ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯೋಗಿ ಸಾಧನೆ ಬಿಂಬಿಸಲು ಬಂಗಾಳದ ಚಿತ್ರ‘ ವಿವಾದದ ಕಿಡಿ ಹೊತ್ತಿಸಿದ ಜಾಹೀರಾತು

Last Updated 12 ಸೆಪ್ಟೆಂಬರ್ 2021, 12:04 IST
ಅಕ್ಷರ ಗಾತ್ರ

ಕೋಲ್ಕತ್ತ: ಉತ್ತರ ಪ್ರದೇಶವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದಲ್ಲಿ ಆಗಿರುವ ಅಭಿವೃದ್ಧಿ ಬಿಂಬಿಸುವ ಜಾಹೀರಾತಿನಲ್ಲಿ ಕೋಲ್ಕತ್ತದ ಮೇಲ್ಸೇತುವೆಯ ಚಿತ್ರ ಬಳಸಿರುವುದು ಈಗ ವಿವಾದದ ಕಿಡಿ ಹೊತ್ತಿಸಿದೆ.

ಪಶ್ಚಿಮ ಬಂಗಾಳದಬಿಜೆಪಿ ಘಟಕವು, ಉಲ್ಲೇಖಿಸಿದ ಮೇಲ್ಸೇತುವೆ ಚಿತ್ರವು ಕೋಲ್ಕತ್ತದ್ದೇ ಎಂಬುದು ಇನ್ನೂ ದೃಢಪಡಬೇಕಾಗಿದೆ ಎಂದು ಪ್ರತಿಕ್ರಿಯಿಸಿದೆ. ಯೋಗಿ ಆದಿತ್ಯನಾಥ ಅವರ ಚಿತ್ರವನ್ನು ಒಳಗೊಂಡಿದ್ದ ಜಾಹೀರಾತಿನಲ್ಲಿ ಮೇಲ್ಸೇತುವೆ ಮತ್ತು ಗಗನಚುಂಬಿ ಕಟ್ಟಡದ ಚಿತ್ರವನ್ನು ಬಳಸಲಾಗಿತ್ತು.

ಈ ಜಾಹೀರಾತು ಪ್ರಕಟಿಸಿದ್ದ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆ ತಿದ್ದುಪಡಿ ಪ್ರಕಟಿಸಿದೆ. ‘ಉತ್ತರ ಪ್ರದೇಶ ಕುರಿತ ಜಾಹೀರಾತಿನಲ್ಲಿ ಸಂಬಂಧವಿಲ್ಲದ ಚಿತ್ರವನ್ನು ಪತ್ರಿಕೆಯ ಮಾರುಕಟ್ಟೆ ವಿಭಾಗ ಬಳಸಿದೆ. ಈ ಲೋಪಕ್ಕೆ ವಿಷಾದಿಸುತ್ತೇವೆ, ಉಲ್ಲೇಖಿತ ಚಿತ್ರವನ್ನು ಪತ್ರಿಕೆಯ ಡಿಜಿಟಲ್‌ ಆವೃತ್ತಿಗಳಿಂದ ತೆಗೆಯಲಾಗಿದೆ’ ಎಂದು ತಿಳಿಸಿದೆ.

ಜಾಹೀರಾತಿಗೆ ಸಂಬಂಧಿಸಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಟಿಎಂಸಿ, ಜಾಹೀರಾತಿನ ಮೂಲಕ ಬಿಜೆಪಿಯು ಪರೋಕ್ಷವಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಒಪ್ಪಿಕೊಂಡಿದೆ ಮತ್ತು ಇದನ್ನು ಸೂಕ್ತವಾಗಿ ಬಳಕೆ ಮಾಡಿಕೊಂಡಿದೆ ಎಂದು ತಿಳಿಸಿದೆ.

ಪಶ್ಚಿಮ ಬಂಗಾಳ ಬಿಜೆಪಿ ಘಟಕ ಪ್ರಧಾನ ಕಾರ್ಯದರ್ಶಿ ಸಯಾಂತನ್‌ ಬಸು ಅವರು, ‘ಒಂದು ವೇಳೆ ಉಲ್ಲೇಖಿತ ಮೇಲ್ಸೇತುವೆ ಚಿತ್ರ ಪಶ್ಚಿಮ ಬಂಗಾಳದ್ದೇ ಎಂದುಕೊಂಡರೂ, ರಾಜ್ಯದಲ್ಲಿ ಇದನ್ನು ಹೊರತುಪಡಿಸಿ ಬೇರಾವುದೇ ಅಭಿವೃದ್ಧಿಯಾಗಿಲ್ಲ. ಉತ್ತರ ಪ್ರದೇಶದಲ್ಲಿ ಅನೇಕ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಅನೇಕ ಮೇಲ್ಸೇತುವೆಗಳು ಕುಸಿದಿವೆ’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT