ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಹೆ, ಅನುಮಾನಗಳ ಆಧಾರದಲ್ಲಿ ವಿಚಾರಣೆಯ ವರ್ಗಾವಣೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌

Last Updated 17 ಅಕ್ಟೋಬರ್ 2020, 10:56 IST
ಅಕ್ಷರ ಗಾತ್ರ

ನವದೆಹಲಿ: ಸಮರ್ಪಕ ವಿಚಾರಣೆ ನಡೆಯುವುದಿಲ್ಲ ಎಂಬ ಬಗ್ಗೆ ನಂಬಲರ್ಹ ಅಂಶಗಳು ಇದ್ದಾಗ ಮಾತ್ರ ಪ್ರಕರಣವೊಂದರ ವಿಚಾರಣೆಯನ್ನು ಬೇರೊಂದು ಕೋರ್ಟ್‌ಗೆ ವರ್ಗಾಯಿಸಲು ಸಾಧ್ಯ. ಕೇವಲ ಊಹೆ ಮತ್ತು ಅನುಮಾನಗಳ ಆಧಾರದಲ್ಲಿ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

‘ನಿಷ್ಪಕ್ಷಪಾತ ವಿಚಾರಣೆ ನಡೆಯುತ್ತದೆ ಎಂಬ ಬಗ್ಗೆ ನೀಡುವ ಭರವಸೆಯನ್ನು ಮೊದಲು ಗೌರವಿಸಬೇಕು. ಸೂಕ್ಷ್ಮಮನಸ್ಸಿನ ವ್ಯಕ್ತಿ ಆತಂಕ ವ್ಯಕ್ತಪಡಿಸುತ್ತಾನೆ ಎಂಬ ಕಾರಣಕ್ಕೆ, ವಿಚಾರಣೆಯನ್ನು ವರ್ಗಾಯಿಸುವಂತೆ ಕೋರಿ ಆತ ಸಲ್ಲಿಸುವ ಅರ್ಜಿಯನ್ನು ಪರಿಗಣಿಸಬಾರದು‘ ಎಂದು ನ್ಯಾಯಮೂರ್ತಿ ಹೃಷಿಕೇಶ್ ರಾಯ್‌ ಅವರಿರುವ ಏಕಸದಸ್ಯ ನ್ಯಾಯಪೀಠ ಹೇಳಿತು.

ತಮ್ಮ ವಿರುದ್ಧ ಉತ್ತರಾಖಂಡದ ವಿವಿಧ ಕೋರ್ಟ್‌ಗಳಲ್ಲಿ ಮೂರು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ದೆಹಲಿ ಅಥವಾ ಇತರ ಕೋರ್ಟ್‌ಗಳಿಗೆ ಈ ವಿಚಾರಣೆ ವರ್ಗಾಯಿಸುವಂತೆ ಕೋರಿ ಪತ್ರಕರ್ತ ಉಮೇಶಕುಮಾರ್‌ ಶರ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಈ ಹಂತದಲ್ಲಿ ಬೇರೆ ರಾಜ್ಯದ ಕೋರ್ಟ್‌ಗೆ ವಿಚಾರಣೆಯನ್ನು ವರ್ಗಾಯಿಸುವುದು ಸಾಧ್ಯವಿಲ್ಲ. ಹೀಗೆ ಮಾಡಿದರೆ ಉತ್ತರಾಖಂಡ ರಾಜ್ಯದ ನ್ಯಾಯಾಂಗದ ವಿಶ್ವಾಸಾರ್ಹತೆ ಮೇಲೆ ಪರಿಣಾಮ ಬೀರುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

‘ಉತ್ತರಾಖಂಡದ ಮುಖ್ಯಮಂತ್ರಿ ವಿರುದ್ಧ ರಹಸ್ಯ ಕಾರ್ಯಾಚರಣೆ ನಡೆಸಿದ್ದೆ. ಈ ಕಾರಣಕ್ಕಾಗಿ ಪ್ರತೀಕಾರ ತೆಗೆದುಕೊಳ್ಳುವ ಉದ್ದೇಶದಿಂದನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಶರ್ಮಾ, ನ್ಯಾಯಪೀಠದ ಎದುರು ಆತಂಕ ವ್ಯಕ್ತಪಡಿಸಿದ್ದರು.

ಶರ್ಮಾ ಅವರು ‘ಸಮಾಚಾರ್‌ ಪ್ಲಸ್‌’ ಎಂಬ ಚಾನೆಲ್‌ನ ಪತ್ರಕರ್ತ. 2016ರಲ್ಲಿ ಹರೀಶ್‌ ರಾವತ್‌ ನೇತೃತ್ವದ ಸರ್ಕಾರವನ್ನು ಉರುಳಿಸುವ ಸಂಬಂಧ ರಹಸ್ಯ ಕಾರ್ಯಾಚರಣೆ ನಡೆಸಿದ್ದ ಆರೋಪದ ಮೇಲೆ ಶರ್ಮಾ ಅವರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT