ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತ್ರಪಕ್ಷ ದೊಡ್ಡಣ್ಣ, ದೊಡ್ಡಪ್ಪನಂತೆ ವರ್ತಿಸಬಾರದು: ಟಿಎಂಸಿ

Last Updated 12 ಜನವರಿ 2022, 19:50 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಗೋವಾದಲ್ಲಿ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳ ಮಹಾಮೈತ್ರಿಕೂಟ ರಚಿಸುವುದನ್ನು ಟಿಎಂಸಿ ವಿರೋಧಿಸುವುದಿಲ್ಲ. ಆದರೆ ಯಾವ ಪಕ್ಷವೂ ದೊಡ್ಡಣ್ಣನ ರೀತಿಯಲ್ಲಿ ವರ್ತಿಸಬಾರದು’ ಎಂದು ಗೋವಾ ಟಿಎಂಸಿ ಉಸ್ತುವಾರಿ ಸುಷ್ಮಿತಾ ದೇವ್ ಹೇಳಿದ್ದಾರೆ.

ಗೋವಾ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜತೆಗೆ ಟಿಎಂಸಿ ಮೈತ್ರಿ ಮಾಡಿಕೊಳ್ಳುತ್ತದೆ ಎಂಬುದರ ಬಗ್ಗೆ ವರದಿಯಾಗುತ್ತಿರುವ ವದಂತಿಗಳಿಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

‘2017ರ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಪಡೆದ ಪಕ್ಷವಾಗಿ ಹೊರಹೊಮ್ಮಿದರೂ, ಸರ್ಕಾರವನ್ನು ರಚಿಸುವಲ್ಲಿ ವಿಫಲವಾಯಿತು. ಐದು ವರ್ಷಗಳಾದರೂ ಕಾಂಗ್ರೆಸ್‌ ಈ ಬಗ್ಗೆ ಜನರಿಗೆ ಉತ್ತರ ನೀಡಿಲ್ಲ. ಜನರಿಗೆ ಬಿಜೆಪಿ ಬೇಡವಾಗಿದೆ. ಆದರೆ, ಕಾಂಗ್ರೆಸ್‌ನ ಬಗ್ಗೆ ಜನರಲ್ಲಿ ವಿಶ್ವಾಸವಿಲ್ಲ’ ಎಂದು ಅವರು ಹೇಳಿದ್ದಾರೆ.

‘ಇಂತಹ ಸ್ಥಿತಿಯಲ್ಲಿ ಟಿಎಂಸಿ ಇಲ್ಲಿ ಕಣಕ್ಕೆ ಇಳಿಯುತ್ತಿದೆ. ಆದರೆ ನಾವು ಇಲ್ಲಿ ಕಾಂಗ್ರೆಸ್‌ ಮತಗಳನ್ನು ಕಸಿಯುತ್ತೇವೆ ಎಂದು ಆ ಪಕ್ಷ ಆರೋಪಿಸುತ್ತಿದೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಪಕ್ಷಗಳನ್ನು ಕಾಂಗ್ರೆಸ್‌ ಕಸಿದುಕೊಂಡಿತ್ತು. ಇದರಿಂದಲೇ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವುದು ಸಾಧ್ಯವಾಯಿತು’ ಎಂದು ಅವರು ಟೀಕಿಸಿದ್ದಾರೆ.

‘ವಿರೋಧ ಪಕ್ಷಗಳ ಮಹಾಮೈತ್ರಿಕೂಟದಿಂದ ಬಹಳ ಪ್ರಯೋಜನವಿದೆ. ಆದರೆ, ಯಾವ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂಬುದು ಮುಖ್ಯ. ಪ್ರಬಲವಾದ ಪಕ್ಷದ ಜತೆಗಷ್ಟೇ ಮೈತ್ರಿ ಮಾಡಿಕೊಳ್ಳಬೇಕು. ಕಾಂಗ್ರೆಸ್‌ ಆಗಿರಲಿ ಅಥವಾ ಬೇರೆ ಪಕ್ಷವೇ ಆಗಿರಲಿ. ಅದು ರಾಷ್ಟ್ರೀಯ ಪಕ್ಷವೇ ಆಗಿರಲಿ ಅಥವಾ ಪ್ರಾದೇಶಿಕ ಪಕ್ಷವೇ ಆಗಿರಲಿ. ಆ ಪಕ್ಷವು ತನ್ನ ಸಾಮರ್ಥ್ಯವನ್ನು ಅರಿತುಕೊಂಡು ವರ್ತಿಸಬೇಕು. ಇಲ್ಲಿ ಎಲ್ಲರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಪರಿಗಣಿಸಬೇಕು’ ಎಂದು ಅವರು ಹೇಳಿದ್ದಾರೆ.

‘ಮೈತ್ರಿಕೂಟದ ಪಕ್ಷಗಳು ಸಮಾನ ಮನಸ್ಕವಾಗಿರಬೇಕು. ಇಲ್ಲಿ ಯಾವ ಪಕ್ಷಗಳೂ ದೊಡ್ಡಪ್ಪನಂತೆ ವರ್ತಿಸಬಾರದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT