ಸೋಮವಾರ, ಜನವರಿ 18, 2021
22 °C

26/11 ಮುಂಬೈ ದಾಳಿ ಕೃತ್ಯಕ್ಕೆ 12 ವರ್ಷ; ಹುತಾತ್ಮರ ತ್ಯಾಗ ಸ್ಮರಣೆ, ನುಡಿನಮನ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈನಲ್ಲಿರುವ ಗೇಟ್‌ವೇ ಆಫ್‌ ಇಂಡಿಯಾ ಮತ್ತು ತಾಜ್‌ ಹೋಟೆಲ್‌

ಮುಂಬೈ: 12 ವರ್ಷಗಳ ಹಿಂದೆ, ಇದೇ ದಿನ ನಡೆದಿದ್ದ ಮುಂಬೈ ದಾಳಿ ಘಟನೆಯಲ್ಲಿ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾಗಿದ್ದ ಯೋಧರಿಗೆ ಗುರುವಾರ ಗೌರವ ಸಲ್ಲಿಸಲಾಯಿತು.

‘ಯೋಧರ ತ್ಯಾಗವು ಇತಿಹಾಸ ಮತ್ತು ಸ್ಮೃತಿಪಟಲದಿಂದ ಎಂದಿಗೂ ಮರೆಯಾಗುವುದಿಲ್ಲ. ನಮ್ಮ ಉಳಿವಿವಾಗಿ ತ್ಯಾಗ ಮಾಡಿ ಹುತಾತ್ಮರಾದ ಯೋಧರಿಗೆ ನಮ್ಮ ನಮನಗಳು’ ಎಂದು ‌ಮುಂಬೈನ ಪೊಲೀಸರು ಸ್ಮರಿಸಿದ್ದಾರೆ.

2008ರ ನವೆಂಬರ್‌ 26ರಂದು ನಡೆದಿದ್ದ ಘಟನೆಯಲ್ಲಿ ಹುತಾತ್ಮರಾಗಿದ್ದ ಯೋಧರು, ಪೊಲೀಸ್ ಸಿಬ್ಬಂದಿಯ ತ್ಯಾಗವನ್ನು ಸ್ಮರಿಸಿ ಹಲವು ಪ್ರಮುಖರು ನುಡಿನಮನ ಸಲ್ಲಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್ ಕೋಶಿಯಾರಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಗೃಹ ಸಚಿವ ಅನಿಲ್ ದೇಶಮುಖ್, ಪರಿಸರ ಸಚಿವ ಅದಿತ್ಯ ಠಾಕ್ರೆ ಪೊಲೀಸ್‌ ಕೇಂದ್ರ ಕಚೇರಿ ಆವರಣದಲ್ಲಿನ ಹುತಾತ್ಮರ ನೂತನ ಸ್ಮಾರಕಕ್ಕೆ ನಮಿಸಿದರು.

ಹುತಾತ್ಮರ ಕುಟುಂಬದ ಸದಸ್ಯರೂ ಭಾಗಿಯಾಗಿದ್ದರು. ಈ ಮುನ್ನ ಪೊಲೀಸ್ ಜಿಮ್ಖಾನಾದಲ್ಲಿ ಇದ್ದ ಹುತಾತ್ಮರ ಸ್ಮಾರಕವನ್ನು ಕರಾವಳಿ ರಸ್ತೆ ಕಾಮಗಾರಿ ಚಾಲ್ತಿಯಲ್ಲಿರುವ ಕಾರಣ ಪೊಲೀಸ್ ಮುಖ್ಯ ಕಚೇರಿ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು.

ದಾಳಿಯಲ್ಲಿ ಮೃತಪಟ್ಟವರನ್ನು ಸ್ಮರಿಸಿದ ಪೊಲೀಸ್ ಕಮೀಷನರ್ ಪರಂ ವೀರ್ ಸಿಂಗ್ ಅವರು, ನಮ್ಮ ರಕ್ಷಣೆಗಾಗಿ ಜೀವತ್ಯಾಗ ಮಾಡಿದ ಧೈರ್ಯಶಾಲಿ ಯೋಧರು, ಪೊಲೀಸರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೂ ಗೌರವ ಸಲ್ಲಿಸಿದ್ದು, ‘ದಾಳಿ ಘಟನೆಯಲ್ಲಿ ಮೃತರಾದವರ ಕುಟುಂಬ ಸದಸ್ಯರಿಗೆ ನಮ್ಮ ಸಂತಾಪಗಳು. ಭಯೋತ್ಪಾದಕರ ವಿರುದ್ಧದ ಹೋರಾಟವನ್ನು ಇನ್ನಷ್ಟು ಚುರುಕುಗೊಳಿಸಬೇಕು’ ಎಂದು ಹೇಳಿದರು.

12 ವರ್ಷಗಳ ಹಿಂದೆ ಇದೇ ದಿನ ಪಾಕಿಸ್ತಾನದಿಂದ ಸಮುದ್ರ ಮಾರ್ಗದಲ್ಲಿ ಬಂದಿದ್ದ ಲಷ್ಕರ್ ಎ ತೊಯ್ಬಾ ಸಂಘಟನೆಯ ಉಗ್ರರು ದಾಳಿ ನಡೆಸಿದ್ದರು. 60 ಗಂಟೆ ಕಾರ್ಯಾಚರಣೆ ನಡೆದಿತ್ತು. 18 ಭದ್ರತಾ ಸಿಬ್ಬಂದಿ ಸೇರಿ 166 ಜನರು ಮೃತಪಟ್ಟಿದ್ದರು.

ಭಯೋತ್ಪಾದನಾ ವಿರೋಧಿ ಪಡೆಯ ಮುಖ್ಯಸ್ಥ ಹೇಮಂತ್ ಕರ್ಕರೆ, ಸೇನಾ ಮೇಜರ್ ಸಂದೀಪ್‌ ಉನ್ನಿಕೃಷ್ಣನ್, ಮುಂಬೈ ಹೆಚ್ಚುವರಿ ಪೊಲೀಸ್ ಕಮಿಷನರ್ ಅಶೋಕ್ ಕಾಮ್ಟೆ, ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ವಿಜಯ ಸಲಾಸ್ಕರ್‌, ಎಎಸ್‌ಐ ತುಕಾರಾಂ ಒಂಬ್ಲೆ ಅವರು ಮೃತಪಟ್ಟವರಲ್ಲಿ ಸೇರಿದ್ದರು.

ಮುಂಬೈನಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ಒಬೆರಾಯ್‌ ಟ್ರಿಡೆಂಟ್ ತಾರಾ ಹೋಟೆಲ್, ಲಿಯೊಪೊಲ್ಡ್ ಕೆಫೆ, ಕ್ಯಾಮಾ ಹಾಸ್ಪಿಟಲ್, ನಾರಿಮನ್ ಹೌಸ್‌ ಅನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಒಂಬತ್ತು ಉಗ್ರರು ಹತರಾಗಿದ್ದರು.

ದಾಳಿಯಲ್ಲಿ ಜೀವಂತವಾಗಿ ಸಿಕ್ಕುಬಿದ್ದಿದ್ದ ಉಗ್ರ ಅಜ್ಮಲ್ ಕಸಬ್‌ನನ್ನು, 2012ರ ನವೆಂಬರ್ 21ರಂದು ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು