಲು ವಿಳಂಬ ಮಾಡಿದ್ದಕ್ಕೆ ಗ್ವಾಲಿಯರ್ ವಲಯದ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಅನಿಲ್ ಶರ್ಮಾ ಅವರನ್ನು ಚೌಹಾಣ್ ಇದೇ ವೇಳೆ ವರ್ಗಾವಣೆ ಮಾಡಿದರು.

ಸಭೆಯ ನಂತರ ಗೃಹ ಸಚಿವ ಮಿಶ್ರಾ, ‘ಘಟನೆಯಲ್ಲಿ ಭಾಗಿಯಾದ ಏಳು ಬೇಟೆಗಾರರು ಮತ್ತು ದುಷ್ಕರ್ಮಿಗಳನ್ನು ಗುರುತಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಘಟನೆಯು ದುಃಖಕರ ಮತ್ತು ಹೃದಯವಿದ್ರಾವಕವಾಗಿದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ’ ಎಂದು ಮಿಶ್ರಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT